ADVERTISEMENT

‘ಶಿಕ್ಷಿತರಿಂದಲೇ ಹೆಚ್ಚು ಅನಾಚಾರ, ಅವ್ಯವಹಾರ’

ಕೆ.ಪಿ.ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಹಾಗೂ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶರಶ್ಚಂದ್ರ ಸ್ವಾಮೀಜಿ ಬೇಸರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 6:32 IST
Last Updated 10 ಜನವರಿ 2026, 6:32 IST
ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ರಾಜು ಅವರಿಗೆ ಕೆ.ಪಿ. ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಹಾಗೂ ಗುಂಡ್ಲುಪೇಟೆಯ ಮಹಾಲಕ್ಷ್ಮಿ ಅವರಿಗೆ ಕೆ.ಸಿ. ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು
ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕ ರಾಜು ಅವರಿಗೆ ಕೆ.ಪಿ. ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಹಾಗೂ ಗುಂಡ್ಲುಪೇಟೆಯ ಮಹಾಲಕ್ಷ್ಮಿ ಅವರಿಗೆ ಕೆ.ಸಿ. ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು   

ಚಾಮರಾಜನಗರ: ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರ, ಕೊಲೆ ಪ್ರಕರಣಗಳಲ್ಲಿ ಹೆಚ್ಚಾಗಿ ಶಿಕ್ಷಿತರೇ ಭಾಗಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಮೈಸೂರು ಕುಂದೂರು ಮಠದ ಶರಶ್ಚಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ಕೆ.ಪಿ.ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಹಾಗೂ ಕೆ.ಸಿ.ಶಿವಪ್ಪ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅನಕ್ಷರಸ್ಥರು ಸಂಸ್ಕಾರವಂತರಾಗಿ ಬಾಳುತ್ತಿದ್ದರೆ ಶಿಕ್ಷಿತರು ಕೆಟ್ಟ ಸಂಗತಿಗಳಿಗೆ ಕಾರಣರಾಗುತ್ತಿದ್ದಾರೆ. ಮಾನವೀಯ ಮೌಲ್ಯಗಳು ತುಂಬಿರುವ ಶಿಕ್ಷಣದ ಕೊರತೆ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.

ಮನುಷ್ಯನಲ್ಲಿ ಸ್ವಾರ್ಥ ಹೆಚ್ಚಾಗುತ್ತಿದ್ದು ನೆಲ, ಜಲ, ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ನದಿಗಳನ್ನು ದೇವರಾಗಿ ಪೂಜಿಸುವ ಭಾರತೀಯರು ನದಿಗಳನ್ನು ಮಲಿನಗೊಳಿಸುತ್ತಿದ್ದಾರೆ. ಭಕ್ತಿ ಹಾಗೂ ಶ್ರದ್ಧಾಕೇಂದ್ರಗಳು ಅಶುಚಿತ್ವದಿಂದ ಕೂಡಿವೆ ಎಂದು. ಮನುಷ್ಯ ಚಿಂತನಾ ಶಕ್ತಿಯೊಂದಿಗೆ ಅಂತಃಕರಣ ಬೆಳೆಯಬೇಕು ಎಂದರು.

ADVERTISEMENT

ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಕಾವ್ಯ ಪನ್ನೀರಿನಲ್ಲಿ ಅದ್ದಿದ ವಸ್ತ್ರದಂತೆ, ಹಿಂಡಿದರೂ, ಒಣಗಿಸಿದರೂ ಪರಿಮಳ ದೂರವಾಗುವುದಿಲ್ಲ. ಹಾಗೆಯೇ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಜಾನಪದ ಕಾವ್ಯಗಳು ರಚನೆಯಾಗಿರುವ ಚಾಮರಾಜನಗರ ಜಿಲ್ಲೆ ಜನಪದೀಯವಾಗಿ ಅತ್ಯಂತ ಶ್ರೀಮಂತವಾದ ನೆಲ ಎಂದರು.

ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡರೂ ಅತ್ಯಂತ ಹೆಚ್ಚು ಅರಣ್ಯ ಸಂಪತ್ತು ಹೊಂದಿರುವ, ಜಲಾಶಯ, ಜಲಪಾತಗಳನ್ನು ಹೊಂದಿರುವ, ಧಾರ್ಮಿಕ ಶ್ರೇಷ್ಠತೆ ಹೊಂದಿರುವ ಈ ನೆಲ ಮಲೆ ಮಹದೇಶ್ವರ, ಬಿಳಿಗಿರಿ ರಂಗನಾಥ ನಡೆದಾಡಿರುವ ಪುಣ್ಯ ನೆಲ ಎಂದರು.

ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಪ್ರೇಮ ಕವಿಯಾಗಿದ್ದ ಶಿವಪ್ಪನವರು ಕ್ರಮೇಣ ಆಧ್ಯಾತ್ಮ ಕವಿಯಾದರು. ಭಗವಂತನೊಂದಿಗೆ ಅನುಸಂಧಾನದಿಂದ ಮಾತ್ರ ಇದು ಸಾಧ್ಯ ಎಂದರು.

ಶರಣ ಸಾಹಿತ್ಯವು ಶೋಷಣೆ, ಅಸಮಾನತೆ, ಜಾತೀಯತೆ, ಮೂಢನಂಬಿಕೆಗಳ ವಿರುದ್ಧ ವಿರುದ್ಧ ದನಿ ಎತ್ತಿದೆ. ಹಾಗಾಗಿ ಶರಣ ಸಾಹಿತ್ಯ ಸಾವಿರಾರು ವರ್ಷಗಳಾದರೂ ಇಂದಿಗೂ ಪ್ರಸ್ತುತ. ಧರ್ಮ, ಶಿಕ್ಷಣದ ಆಶಯ ಲೋಕ ಕಲ್ಯಾಣವಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಬಿ.ಕೆ.ರವಿಕುಮಾರ್ ಮಾತನಾಡಿ, ಸುತ್ತೂರು ಶ್ರೀಗಳ ಆದೇಶದಂತೆ ಪರಿಷತ್‌ನ ಜಿಲ್ಲಾಧ್ಯಕ್ಷ ಸ್ಥಾನದ ಹೊಣೆ ವಹಿಸಿಕೊಂಡಿದ್ದು ಎಲ್ಲರ ಸಹಕಾರದಿಂದ ಪರಿಷತ್‌ನ ರಥವನ್ನು ಸಮರ್ಥವಾಗಿ ಮುನ್ನಡೆಸುತ್ತೇನೆ. ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ದತ್ತಿಗಳಿದ್ದು, ಮುಂದೆ, ನಿರಂತರ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಜಿಲ್ಲಾ ಸಮ್ಮೇಳನ ಆಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಯಳಂದೂರು ಶಿಕ್ಷಕ ರಾಜು ಅವರಿಗೆ ಕೆ.ಪಿ. ಚಿಕ್ಕವೀರಯ್ಯ ಶಿಕ್ಷಕ ಪ್ರಶಸ್ತಿ ಹಾಗೂ ಗುಂಡ್ಲುಪೇಟೆಯ ಮಹಾಲಕ್ಷ್ಮಿ ಅವರಿಗೆ ಕೆ.ಸಿ. ಶಿವಪ್ಪ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕೆ.ಸಿ. ಶಿವಪ್ಪ ಅವರ ಮುದ್ದುರಾಮ ಒಂದು ಪರಿಮಳದ ಪಯಣ ಕಾವ್ಯವನ್ನು ವಿದುಷಿ ಶುಭಾ ರಾಘವೇಂದ್ರ ಹಾಡಿದರು. ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಕಾವ್ಯದ ತಿರುಳನ್ನು ವ್ಯಾಖ್ಯಾನಿಸಿದರು. 

ಕಾರ್ಯಕ್ರಮದಲ್ಲಿ ಮೈಸೂರು ಪ್ರಮತಿ ಶಿಕ್ಷಣ ಸಂಸ್ಥೆಯ ಎಚ್.ವಿ.ರಾಜೀವ್, ಸಾಹಿತಿ ಕೆ.ಸಿ.ಶಿವಪ್ಪ, ಪ್ರಸಾರಾಂಗ ವಿಭಾಗದ ನಿವೃತ್ತ ಅಧಿಕಾರಿ ತಳವಾರ್, ಮುಖಂಡರಾದ ಬಿ.ಎಸ್.ವಿನಯ್, ಹಲವು ಸಂಘಟನೆಗಳ ಮುಖ್ಯಸ್ಥರು ಇದ್ದರು.