ADVERTISEMENT

ಚಾಮರಾಜನಗರ | ಪದೇಪದೇ ದುರಸ್ತಿ; ಕುಡಿಯುವ ನೀರಿಗೆ ತಾಪತ್ರಯ

ಜವಾಬ್ದಾರಿ ಮರೆತ ಸ್ಥಳೀಯ ಆಡಳಿತ; ನಿರ್ವಹಣೆ ಕೊರತೆಯಿಂದ ಕೆಟ್ಟುನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:24 IST
Last Updated 13 ಅಕ್ಟೋಬರ್ 2025, 2:24 IST
ಚಾಮರಾಜನಗರದ ರಾಮಸಮುದ್ರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತಿರುವುದು
ಚಾಮರಾಜನಗರದ ರಾಮಸಮುದ್ರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತಿರುವುದು   

ಚಾಮರಾಜನಗರ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ನಗರ, ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನಿರ್ಮಾಣ ಮಾಡಲಾಗಿರುವ ಶುದ್ಧ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಘಟಕಗಳ ನಿರ್ವಹಣೆಯ ಹೊಣೆ ಹೊತ್ತಿರುವ ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯದಿಂದ ಯೋಜನೆಯ ಮೂಲ ಉದ್ದೇಶ ಸಾಕಾರಗೊಳ್ಳುತ್ತಿಲ್ಲ.

ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೆಆರ್‌ಐಡಿಎಲ್‌, ಸಹಕಾರ ಸಂಘಗಳು, ಗ್ರಾಮ ಪಂಚಾಯಿತಿಗಳು, ನಗರ ಭಾಗಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ನೀರಿನ ಘಟಕಗಳನ್ನು ನಿರ್ಮಾಣ ಮಾಡಿದ್ದು ನಿರ್ವಹಣೆ ಹೊಣೆ ಹೊತ್ತುಕೊಂಡಿವೆ. ಆದರೆ, ಪದೇಪದೇ ಘಟಕಗಳು ದುರಸ್ತಿಗೆ ಬರುತ್ತಿದ್ದು ಸ್ಥಳೀಯ ಆಡಳಿತಕ್ಕೆ ಆರ್ಥಿಕ ಹೊರೆಯಾದರೆ, ಸಾರ್ವಜನಿಕರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. 

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 16 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ನಾಲ್ಕಕ್ಕೂ ಹೆಚ್ಚು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅಂತರ್ಜಲ ಕುಸಿದ ಪರಿಣಾಮ ಕೆಲವು ಘಟಕಗಳು ದಿನದ 24 ತಾಸು ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಘಟಕಗಳು ತಿಂಗಳಿಗೊಮ್ಮೆ ದುರಸ್ತಿಗೆ ಬರುತ್ತಿವೆ. 

ADVERTISEMENT

ನಗರದ 11 ವಾರ್ಡ್‌ ವ್ಯಾಪ್ತಿಯ ಬುದ್ಧ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದೆ. ನೀರು ಮರು ಫಿಲ್ಟರ್ ಆಗುತ್ತಿಲ್ಲ, ಈಗಾಗಲೇ 5 ಬಾರಿ ಘಟಕ ದುರಸ್ತಿಯಾಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ನಿರ್ವಹಣೆ ಹೊಣೆ ಹೊತ್ತಿರುವ ವಾಟರ್‌ಮನ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಾರ್ಡ್‌ನ ಬೇರೊಂದು ಕಡೆ ಘಟಕ ಅಳವಡಿಕೆಗೆ ನಗರಸಭೆಗೆ ಮನವಿ ಮಾಡಲಾಗಿದೆ ಎನ್ನುತ್ತಾರೆ ವಾರ್ಡ್‌ ಸದಸ್ಯ ಮಂಜುನಾಥ್‌.

3ನೇ ವಾರ್ಡ್‌ ವ್ಯಾಪ್ತಿಯ ಗಾಳಿಪುರದ ದೇವಸ್ಥಾನದ ಬಳಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕವನ್ನು ತೆರವುಗೊಳಿಸಿ 2 ವರ್ಷವಾದರೂ ಬೇರೆಡೆ ಅಳವಡಿಸಿಲ್ಲ. ನಗರಸಭೆಯ ಜಾಗದಲ್ಲಿ ಬೇಸ್‌ಮೆಂಟ್‌ ಕಟ್ಟಲಾಗಿದ್ದರೂ ಅಧಿಕಾರಿಗಳು ಘಟಕ ಅಳವಡಿಕೆಗೆ ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸದಸ್ಯ ಮಹಮ್ಮದ್ ಅಮೀಕ್.

