ADVERTISEMENT

ನರೇಗಾ: ದುಡಿಯೋಣ ಬಾ ಅಭಿಯಾನಕ್ಕೆ ಚಾಲನೆ

ಬೇಸಿಗೆ ಅವಧಿಯಲ್ಲಿ ಜನರ ವಲಸೆ ತಪ್ಪಿಸಲು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ ಇಲಾಖೆ ಯೋಜನೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 15:22 IST
Last Updated 15 ಮಾರ್ಚ್ 2021, 15:22 IST
ನರೇಗಾ ಅಡಿಯಲ್ಲಿ ಕೆಲಸ ಮಾಡಲು ಹೊರಟ ಮಹಿಳೆಯರು
ನರೇಗಾ ಅಡಿಯಲ್ಲಿ ಕೆಲಸ ಮಾಡಲು ಹೊರಟ ಮಹಿಳೆಯರು   

ಚಾಮರಾಜನಗರ: ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿಕೊಂಡು ವಲಸೆ ಹೋಗುವುದನ್ನು ತಡೆಯುವುದಕ್ಕಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯು ಮಾರ್ಚ್‌ 15ರಿಂದ (ಸೋಮವಾರ) ಜೂನ್‌ 15ರವರೆಗೆ ಮೂರು ತಿಂಗಳ ಅವಧಿಗೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅಡಿಯಲ್ಲಿ ‘ದುಡಿಯೋಣ ಬಾ’ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲೂ ಚಾಲನೆ ಸಿಕ್ಕಿದೆ.

ಜಿಲ್ಲೆಯ ಎಲ್ಲ 130 ಗ್ರಾಮ ಪಂಚಾಯಿತಿಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲು ಜಿಲ್ಲಾ ಪಂಚಾಯಿತಿ ಸಿದ್ಧತೆ ನಡೆಸಿದೆ.

ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ಕೆಲಸ ಒದಗಿಸುವುದು, ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು, ಗ್ರಾಮೀಣ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಸ್ವಾವಲಂಬಿ ಬದುಕು ಸಾಗಿಸುವಂತೆ ಮಾಡುವುದು, ಕೆಲಸ ಕಾಮಗಾರಿ ಬೇಡಿಕೆ ಸಲ್ಲಿಸುವ ವಿಧಾನವನ್ನು ಸರಳಗೊಳಿಸುವುದು ಅಭಿಯಾನ ಉದ್ದೇಶ.

ADVERTISEMENT

ಅಭಿಯಾನದ ಯಶಸ್ವಿ ಅನುಷ್ಠಾನಕ್ಕೆ ವಿವಿಧ ಹಂತಗಳನ್ನು ನಿಗದಿಪಡಿಸಲಾಗಿದೆ.ಸೋಮವಾರದಿಂದ ಇದೇ 22ರವರೆಗೆ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಭಿಯಾನ ಕುರಿತು ಜನ ಜಾಗೃತಿ ನಡೆಯಲಿದೆ.

ಉದ್ಯೋಗ ಚೀಟಿ ಹೊಂದಿರದ ಕುಟುಂಬಗಳಿಂದ ಉದ್ಯೋಗ ಚೀಟಿಗಾಗಿ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಪಡೆಯಬೇಕು. ಜನ ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ನೋಂದಾಯಿತ ಕೂಲಿ ಕಾರ್ಮಿಕರಿಂದ ಒಂದೇ ಬಾರಿಗೆ ಮೂರು ತಿಂಗಳ ಕೆಲಸದ ಬೇಡಿಕೆ ಪಡೆಯಬೇಕು ಎಂದು ಇಲಾಖೆ ಸೂಚಿಸಿದೆ.

23 ರಿಂದ 31ರವರೆಗೆ ಅರ್ಜಿ ಸಲ್ಲಿಸಿದ ಎಲ್ಲ ಕುಟುಂಬಗಳಿಗೆ ಉದ್ಯೋಗ ಚೀಟಿಯನ್ನು ಜಿಲ್ಲಾ ಪಂಚಾಯಿತಿ ವಿತರಿಸಲಿದೆ. ಕೆಲಸ ಒದಗಿಸಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತ ಮಂಜೂರಾತಿ, ಸಾರ್ವಜನಿಕ ಮಾಹಿತಿ ಫಲಕ ಅಳವಡಿಕೆ, ಜಿಯೋ ಟ್ಯಾಗ್ ಇತ್ಯಾದಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಿದೆ. ಕೂಲಿಕಾರರ ಗುಂಪುಗಳನ್ನು ರಚಿಸಿ, ಈ ಅವಧಿಯಲ್ಲಿ ತರಬೇತಿ ನೀಡಲಿದೆ.

ಏಪ್ರಿಲ್ 1 ರಿಂದ ಜೂನ್15ರವರೆಗೆ ಪ್ರತಿ ಸೋಮವಾರ ಕೆಲಸದ ಬೇಡಿಕೆ ಸಲ್ಲಿಸಿದ ವಿವರಗಳನ್ನು ದಾಖಲಿಸಿ ಎರಡು ದಿನಗಳೊಳಗೆ ಕೆಲಸ ಒದಗಿಸಲು ಇಲಾಖೆ ನಿರ್ದೇಶನ ನೀಡಿದೆ.

ಅಭಿಯಾನದ ಸುಗಮ ನಿರ್ವಹಣೆ ಹಾಗೂ ಪ್ರಗತಿಗಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ.

ಜಲ ಸಂರಕ್ಷಣೆಗೆ ಒತ್ತು

ಅಭಿಯಾನದ ಅವಧಿಯಲ್ಲಿ ಜಲಸಂರಕ್ಷಣೆ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಒತ್ತು ನೀಡಲಿದೆ.

ರೈತರು ತಮ್ಮ ಜಮೀನುಗಳಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ, ಸೋಕ್ ಪಿಟ್ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಮಗ್ರ ಕೆರೆ ಅಭಿವೃದ್ದಿ ಕಾರ್ಯಕ್ರಮದಡಿ ಕಾಲುವೆಗಳ ಪುನಶ್ಚೇತನ, ಕೆರೆಗಳ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿ ಕೈಗೊಳ್ಳಲು ಆದ್ಯತೆ ನೀಡಲಿದೆ. ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ತೋಟಗಾರಿಕೆ ಬೆಳೆ ಬೆಳೆಯಲು ಗುಂಡಿ ತೆಗೆಯುವುದು, ಕೊಳವೆಬಾವಿಗಳಿಗೆ ನೀರು ಮರುಪೂರಣ ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.

ನರೇಗಾ ಅಡಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದ್ದು, ಬೇಸಿಗೆ ಅವಧಿಯಲ್ಲಿ 60 ದಿನಗಳು ಕೆಲಸ ನಿರ್ವಹಿಸಿದಲ್ಲಿ ₹16,500 ಕೂಲಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.