
ಚಾಮರಾಜನಗರ: ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಶಿಕ್ಷಣವೇ ಅಸ್ತ್ರವಾಗಿದ್ದು, ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕೆಇಬಿ ಲೆಕ್ಕಾಧಿಕಾರಿ ಎನ್.ಮಹೇಶ್ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಕಚೇರಿಯಲ್ಲಿ ಈಚೆಗೆ ಜಿಲ್ಲಾ ಉಪ್ಪಾರ ಯುವಕರ ಸಂಘದ 8ನೇ ವಾರ್ಷಿಕೋತ್ಸವ ಹಾಗೂ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಉಳಿದ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬಂದಿವೆ. ಉಪ್ಪಾರ ಸಮುದಾಯದಲ್ಲಿ ಕೃಷಿಕರು, ಸರ್ಕಾರಿ ನೌಕರರು ವಿರಳವಾಗಿದ್ದು ಸಣ್ಣ ವ್ಯಾಪಾರಸ್ಥರು, ಕೂಲಿ ಮಾಡುವವರು ಹೆಚ್ಚಾಗಿದ್ದಾರೆ. ಸಮುದಾಯ ಅಭಿವೃದ್ಧಿ ಹೊಂದಲು ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಹರದನಹಳ್ಳಿಯ ಗಡಿ ಯಜಮಾನ ಜಯಸ್ವಾಮಿ ಮಾತನಾಡಿ, ಸಮುದಾಯ ಮೌಢ್ಯದಿಂದ ದೂರ ಇರಬೇಕು. ಬಾಲ್ಯವಿವಾಹಗಳ ದುಷ್ಪರಿಣಾಮ ಅರಿತು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.
ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ಸಮುದಾಯ ಪ್ರತಿಭಾವಂತ ವಿದ್ಯಾರ್ಥಿಗಳು, ಅಧಿಕಾರಿಗಳನ್ನು, ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವನ್ನು ಉಪ್ಪಾರ ಯುವಕರ ಸಂಘ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದೆ ಎಂದರು.
ಅಯ್ಯನ ಸರಗೂರು ಮಠದ ಮಹದೇವಸ್ವಾಮಿ ಸ್ವಾಮೀಜಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಆರ್ಶೀವಚನ ನೀಡಿದರು. ಪರಿಸರ ಪ್ರೇಮಿ ಸಿ.ಎಂ.ವೆಂಕಟೇಶ್, ಪತ್ರಕರ್ತರಾದ ಬಸವರಾಜು, ಮಂಜುಕುಮಾರ್, ಮುಖಂಡರಾದ ನಾಗರಾಜು, ಡಾ. ಗಿರಿದರ್ಶನ್, ಶಿಕ್ಷಕ ರಾಜು, ಎಎಸ್ಐ ಬಂಗಾರು ಹಾಗೂ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಚಾಮರಾಜನಗರ ಸರ್ಕಾರಿ ಐಟಿಐ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಟಿ.ಎ.ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಸೋಮಣ್ಣ, ಜಿಲ್ಲಾ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ಬಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಶಿವಕುಮಾರ್ ಕೆ.ಮಹದೇವ ಸ್ವಾಮಿ, ಕೂಡ್ಲೂರು ಮಹೇಶ್, ಶ್ರೀನಿವಾಸ, ಯ.ಜಯಸಿದ್ದು, ಯ.ಮಹದೇವಶೆಟ್ಟಿ, ಮರಿಸ್ವಾಮಿ, ಪ್ರಕಾಶ್, ಜವರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.