ಯಳಂದೂರು: ಮದುವೆ, ವಿಶೇಷ ಸಮಾರಂಭಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಬಳಕೆಯಾಗುತ್ತಿದ್ದ ಡ್ರೋನ್ ತಂತ್ರಜ್ಞಾನ ಇದೀಗ ಕೃಷಿ ಭೂಮಿಯ ಮೇಲೂ ಹಾರಾಡುತ್ತಿದೆ. ಕೃಷಿ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನ ಕಾಲಿರಿಸಿದ್ದು ರೈತರು ಕೂಡ ನಿಧಾನವಾಗಿ ತಂತ್ರಜ್ಞಾನದತ್ತ ಹೊರಳುತ್ತಿದ್ದಾರೆ.
ಬೆಳೆಗಳಿಗೆ ರೋಗಬಾಧೆ ತಡೆಯಲು ಹಾಗೂ ದ್ರವರೂಪದ ಪೋಷಕಾಂಶಗಳನ್ನು ನೀಡಲು ಡ್ರೋನ್ ಮೂಲಕ ಔಷಧಿ ಸಿಂಪಡಿಸಲಾಗುತ್ತಿದೆ. ಈಚೆಗೆ ಕೃಷಿ ಇಲಾಖೆಯ ವತಿಯಿಂದ ತಾಲ್ಲೂಕಿನಲ್ಲಿ ಕೃಷಿಕ್ಷೇತ್ರದಲ್ಲಿ ಡ್ರೋನ್ ಯಂತ್ರ ಬಳಕೆಯ ಅಗತ್ಯತೆ ಹಾಗೂ ಉಪಯೋಗಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.
ದ್ರವರೂಪದ ಲಘುಪೋಷಕಾಂಶಗಳನ್ನು ಒಳಗೊಂಡ ರಸಗೊಬ್ಬರವನ್ನು ಡ್ರೋನ್ ಬೆಳೆಗೆ ಸಿಂಪರಣೆ ಮಾಡುವ ಮೂಲಕ ಡ್ರೋನ್ ಬಳಕೆಯಲ್ಲಿ ಹತ್ತು ಹಲವು ಸಾಧ್ಯತೆಗಳನ್ನು ರೈತ ಸಮೂಹಕ್ಕೆ ಪರಿಚಯಿಸಲಾಯಿತು. ಕೃಷಿಕರ ಬವಣೆ, ಸಮಯ, ಶ್ರಮ ತಗ್ಗಿಸುವ ದಿಸೆಯಲ್ಲಿ ಡ್ರೋನ್ ಬಳಕೆ ಮಹತ್ವದ ಪಾತ್ರ ವಹಿಸಲಿದೆ ಎಂದು ಅಧಿಕಾರಿಗಳು ರೈತಿಗೆ ಮನದಟ್ಟು ಮಾಡಿಸಿದರು.
ತಾಲ್ಲೂಕಿನಲ್ಲಿ 10.5 ಸಾವಿರ ಹೆಕ್ಟೇರ್ ಕೃಷಿಭೂಮಿ ಇದ್ದು 14 ಸಾವಿರ ಹಿಡುವಳಿದಾರರು ಇದ್ದಾರೆ. ಆದರೆ, ಕೃಷಿ ಪ್ರಧಾನ ಚಟುವಟಿಕೆಗಳಿಗೆ ಶ್ರಮಿಕರ ಕೊರತೆ ಹೆಚ್ಚಾಗಿದೆ. ಕೀಟನಾಶಕಗಳನ್ನು ಸಿಂಪಡಿಸಲು, ರಸಗೊಬ್ಬರ ಹಾಕಲು ಕುಶಲ ಕಾರ್ಮಿಕರು ಸಿಗುತ್ತಿಲ್ಲ. ಪರಿಣಾಮ ಮುಂಗಾರು ಋತುವಿನ ಸಮಯದಲ್ಲಿ ಯಾಂತ್ರಿಕ ಬೇಸಾಯದ ಮೇಲೆ ಅವಲಂಬನೆ ಹೆಚ್ಚಾಗಿದ್ದು, ರೈತರಿಗೆ ಡ್ರೋನ್ ಉಪಯೋಗವನ್ನು ಪರಿಚಯಿಸಲಾಗುತ್ತಿದೆ.
10 ಲೀಟರ್ ಔಷಧವನ್ನು ಹೊರುವ ಸಾಮರ್ಥ್ಯ ಹೊಂದಿರುವ ಡ್ರೋನ್ 7 ರಿಂದ 10 ನಿಮಿಷದಲ್ಲಿ 1 ಎಕರೆ ಕೃಷಿ ಭೂಮಿಗೆ ಔಷಧ ಸಿಂಪಡಿಸುತ್ತದೆ. ಎತ್ತರಕ್ಕೆ ಬೆಳೆಯುವ ಮೆಕ್ಕೆಜೋಳ, ಕಬ್ಬು, ಅಡಿಕೆ, ತೆಂಗು ಬೆಳೆಗಳಿಗೆ ಡ್ರೋನ್ ಮೂಲಕ ಔಷಧ ಸಿಂಪರಣೆ ಹೆಚ್ಚು ಸಹಕಾರಿ. ರೈತರು ಬೆಳೆಯ ತಳಭಾಗದಲ್ಲಿ ನಿಂತು ಸಿಂಪಡಿಸುವ ಅಪಾಯಕಾರಿ ಕ್ರಮಗಳಿಗೆ ಡ್ರೋನ್ ಬಳಕೆಯಿಂದ ಮುಕ್ತಿ ಸಿಗಲಿದೆ. ದಿನಕ್ಕೆ 40 ಎಕರೆವರೆಗೂ ಔಷಧಿ ಇಲ್ಲವೆ ದ್ರವರೂಪದ ರಸಗೊಬ್ಬರ ಸಿಂಪಡಿಸಬಹುದು ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ.
