ಗುಂಡ್ಲುಪೇಟೆ: ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರಕ್ಕೆ ಯುವಕರ ಆಕ್ರಮ ಪ್ರವೇಶ ಮಾಡಿ ಆನೆಗಳ ಜೊತೆ ಪೋಟೊ ತೆಗೆಸಿಕೊಂಡಿದ್ದಾರೆ’ ಎಂದು ಪರಿಸರವಾದಿ ಜೋಸೆಫ್ ಹೂವರ್ ಆರೋಪಿಸಿದ್ದಾರೆ.
ಆನೆ ಶಿಬಿರದಲ್ಲಿ ಸಾಕಾನೆಗಳ ಜೊತೆ ಇಬ್ಬರು ಯುವಕರು ಫೋಟೊ ಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹುಲಿಗಳ ಆವಾಸ ಸ್ಥಾನವಾಗಿರುವ ಅರಣ್ಯಕ್ಕೆ ಯುವಕರು ಹೇಗೆ ಹೋದರು. ಯಾರ ಪ್ರಭಾವದಿಂದ ಇಂತಹ ಘಟನೆಗಳು ನಡೆಯುತ್ತಿವೆ’ ಎಂದು ಅವರು ಪ್ರಶ್ನಿಸಿದ್ದಾರೆ.
‘ಬಂಡೀಪುರದಲ್ಲಿ ವಿವಿಧ ಸಂಶಯಾಸ್ಪದ ಘಟನೆಗಳು ನಡೆಯುತ್ತಿದ್ದರೂ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಕೂಡಲೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸಂಬಂಧ ಪಟ್ಟ ಅರಣ್ಯಾಧಿಕಾರಿಗಳು ಹಾಗೂ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹೂವರ್ ಒತ್ತಾಯಿಸಿದ್ದಾರೆ.
‘ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೀಪುರದಲ್ಲಿ ನಡೆಯುತ್ತಿರುವ ಸಂಶಯಾಸ್ಪದ ಘಟನೆಗಳ ಬಗ್ಗೆ ಕೂಡಲೇ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಮುಂದಿನ ದಿನಗಳಲ್ಲಿ ಘಟನೆಗಳು ಜರುಗದಂತೆ ಎಚ್ಚರಿಕೆ ನೀಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಪ್ರತಿಕ್ರಿಯೆ ನೀಡಿ, ‘ಯುವಕರು ಮಾವುತರ ಸಂಬಂಧಿಗಳು ಎಂದು ತಿಳಿದು ಬಂದಿದೆ. ರಾಂಪುರ ಆರ್‍ಎಫ್‍ಓ ಅವರಿಂದ ಹೆಚ್ಚಿನ ಮಾಹಿತಿ ಪಡೆದು ಪರಿಶೀಲನೆ ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.