
ಮಹದೇಶ್ವರ ಬೆಟ್ಟ: ‘ಡಿಜಿಟಲ್ ಯುಗದಲ್ಲೂ ಜಿಲ್ಲೆಯ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ 18 ಹಳ್ಳಿಗಳಿಗೆ ವಿದ್ಯುತ್, ರಸ್ತೆಯಂತಹ ಕನಿಷ್ಠ ಮೂಲಸೌಲಭ್ಯಗಳು ಇಲ್ಲದಿರುವುದು ಬೇಸರದ ವಿಚಾರ’ ಎಂದು ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಮಹದೇಶ್ವರ ಪ್ರೌಢಶಾಲೆಯಲ್ಲಿ ಮಂಗಳವಾರ ವೋಲ್ವೊ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸ್ಥಾಪನೆಯಾದ ಪ್ರಯೋಗಾಲಯ, 200 ವಿದ್ಯಾರ್ಥಿಗಳಿಗೆ ಡೆಸ್ಕ್ ಮತ್ತು ಡಿಜಿಟಲ್ ಕ್ಲಾಸ್ ರೂಂ ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ‘ಬೆಟ್ಟದ ಆಸುಪಾಸಿನ ಗ್ರಾಮಗಳು ಮೂಲಸೌಕರ್ಯಗಳ ಕೊರತೆ ಅನುಭವಿಸುತ್ತಿವೆ. ವಿದ್ಯಾರ್ಥಿಗಳಿಗೆ ಕಾಡಿನ ದಾರಿಯಲ್ಲಿ ಬೆಟ್ಟಗುಡ್ಡ ಹತ್ತಿ ಇಳಿದು ವಿದ್ಯಾಭ್ಯಾಸಕ್ಕೆ ತೆರಳಬೇಕಾದ ಅನಿವಾರ್ಯ ಇದೆ’ ಎಂದರು.
‘ತಂತ್ರಜ್ಞಾನ ಆಧಾರಿತ ಯುಗದಲ್ಲಿ ಡಿಜಿಟಲ್ ಶಿಕ್ಷಣ ಮುನ್ನಲೆಗೆ ಬಂದಿರುವ ಹೊತ್ತಿನಲ್ಲಿ ಕನಿಷ್ಠ ಮೂಲಸೌಲಭ್ಯಗಳು ಇಲ್ಲದೆ ತಾಲ್ಲೂಕಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿರುವುದು ದುರಂತ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ’ ಎಂದು ಸ್ವಾಮೀಜಿ ಹೇಳಿದರು.
‘ಹೊಸ ಆವಿಷ್ಕಾರ ಹಾಗೂ ತಂತ್ರಜ್ಞಾನ ಬಳಕೆಯಲ್ಲಿ ಮುಂದಿರುವ ಪ್ರತಿಷ್ಠಿತ ವೋಲ್ವೊ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಮಹದೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸ್ಟೆಮ್ ಪ್ರಯೋಗಲಯ ನಿರ್ಮಾಣ ಮಾಡಲಾಗಿದ್ದು ಅಭಿನಂದನೀಯ ಕಾರ್ಯ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪ್ರಯೋಗಾಲಯ ಮಹತ್ವದ್ದಾಗಿದ್ದು ವಿದ್ಯಾರ್ಥಿಗಳು ವಿಭಿನ್ನ ಮಾದರಿಯ ಕಲಿಕೆಯತ್ತ ಹೆಚ್ಚಿನ ಗಮನ ಹರಿಸಲು ನೆರವಾಗಲಿದೆ.
ಧಾರ್ಮಿಕ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಬುಡಕಟ್ಟು ಸಮುದಾಯ ಮತ್ತು ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಒತ್ತು ನೀಡಿರುವ ವೋಲ್ವೋ ಸಂಸ್ಥೆಯ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.
ವೊಲ್ವೋ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿ ನಿರ್ದೇಶಕ ಜಿ.ವಿ.ರಾವ್ ಮಾತನಾಡಿ ವಿದ್ಯಾರ್ಥಿಗಳ ಸಮಕಾಲೀನ ವೃತ್ತಿಜೀವನಕ್ಕೆ ಸಂಬಂಧಿಸಿದ ಜೀವನ ಕೌಶಲಗಳ ಕಲಿಕೆಗೆ ಒತ್ತು ನೀಡಲಾಗುತ್ತಿದೆ ಎಂದರು.
ಈ ಸಂಧರ್ಭ ವೊಲ್ವೋ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ನಿರ್ದೇಶಕ ಜಿ.ವಿ. ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಸಂಸ್ಥೆಯ ಮುಖ್ಯಸ್ಥರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
‘ಶಿಕ್ಷಣ ದಾಸೋಹ’
1964ರಲ್ಲಿ ಆರಂಭಗೊಂಡ ಮಲೆ ಮಹದೇಶ್ವರ ಸ್ವಾಮಿ ಕೃಪಾ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಬೆಳಕು ಪಸರಿಸುತ್ತಾ ಬಂದಿದೆ. 21 ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನೀಡುತ್ತಿವೆ. ಸಂಸ್ಕೃತ ಯೋಗ ಲಲಿತ ಕಲೆ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೂ ಅವಕಾಶ ನೀಡಿದೆ. ಮಠ ಅನಾಥಾಶ್ರಮ ವೃದ್ಧಾಶ್ರಮ ಹಾಗೂ ಮತ್ತು ಗೋಶಾಲೆಗಳನ್ನು ನಡೆಸಲಾಗುತ್ತಿದ್ದು ಲಕ್ಷಾಂತರ ಭಕ್ತರು ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ನೀಡುತ್ತಿದೆ. ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲೂ ಮಠ ಕೆಲಸ ಮಾಡುತ್ತಿದೆ ಎಂದು ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.