ರೈತರ ಬೆಳೆಗಳಿಗೆ ಕಾಡುವ ಕೀಟಬಾಧೆ ನಿಯಂತ್ರಿಸುವುದು ಸವಾಲಿನ ಕೆಲಸ. ಔಷಧಿ ಸಿಂಪಡಿಸದಿದ್ದರೆ ಇಳುವರಿ ಕುಸಿಯಲಿದೆ. ಬೆಳೆದ ಬೆಳೆಯೂ ಕೈಸೇರುವುದಿಲ್ಲ. ಸರಿಯಾದ ಸಮಯದಲ್ಲಿ ಗೊಬ್ಬರ ಪೂರೈಸದಿದ್ದರೆ ಬೆಳೆ ಹಾಳಾಗುತ್ತದೆ. ಬೆನ್ನ ಮೇಲೆ ಔಷಧ ಸಿಂಪಡಿಸುವ ಟ್ಯಾಂಕ್ ಹೊತ್ತು ಬೆಳೆಗಳ ನಡುವೆ ಸಂಚರಿಸುವುದು ಕಷ್ಟಕರ ಹಾಗೂ ಆರೋಗ್ಯ ಸಮಸ್ಯೆ ತೊಂದೊಡ್ಡುವ ಅಪಾಯ ಹೆಚ್ಚಾಗಿರುತ್ತದೆ. ಇಂತಹ ಹತ್ತಾರು ಸಮಸ್ಯೆಗಳನ್ನು ತಪ್ಪಿಸುವ ದೆಸೆಯಲ್ಲಿ ಡ್ರೋನ್ ಬಳಕೆ ವರದಾನ ಆಗಲಿದೆ ಎನ್ನುತ್ತಾರೆ ರೈತಾಪಿ ಜನರು.
ಲಾಭದಾಯಕ ಕೃಷಿ ಸಾಧ್ಯ:
‘ನಮೋ ಡ್ರೋನ್ ದೀದಿ’ ಯೋಜನೆಯಡಿ ಡ್ರೋನ್ ತಂತ್ರಜ್ಞಾನ ಪರಿಚಯಿಸಲಾಗಿದೆ. ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ರಸಗೊಬ್ಬರ ಸಿಂಪಡಿಸುವ ಪ್ರಾತ್ಯಕ್ಷಿಕೆಗೆ ಕೃಷಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡ್ರೋನ್ ಬಳಕೆಗೆ 1 ಎಕರೆಗೆ ₹ 450 ಬಾಡಿಗೆ ನಿಗದಿಪಡಿಸಲಾಗಿದೆ. ಹರಳು ರೂಪದ ಗೊಬ್ಬರಕ್ಕೆ ಬದಲಾಗಿ ನ್ಯಾನೋ ಗೊಬ್ಬರ ಬಳಸಿದಲ್ಲಿ ರೈತರಿಗೆ ಅನಗತ್ಯ ವೆಚ್ಚ ತಗ್ಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಯು ಕರಿಜಿಗಿ ಹಾಗೂ ಸೈನಿಕಹುಳ ಬಾಧೆಗೆ ತುತ್ತಾಗಿತ್ತು. ಡ್ರೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬಹುದಾಗಿದ್ದು ಶೀಘ್ರ ರೋಗಬಾಧೆ ಹತೋಟಿಗೆ ತರಬಹುದು ದೊಡ್ಡಯ್ಯವೈ.ಕೆ.ಮೋಳೆ ಗ್ರಾಮದ ರೈತ
ಡ್ರೋನ್ ಬಳಕೆಯಿಂದ ಕಡಿಮೆ ವೆಚ್ಚ ಮತ್ತು ಸಮಯ ಉಳಿತಾಯ ಸಾಧ್ಯವಿದೆ ನ್ಯಾನೋ ರಸಗೊಬ್ಬರ ಮತ್ತು ಕ್ರಿಮಿನಾಶಕ ಸಿಂಪಡಿಸಬಹುದಾಗಿದ್ದು ಮೊದಲ ಬಾರಿಗೆ ಈ ತಾಂತ್ರಿಕತೆ ವೀಕ್ಷಣೆ ಖುಷಿ ಕೊಟ್ಟಿದೆಚಂದ್ರಮೌಳಿ ಮೆಲ್ಲಹಳ್ಳಿ ರೈತ.
‘ಪರಿಸರಕ್ಕೂ ಪೂರಕ ಕ್ರಮ’
ಸಾಂಪ್ರದಾಯಿಕ ಔಷಧ ಸಿಂಪಡಣೆ ಹಾಗೂ ಗೊಬ್ಬರ ಹಾಕುವಿಕೆ ವಿಧಾನದಲ್ಲಿ ರೈತರ ಕಾಲಿಗೆ ಸಿಲುಕಿ ಬೆಳೆ ಹಾಳಾಗುತ್ತಿತ್ತು ಈಗ ಅಂತಹ ಸಮಸ್ಯೆ ಉದ್ಭವವಾಗುವುದಿಲ್ಲ. ಅನಗತ್ಯವಾಗಿ ಭೂಮಿ ಸೇರುವ ರಾಸಾಯನಿಕ ಮತ್ತು ಕ್ರಿಮಿನಾಶಕದ ಮಾಲಿನ್ಯವೂ ತಗ್ಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ಅಮೃತೇಶ್ವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.