25ನೇ ವಾರ್ಡ್‌ ವ್ಯಾಪ್ತಿಯ ಭಗೀರಥ ನಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾದರೂ ಸಾರ್ವಜನಿಕರ ಸೇವೆಗೆ ಮುಕ್ತವಾಗಿಲ್ಲ. ಪೈಪ್‌ ಅಳವಡಿಕೆ ಸಹಿತ ಇತರೆ ಕಾಮಗಾರಿಗಳು ಬಾಕಿ ಇದ್ದು ಶೀಘ್ರ ಮುಕ್ತಾಯವಾಗಲಿದೆ ಎನ್ನುತ್ತಾರೆ ವಾರ್ಡ್‌ ಸದಸ್ಯೆ.

ಚಾಮರಾಜನಗರಕ್ಕೆ ಸದ್ಯ 10 ರಿಂದ 15 ದಿನಗಳಿಗೊಮ್ಮೆ ಕಾವೇರಿ ನೀರು ಸರಬರಾಜಾಗುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವ ಸಂದರ್ಭದಲ್ಲಿ ₹ 5ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರು ಪೂರೈಸುವ ಘಟಕಗಳು ಹೆಚ್ಚು ಉಪಯುಕ್ತವಾಗಿವೆ. ಆದರೆ, ನಗರಸಭೆ ಸಿಬ್ಬಂದಿ ಸಮರ್ಪಕವಾಗಿ ಘಟಕಗಳ ನಿರ್ವಹಣೆ ಮಾಡದೆ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. 

ಖಾಸಗಿ ವ್ಯಕ್ತಿಗಳು ಹಾಗೂ ಸಂಘ–ಸಂಸ್ಥೆಗಳು ನಡೆಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ನಗರಸಭೆ ನಿರ್ವಹಣೆಗೊಳಪಟ್ಟ ಘಟಕಗಳು ಮಾತ್ರ ಪದೇಪದೇ ದುರಸ್ತಿಗೆ ಬರಲು ಕಾರಣ ಏನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ರಾಮಸಮುದ್ರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಐದು ವರ್ಷಗಳ ಹಿಂದೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತು 4 ವರ್ಷಗಳು ಕಳೆದಿವೆ. ನಿರ್ಮಿತಿ ಕೇಂದ್ರದಿಂದ ನಿರ್ಮಾಣವಾದ ಘಟಕದ ನಿರ್ವಹಣೆ ಯಾರಿಗೆ ಸೇರಿದ್ದು ಎಂಬ ಮಾಹಿತಿಯೇ ಇಲ್ಲ.

ನಿರ್ಮಿತಿ ಕೇಂದ್ರವಾಗಲಿ, ನಗರಸಭೆಯಾಗಲಿ ನಿರ್ವಹಣೆಗೆ ಮುಂದಾಗದೆ ಅನಾಥವಾಗಿ ಬಿದ್ದಿದೆ. ಈ ಭಾಗದ ಜನರು ನೀರಿಗಾಗಿ ಸೇಂಟ್‌ ಫ್ರಾನ್ಸಿಸ್‌ ಶಾಲೆ ಬಳಿ ಇರುವ ಹಾಗೂ ಚೆನ್ನಾಪುರ ಮೊಳೆ ರಸ್ತೆಯಲ್ಲಿರುವ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅವಂಬಿಸಿದ್ದಾರೆ. 

ಹನೂರು ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗಳು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕೆಲವು ಕೆಟ್ಟುನಿಂತಿವೆ.

ಪಟ್ಟಣ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿರಯವ ಘಟಕ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 44 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಇವುಗಳ ಪೈಕಿ ಅಜ್ಜೀಪುರ, ದೊಮ್ಮನಗದ್ದೆ, ರಾಮಾಪುರ, ಮಾರ್ಟಳ್ಳಿ, ಮೇಡು ತೇರು, ಬೈರನತ್ತ, ಕೂಡಲೂರು, ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಸೂಳೇರಿ ಪಾಳ್ಯ, ಗೊಲ್ಲರದಿಂಬ, ಕೌದಳ್ಳಿ, ಹೂಗ್ಯ, ಲೊಕ್ಕನಹಳ್ಳಿ ಗ್ರಾಮಗಳಲ್ಲಿರುವ 15ಕ್ಕೂ ಹೆಚ್ಚು ಘಟಕಗಳು ಕೆಟ್ಟುನಿಂತಿವೆ.

