ಯಳಂದೂರು: ಆಧುನಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಗುಣಮಟ್ಟದ ಕಲಿಕೆ ಉತ್ತೇಜಿಸಲು ಶಿಕ್ಷಣ ಇಲಾಖೆ ಪ್ರಯತ್ನ ನಡೆಸುತ್ತಿದ್ದು ನವನವೀನ ಶೈಕ್ಷಣಿಕ ಚಟುವಟಿಕೆಗಳಿಗೆ ಶಾಲಾ ಅಂಗಳ ತೆರೆದುಕೊಂಡಿದೆ. ಈ ದಿಸೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ ಸಂಸ್ಥೆಯು ಸೋಲಿಗ ಸರ್ಕಾರಿ ಶಾಲಾ ಚಿಣ್ಣರಿಗೆ ಡ್ರೋನ್ ತಾಂತ್ರಿಕತೆ ಪರಿಚಯಿಸಲು ಮುಂದಾಗಿದೆ.
ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಸರ್ಕಾರಿ ಶಾಲೆಯ ಮಕ್ಕಳು ವೈಜ್ಞಾನಿಕ ವಿಚಾರಗಳಿಗೆ ತೆರೆದುಕೊಂಡಿದ್ದು ಪರಿಸರದ ಸುತ್ತಮುತ್ತಲಿನ ಸಂಸ್ಕತಿ, ಆಚಾರ–ವಿಚಾರ, ಭೂ ವೈವಿಧ್ಯತೆ, ಪ್ರಾಣಿ ಪ್ರಪಂಚ ಹಾಗೂ ಪರಂಪರೆಗಳನ್ನು ಡ್ರೋನ್ ದೃಶ್ಯಾವಳಿ ಮೂಲಕ ಸ್ಮೃತಿಪಟಲದೊಳಗೆ ದಾಖಲಿಸಿಕೊಳ್ಳುತ್ತಿದ್ದಾರೆ. ಮಕ್ಕಳು ಏಕಮುಖ ಕಲಿಕೆಯ ಬದಲಾಗಿ ಬಹುಮುಖಿ ಚಟುವಟಿಗಳಿಗೆ ತೆರೆದುಕೊಳ್ಳಲು ಡ್ರೋನ್ ಬಳಕೆ ಹಾಗೂ ಕಲಿಕೆ ವರದಾನ ಎನ್ನುತ್ತಾರೆ ವಿಜ್ಞಾನಿಗಳು.
ಭಾರತದಲ್ಲಿ ವೈಯಕ್ತಿಕ ಸಬಲೀಕರಣ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಾಕ್ಷರತೆ ಅತ್ಯಂತ ನಿರ್ಣಾಯಕವಾಗಿದ್ದು ಗಿರಿಜನ ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ, ಸಾಂಸ್ಕೃತಿಕ ಸಂರಕ್ಷಣೆಗೆ ಅವಕಾಶ ಸಿಗಬೇಕು. ಮಕ್ಕಳಲ್ಲಿ ಗುರುತಿನ ಪ್ರಜ್ಞೆ ಬೆಳೆಸಿ ಸಂಕೀರ್ಣವಾದ ಜಗತ್ತಿಗೆ ಸಿದ್ಧವಾಗುವಂತೆ ಮಾಡುವಲ್ಲಿ ಡ್ರೋನ್‌ನಂತಹ ನಾವಿನ್ಯಯುತ ಕಲಿಕೆಗಳು ಅತ್ಯಗತ್ಯ ಎನ್ನುತ್ತಾರೆ ಸಿಎಸ್ಐಆರ್ ವಿಜ್ಞಾನಿಗಳಾದ ಶೋಭಾವತಿ ಹಾಗೂ ವಿಪಿಎಸ್ ನಾಯ್ದು.
ಶಾಲೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶಿಸುವುದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್ಟಿಇಎಂ) ಕಲಿಕೆಯಲ್ಲಿ ತೊಡಗುವ ಕ್ರಿಯಾತ್ಮಕ ಮಾರ್ಗವನ್ನು ಪರಿಚಯಿಸಬಹುದು. ಶೈಕ್ಷಣಿಕ ವಿಷಯಗಳನ್ನು ಮೋಜಿನ ಮೂಲಕ ಕಲಿಯಬಹುದು ಎಂದು ಪ್ರಾಂಶುಪಾಲೆ ಶ್ವೇತಾ ಹೇಳಿದರು.
ಡ್ರೋನ್ ಕಲಿಕಾ ಪಾಠ ವಿಧಾನ: ಮಕ್ಕಳಿಗೆ ಶಿಕ್ಷಕರು ಸರಳ ಭಾಷೆಯಲ್ಲಿ ಕಲಿಸಬೇಕು. ದೃಶ್ಯೀಕರಣ ಹಾಗೂ ಪ್ರಾಯೋಗಿಕ ವಿಧಾನ ಇರಬೇಕು, ಚಿಣ್ಣರನ್ನು ಧನಾತ್ಮಕ ಪ್ರೋತ್ಸಾಹದಿಂದ ಸಂತಸಮಯ ವಾತಾವರಣದಲ್ಲಿ ಕಲಿಕೆಗೆ ಸಿದ್ಧಗೊಳಿಸಬೇಕು. ಅವರಿಗೆ ತಾಂತ್ರಿಕ ಜ್ಞಾನ ನೀಡಿ, ಡ್ರೋನ್ ಭಾಗಗಳು, ಅವುಗಳ ಕಾರ್ಯನಿರ್ವಹಣೆ ತಿಳಿಸುವುದು. ಪೋಷಕರನ್ನು ಪಾಲ್ಗೊಳ್ಳುವಂತೆ ಉತ್ತೇಜಿಸುವುದು, ಡ್ರೋನ್ ಬಳಕೆಯ ಬಗ್ಗೆ ಆಸಕ್ತಿ ಬೆಳೆಸುವುದು, ವಯಸ್ಸಿಗೆ ತಕ್ಕಂತೆ ಡ್ರೋನ್ ಆಯ್ಕೆ, ಸುರಕ್ಷತಾ ತರಬೇತಿ ಹಾಗೂ ಮೂಲಭೂತ ಕೌಶಲಗಳ ತರಬೇತಿಯೂ ಅತ್ಯಗತ್ಯ ಎನ್ನುತ್ತಾರೆ ಮುಖ್ಯ ಶಿಕ್ಷಕ ಜಯಶೇಖರ್.
ಕೇಂದ್ರ ಸರ್ಕಾರದ ಕಾರ್ಯಕ್ರಮ: ಭಾರತದಲ್ಲಿ 1959ರಲ್ಲಿ ಸ್ಥಾಪನೆಯಾದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಹಾಗೂ ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯ (ಎನ್ಎಎಲ್) ದೇಶದ ನಾಗರಿಕ ವಲಯದ ಏಕೈಕ ಸರ್ಕಾರಿ ಸಂಸ್ಥೆಯಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ನವೆಂಬರ್ 2025 ರವರೆಗೆ ‘ಜನ್ ಜಾತೀಯ ಗೌರವ್ ವರ್ಷ’ ಎಂಬ ಘೋಷಣೆಯಡಿ ಸಿಎಸ್ಐಆರ್ ಮತ್ತು ಎನ್ಎಎಲ್ ನಿರ್ದೇಶಕರು ಮತ್ತು ಅವರ ತಂಡ ಯುವ ಮನಸ್ಸುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಸಾರ ಮಾಡುವಲ್ಲಿ ನಿರತವಾಗಿವೆ. ವೈಜ್ಞಾನಿಕ ಸಂಶೋಧನೆಗಳ ಮಹತ್ವವನ್ನು ಮಕ್ಕಳಿಗೂ ಪರಿಚಯಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.