ಸಂತೇಮರಹಳ್ಳಿ: ಶಿಕ್ಷಣದಿಂದ ಮಾತ್ರ ವೈಯಕ್ತಿಕ ಹಾಗೂ ದೇಶದ ಪ್ರಗತಿ ಸಾಧ್ಯ ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ತಿಳಿಸಿದರು.
ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೇಂಜರ್ಸ್ ಅಂಡ್ ರೋವರ್ಸ್ ಹಾಗೂ ಇತರ ಸಮಿತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸ್ಥಿತಿ ಮುಂದುವರಿದರೆ ದೇಶದ ಮಾನವ ಸಂಪನ್ಮೂಲ ಆಭಿವೃದ್ಧಿಗೆ ಧಕ್ಕೆಯಾಗಲಿದೆ. ಗ್ರಾಮೀಣ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣವನ್ನು ಪಡೆಯುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಪ್ರೋತ್ಸಾಹಿಸುವ, ಕೌಶಲ ಅಭಿವೃದ್ಧಿಗೆ ಪೂರಕ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಸೇವಾ ಮನೋಭಾವವನ್ನು ರೂಪಿಸುವ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಹೆಚ್ಲುವರಿ ಜಿಲ್ಲಾಧಿಕಾರಿ ಜವರೇಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕೌಟುಂಬಿಕ ಜವಾಬ್ದಾರಿ ಅರಿತು, ಕಠಿಣ ಪರಿಶ್ರಮ, ನಿರಂತರ ಅಭ್ಯಾಸದಿಂದ ಅಧ್ಯಯನ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಚಾಮರಾಜನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು ಮತ್ತು ವಿನಯದ ಜತೆಗೆ ಪುಸ್ತಕ ಪ್ರೇಮವನ್ನು ಬೆಳೆಸಿಕೊಂಡು ಭವಿಷ್ಯದ ಸ್ಪರ್ಧೆಗೆ ಸಜ್ಜುಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಥಿಯೋಡರ್ ಲೂಥರ್, ಐಕ್ಯುಎಸ್‌ಸಿ ಸಂಚಾಲಕ ದಿಲೀಪ್, ಕ್ರೀಡಾಸಂಚಾಲಕ ಅಶೋಕ್, ಸಾಂಸ್ಕೃತಿಕ ಸಂಚಾಲಕಿ ಡಾ.ಶಶಿಕಲಾ, ಸಹ ಪ್ರಾಧ್ಯಾಪಕಿ ವಾಣಿ, ಸಿಂಧು, ಶಿವಕುಮಾರ್, ಬಸವಣ್ಣ, ಮನೋಜ್, ಕಚೇರಿ ಅಧೀಕ್ಷಕ ರವಿ, ಶ್ರೀನಿವಾಸ್ ರಾಜೆ ಅರಸ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.