ಘಟಕಗಳಿಗೆ ಗ್ರಹಣ 

ಯಳಂದೂರು ತಾಲ್ಲೂಕು, ಪಟ್ಟಣ ಸೇರಿದಂತೆ ಸ್ಥಳೀಯ ಆಡಳಿತ ನಿರ್ವಹಣೆ ಮಾಡುತ್ತಿರುವ ಶುದ್ಧ ನೀರಿನ ಘಟಕಗಳಲ್ಲಿ ಕೆಲವು ಕಡೆ ಅಂತರ್ಜಲ ಕೊರತೆ ಉಂಟಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಘಟಕಗಳು ಕೆಟ್ಟುನಿಂತರೆ ದುರಸ್ತಿಗೆ ಹೆಚ್ಚು ಸಮಯ ತಗುಲುತ್ತಿದ್ದು ಜನರಿಗೆ ನೀರು ದೊರೆಯುತ್ತಿಲ್ಲ.

ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಆಗಾಗ ದುರಸ್ತಿಗೆ ಬರುತ್ತಿದ್ದು ನೀರಿಗಾಗಿ ಅಲೆಯಬೇಕಾದ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಪಟ್ಟಣದ ಸುರೇಶ್.

9 ಘಟಕಗಳು ದುರಸ್ತಿ

ಕೊಳ್ಳೇಗಾಲ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳು ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತಿದೆ. ನಗರಸಭೆ ವ್ಯಾಪ್ತಿಯಲ್ಲಿ 21 ಕುಡಿಯುವ ನೀರಿನ ಘಟಕಗಳಿದ್ದು 9 ಘಟಕಗಳು ಆರು ತಿಂಗಳಿಂದಲೂ ದುರಸ್ತಿಯಲ್ಲಿದ್ದು ಸ್ಥಳೀಯ ನಿವಾಸಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

ಮಳೆಗಾಲದಲ್ಲಿ ನಗರಸಭೆ ಪೂರೈಸುವ ಕುಡಿಯುವ ನೀರಿನ ಬಣ್ಣ ಬದಲಾಗುವುದರಿಂದ ಬಹುತೇಕ ಬಡಾವಣೆಯ ನಿವಾಸಿಗಳು ಶುದ್ಧ ಕುಡಿಯುವ ನೀರಿನ ಘಟಕವನ್ನೇ ಕುಡಿಯುವ ನೀರಿಗೆ ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದರಿಂದ ನಿವಾಸಿಗಳು ನೀರಿಗಾಗಿ ಅಲೆಯಬೇಕಾಗಿದೆ.

ಎರಡರಿಂದ ಮೂರು ತಿಂಗಳಿಗೊಮ್ಮೆ ಘಟಕಗಳು ದುರಸ್ತಿಗೆ ಬಂದರೂ ನಗರಸಭೆ ಅಧಿಕಾರಿಗಳು, ಸದಸ್ಯರು, ಸ್ಥಳೀಯ ಶಾಸಕರು ಸಮಸ್ಯೆಗೆ ತಕ್ಷಣೆ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ನಿರ್ವಹಣೆ: ಬಾಲಚಂದ್ರ ಎಚ್‌.

ಪೂರಕ ಮಾಹಿತಿ: ಅವಿನ್ ಪ್ರಕಾಶ್‌ ವಿ, ನಾ.ಮಂಜುನಾಥಸ್ವಾಮಿ, ಮಹದೇವ್ ಹೆಗ್ಗವಾಡಿಪುರ, ಬಿ.ಬಸವರಾಜು

