ADVERTISEMENT

ಚಾಮರಾಜನಗರ: ಪ್ರಯಾಣಿಕರಿಂದ ದೂರುಗಳ ಮಹಾಪೂರ

ಚಾಮರಾಜನಗರ ರೈಲು ನಿಲ್ದಾಣಕ್ಕೆ ಡಿಆರ್‌ಎಂ ಅಪರ್ಣಾ ಗರ್ಗ್‌ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 15:08 IST
Last Updated 1 ಸೆಪ್ಟೆಂಬರ್ 2018, 15:08 IST
ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌ ಅವರು ಪ್ರಯಾಣಿಕರಿಂದ ಸಮಸ್ಯೆಗಳನ್ನು ಆಲಿಸಿದರು
ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌ ಅವರು ಪ್ರಯಾಣಿಕರಿಂದ ಸಮಸ್ಯೆಗಳನ್ನು ಆಲಿಸಿದರು   

ಚಾಮರಾಜನಗರ: ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ವ್ಯವಸ್ಥಾಪಕಿ (ಡಿಆರ್‌ಎಂ) ಅಪರ್ಣಾ ಗರ್ಗ್‌ಅವರು ಶನಿವಾರ ಚಾಮರಾಜನಗರ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು.

ನಿಲ್ದಾಣದಲ್ಲಿರುವ ಮೂಲಸೌಕರ್ಯ ಹಾಗೂ ಕುಂದುಕೊರತೆಗಳ ಬಗ್ಗೆ ಅಧಿಕಾರಿಗಳು, ಪ್ರಯಾಣಿಕರು ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದರು.

ದೂರುಗಳ ಮಹಾಪೂರ: ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಅವರು ನಂತರ ನಿಲ್ದಾಣದ ಆಸುಪಾಸು ಮತ್ತು ವಾಹನಗಳ ನಿಲ್ದಾಣವನ್ನು ಪರಿಶೀಲಿಸಿದರು.

ADVERTISEMENT

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈಲ್ವೆಪ್ರಯಾಣಿಕರು ಹಾಗೂ ಸ್ಥಳೀಯರು ನಿಲ್ದಾಣದಲ್ಲಿರುವ ಸಮಸ್ಯೆಗಳ ಪಟ್ಟಿಯನ್ನೇ ತೆರೆದಿಟ್ಟರು.

ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸರಿಯಾಗಿಲ್ಲ. ನಿಲ್ದಾಣದ ಎದುರಿಗೆ ಇರುವ ಖಾಲಿ ಜಾಗ ಗುಂಡಿಗಳಿಂದ ಕೂಡಿದ್ದು ಓಡಾಡುವುದಕ್ಕೆ ಕಷ್ಟವಾಗುತ್ತದೆ. ಇಲ್ಲಿನ ಆವರಣದಲ್ಲಿ ಬೀದಿದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಇರುವುದರಿಂದ ರಾತ್ರಿ ಹೊತ್ತು ಸಂಚರಿಸುವುದಕ್ಕೆ ಭಯವಾಗುತ್ತದೆ ಎಂದು ಪ್ರಯಾಣಿಕರು ಡಿಆರ್‌ಎಂ ಅವರಿಗೆ ದೂರು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಪರ್ಣಾ ಗರ್ಗ್‌, ‘ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದೇನೆ’ ಎಂದರು.

ಶೌಚಾಲಯ ಇಲ್ಲ: ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲ. ಮಳೆ ಬಂದ ಸಂದರ್ಭದಲ್ಲಿ ಪ್ಲಾಟ್‌ಫಾರಂ ಒಳಗೇ ನೀರು ಬರುತ್ತದೆ ಎಂದು ಪ್ರಯಾಣಿಕರು ಡಿಆರ್‌ಎಂ ಅವರಿಗೆ ತಿಳಿಸಿದರು.

ಸ್ಥಳೀಯ ಅಧಿಕಾರಿಗಳನ್ನು ಕರೆದ ಅವರು, ತಕ್ಷಣವೇ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ‘ನಮಗೆ ಒಂದೆರಡು ತಿಂಗಳು ಸಮಯ ಕೊಡಿ. ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ಸ್ವಚ್ಛತೆ ಕಾಪಾಡಿ: ಮೈಸೂರಿನಿಂದ ಚಾಮರಾಜನಗರಕ್ಕೆ ಬರುವ ರೈಲುಗಳಲ್ಲಿನ ಅನೈರ್ಮಲ್ಯವನ್ನೂ ಸ್ಥಳೀಯರು ಡಿಆರ್‌ಎಂ ಗಮನಕ್ಕೆ ತಂದರು.ರೈಲುಗಳು ಸ್ವಚ್ಛವಾಗಿರುವುದಿಲ್ಲ. ಬೋಗಿಗಳಲ್ಲಿನ ಶೌಚಾಲಯವೂ ಅನೈರ್ಮಲ್ಯದಿಂದ ಕೂಡಿರುತ್ತದೆ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಅಪರ್ಣಾ,ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

4 ರಿಂದ ವೈ–ಫೈ ಸೌಲಭ್ಯ:ಚಾಮರಾಜನಗರದ ರೈಲ್ವೆ ನಿಲ್ದಾಣದಲ್ಲಿ ಸೆಪ್ಟೆಂಬರ್‌ 4ರಿಂದ ಪ್ರಯಾಣಿಕರಿಗೆ ವೈ–ಫೈ ಸೌಲಭ್ಯ ಸಿಗಲಿದೆ.

ರೈಲ್ವೆ ಇಲಾಖೆಯು ಈಗಾಗಲೇ ದೇಶದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗಾಗಿ ವೈ–ಫೈ ಸೌಲಭ್ಯ ಕಲ್ಪಿಸಿದೆ.ಚಾಮರಾಜನಗರದಲ್ಲಿ ಇದುವರೆಗೆ ಲಭ್ಯವಿರಲಿಲ್ಲ. ಈಗ ಆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು‍ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಶಿಬಿರ: ಈ ಮಧ್ಯೆ, ಸ್ಥಳೀಯ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಗಾಗಿ ರೈಲ್ವೆ ಇಲಾಖೆಯು ಸೆಪ್ಟೆಂಬರ್‌ 4ರಂದು ಆರೋಗ್ಯ, ಕೌಶಲಾವೃದ್ಧಿ ಶಿಬಿರಗಳನ್ನು ಹಮ್ಮಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.