ADVERTISEMENT

ಮಹದೇಶ್ವರ ಬೆಟ್ಟ: ಪಿಡಿಒ, ಗ್ರಾಮ ಆಡಳಿತ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 2:41 IST
Last Updated 17 ಸೆಪ್ಟೆಂಬರ್ 2025, 2:41 IST
   

ಮಹದೇಶ್ವರ ಬೆಟ್ಟ: ಗ್ರಾಮಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಶಾಸಕ ಎಂ.ಆರ್.ಮಂಜುನಾಥ್ ಪಿಡಿಒಗಳಿಗೆ ಸೂಚಿಸಿದರು.

ಇಲ್ಲಿನ ನಾಗಮಲೆ ಭವನದಲ್ಲಿ ಸೋಮವಾರ ನಡೆದ ಹನೂರು ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಿದ್ದು, ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ, ಎಷ್ಟು ದುರಸ್ತಿಗೊಂಡಿವೆ ಎಂಬ ವಿವರ ಪಡೆದರು. ಕೆಟ್ಟು ನಿಂತಿರುವ ಕೊಳವೆ ಬಾವಿಗಳನ್ನು ಶೀಘ್ರ ದುರಸ್ತಿಗೊಳಿಸಿ ಗ್ರಾಮಸ್ಥರ ಜೊತೆಗೆ ಜಾನುವಾರಿಗೂ ನೀರು ಪೂರೈಸಬೇಕು. 15ನೇ ಹಣಕಾಸು ಯೋಜನೆಯಡಿ ಕೊಳವೆಬಾವಿ ಇಲ್ಲದ ಸ್ಥಳಗಳಲ್ಲಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಬೇಕು’ ಎಂದರು.

ADVERTISEMENT

‘ಗ್ರಾಮ ಆಡಳಿತಾಧಿಕಾರಿಗಳು ಕಂದಾಯ ಇಲಾಖೆಯಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತ ಸಮಯಕ್ಕೆ ಪರಿಹಾರ ನೀಡುವ ಕೆಲಸ  ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯು ಜಂಟಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಕೆಲಸಗಳನ್ನು ಸುಲಭವಾಗಿ ಪರಿಹರಿಸಬೇಕು. ಒತ್ತುವರಿಯಾಗಿರುವ ರಸ್ತೆಯನ್ನು ಗುರುತಿಸಿ ಸಮೀಕ್ಷೆ ಮಾಡಿ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಹೇಳಿದರು.

‘ಪೌತಿಖಾತೆ ಮಾಡಿಸಿಕೊಳ್ಳಲು ಜನರು ಪರದಾಡುವ ಪರಿಸ್ಥಿತಿ ನನ್ನ ಗಮನಕ್ಕೆ ಬಂದಿದ್ದು, ಶೀಘ್ರವಾಗಿ ಪರಿಹರಿಸಬೇಕು, ಸರ್ಕಾರದಿಂದ ಮಂಜೂರಾಗಿರುವ ಜಮೀನುಗಳ ದುರಸ್ತಿ ಮಾಡಿ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಹನೂರು ತಾಲೂಕಿನ ಸುಮಾರು 3000 ಪೌತಿಖಾತೆಗಳನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ದಂಡಾಧಿಕಾರಿ ಚೈತ್ರಾ, ಭೂಮಾಪನ ಇಲಾಖೆಯ ಸೂಪರಿಂಟೆಂಡ್ ಚೇತನ್, ಸರ್ವೇ ಇಲಾಖೆಯ ಎಇಇ ನಟರಾಜ್, ರಾಜಸ್ವನಿರೀಕ್ಷಕರಾದ ಶೇಷಣ್ಣ, ಶಿವಕುಮಾರ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.