ಚಾಮರಾಜನಗರದ ರಾಮಸಮುದ್ರದಲ್ಲಿರುವ ಸುಬೇದಾರ್ ಕಟ್ಟೆಯ ನಾಯಕರ ಬೀದಿಯಲ್ಲಿರುವ ಶುದ್ಧ ಕುಡಿಯವ ನೀರಿನ ಘಟಕದ ಸ್ಥಿತಿ
ಚಾಮರಾಜನಗರದಲ್ಲಿರುವ ಬುದ್ಧನಗರದಲ್ಲಿ ಕೆಟ್ಟುನಿಂತಿರುವ ಆರ್‌ಒ ಘಟಕ
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ
ಯಳಂದೂರು ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ಘಟಕ ದುರಸ್ತಿಗೆ ಕಾದಿದೆ.
ಶೀಘ್ರ ದುರಸ್ತಿಗೊಳಿಸಿ ನೀರು ಪೂರೈಕೆ ಚಾಮರಾಜನಗರದಲ್ಲಿ ನಗರಸಭೆಯಿಂದ ನಿರ್ವಹಣೆ ಮಾಡುತ್ತಿರುವ 16 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು ಎರಡು ಘಟಕಗಳು ಸ್ಥಗಿತವಾಗಿವೆ. ಶೀಘ್ರ ದುರಸ್ತಿಗೊಳಿಸಿ ನೀರು ಪೂರೈಕೆ ಮಾಡಲಾಗುವುದು. 
ಪ್ರಕಾಶ್ ನಗರಸಭೆ ಎಂಜಿನಿಯರ್‌
‘ಹನೂರಿನಲ್ಲಿ ಸಮಸ್ಯೆ ಗಂಭೀರ’ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಬೇಕು ಎಂಬ ದೃಷ್ಟಿಯಿಂದ ಆರಂಭಿಸಿರುವ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೆ ಜನರಿಗೆ ತೊಂದರೆಯಾಗಿದೆ. ಗಂಭೀರ ಕುಡಿಯುವ ನೀರಿನ ಸಮಸ್ಯೆ ಇರುವ ಹನೂರು ತಾಲ್ಲೂಕಿನಲ್ಲಿರುವ ಘಟಕಗಳನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು.
ಮುರುಡೇಶ್ವರ ಸ್ವಾಮಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಜ್ಜೀಪುರ
‘ದುರಸ್ತಿಗೆ ಸೂಚನೆ’ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಟ್ಟುನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶೀಘ್ರ ಘಟಕಗಳು ಕಾರ್ಯನಿರ್ವಹಿಸಲಿದ್ದು ಜನರಿಗೆ ಶುದ್ಧ ಕುಡಿಯುವ ನೀರು ದೊರಯೆಲಿದೆ.
ಉಮೇಶ್ ಹನೂರು ತಾಲ್ಲೂಕು ಪಂಚಾಯಿತಿ ಇಒ 
ದುರಸ್ತಿಗೆ ಒತ್ತು ನೀಡಿ ಯಳಂದೂರು ತಾಲ್ಲೂಕಿನ ಶೇ50ರಷ್ಟು ಭಾಗಕ್ಕೆ ಶುದ್ಧ ಕುಡಿಯುವ ನೀರಿನ ಘಟಕಗಳು ನೀರು ಪೂರೈಸುತ್ತವೆ. ಘಟಕಗಳು ಕೆಟ್ಟುನಿಂತಾಗ ಕೂಡಲೇ ದುರಸ್ತಿಗೊಳಿಸಿದರೆ ಸಮಸ್ಯೆ ಬಗೆಹರಿಯಲಿದೆ. ನಿರ್ವಹಣೆ ಹೊಣೆ ಹೊತ್ತಿರುವ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು.
ಶಿವರಾಮು ಕಟ್ಟೆ ಗಣಿಗನೂರು
ಯಳಂದೂರು ಸಮಸ್ಯೆ ನಿವಾರಣೆ ಮುಖ್ಯಾಧಿಕಾರಿ ಯಳಂದೂರು ಪಟ್ಟಣದಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಕೆಲವು ‌ಘಟಕಗಳಲ್ಲಿ ಸಮಸ್ಯೆ ಕಂಡು ಬಂದಿದ್ದು ದುರಸ್ತಿಗೆ ಒತ್ತು ನೀಡಿ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು.
ಎಂ.ಪಿ.ಮಹೇಶ್ ಕುಮಾರ್ ಪ.ಪಂ ಮುಖ್ಯಾಧಿಕಾರಿ ಯಳಂದೂರು
ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 21 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು 9 ಘಟಕಗಳು ದುರಸ್ತಿಯಲ್ಲಿವೆ. ಕೆಟ್ಟಿರುವ ಘಟಕಗಳ ದುರಸ್ತಿಗೆ ಟೆಂಡರ್ ಕರೆಯಲಾಗಿದ್ದು ಸರಿಪಡಿಸಲು ಸೂಚಿಸಲಾಗಿದೆ.
ಲಕ್ಷ್ಮಿ ನಗರಸಭೆ ಎಂಜಿನಿಯರ್ 
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಮುಡಿಗುಂಡ ಬಡಾವಣೆಯಲ್ಲಿ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದ್ದು ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ದುರಸ್ತಿ ಮಾಡಿಸಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಜಗದೀಶ್ ಕೊಳ್ಳೇಗಾಲ ನಿವಾಸಿ
‘ತುರ್ತಾಗಿ ರಿಪೇರಿ ಮಾಡಿಸಿ’ ಜಲ ಜೀವನ್ ಮಿಷನ್ ಯೋಜನೆಯಡಿ ಪೂರೈಕೆಯಾಗುತ್ತಿರುವ ಹಾಗೂ ತೊಂಬೆಗಳಲ್ಲಿ ಬರುವ ಕುಡಿಯುವ ನೀರು ಶುದ್ಧವಾಗಿಲ್ಲ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ನೀರು ನೀಡಬೇಕು ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತುರ್ತು ರಿಪೇರಿ ಮಾಡಿಸಬೇಕು.
ಪುಟ್ಟಣ್ಣ ಸಂತೇಮರಹಳ್ಳಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.