
ಕೊಳ್ಳೇಗಾಲ ತಾಲ್ಲೂಕಿನ ಹಿತ್ತಲ ದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ, ರೋಟರ‍್ಯಾಕ್ಟ್ ಕ್ಲಬ್ ಆಫ್ ಬೆಂಗಳೂರು ನಾಗಸಂದ್ರ ಮತ್ತು ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ..
ಕೊಳ್ಳೇಗಾಲ: ಕಸದಿಂದ ರಸ ಎಂಬ ಪರಿಕಲ್ಪನೆಯಿಂದ ತ್ಯಾಜ್ಯ ಪರಿಸರವನ್ನು ಸೇರಿ, ಉಂಟಾಗಬಹುದಾದ ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು ಎಂದು ಕೊಳ್ಳೇಗಾಲ ವಲಯ ಅರಣ್ಯ ಅಧಿಕಾರಿ ವಾಸು ಬಿ.ಎಸ್. ಹೇಳಿದರು.
ತಾಲ್ಲೂಕಿನ ಹಿತ್ತಲ ದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ, ರೋಟರ‍್ಯಾಕ್ಟ್ ಕ್ಲಬ್ ಆಫ್ ಬೆಂಗಳೂರು ನಾಗಸಂದ್ರ ಮತ್ತು ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ, ಕೊಳ್ಳೇಗಾಲ ವನ್ಯಜೀವಿ ವಲಯ, ಕೊಳ್ಳೇಗಾಲ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಚಂದನವನ–2 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇ–ತ್ಯಾಜ್ಯ ಸಂಗ್ರಹದ ದೃಷ್ಟಿಕೋನ ಸಾಮಾಜಿಕ ಜವಾಬ್ದಾರಿಯ ಪರಿಕಲ್ಪನೆಯ ಜೊತೆ ಪರಿಸರ ಸಂರಕ್ಷಣೆ ಬದ್ಧತೆಯಿಂದ ಕೂಡಿದೆ. ಇ- ತ್ಯಾಜ್ಯ ಸಂಗ್ರಹ ಪರಿಕಲ್ಪನೆಯು ನಿಜಕ್ಕೂ ಅರ್ಥಪೂರ್ಣ ಯೋಜನೆಯಾಗಿದ್ದು, ಕಾಡಂಚಿನ ,ಗ್ರಾಮೀಣ ವಿದ್ಯಾರ್ಥಿಗಳ ಮತ್ತು ಸ್ಥಳೀಯ ಸಮುದಾಯದ ಜನರಿಗೆ ಸಕಾರಾತ್ಮಕ ಪ್ರಭಾವ ಬೀರಿದೆ. ಹಿತ್ತಲದೊಡ್ಡಿ ಶಾಲೆಯ ಈಗಿನ ಮಕ್ಕಳಲ್ಲದೇ ಮುಂಬರುವ ಪೀಳಿಗೆಯು ಇದರ ಪ್ರಯೋಜನವನ್ನು ಪಡೆಯುತ್ತಾರೆ. ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಿ ದೈಹಿಕ ಸಮರ್ಥತೆಯನ್ನು ಕಾಪಾಡಿ ಕೊಂಡು ಆರೋಗ್ಯಯುತ ಜೀವನವನ್ನು ನಡೆಸಬೇಕು. ಹಾಗಾಗಿ ಮಕ್ಕಳು ಪರಿಸರದ ಬಗ್ಗೆಯೂ ಕಾಳಜಿ ವಹಿಸಬೇಕು. ಪರಿಸರ ಇದ್ದರೆ ಮಾತ್ರ ನಾವು ಬದುಕಲು ಸಾಧ್ಯ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಈ ಭೂಮಿ ಉಳಿಯುವುದಿಲ್ಲ ಎಂದರು.
ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ರೋಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಕಾರ್ಕಲ ವೆನ್ನೆಲಾ ಮಾತನಾಡಿ, ಸ್ವಯಂಸೇವಕರು ಇ- ತ್ಯಾಜ್ಯವನ್ನು ಸಂಗ್ರಹಿಸಿ, ಸುಸ್ಥಿರ ವಿಲೇವಾರಿಯಿಂದ ಬಂದ ಹಣದಿಂದ ಶಾಲೆಯ ಆಟದ ಮೈದಾನದಲ್ಲಿ ಜಾರು ಬಂಡೆ, ತೂಗುಯ್ಯಾಲೆ ಮಾಡಿಸಿಕೊಡಲಾಗಿದೆ. ಎರಡೂ ಕ್ಲಬ್‌ನ ಸ್ವಯಂ ಸೇವಕರು 3 ತಿಂಗಳಿಗೂ ಅಧಿಕ ಸಮಯದ ಕಾಲ ಹಲವೆಡೆ ಇ-ತ್ಯಾಜ್ಯದ ಜವಾಬ್ದಾರಿಯುತ ಮರುಬಳಕೆ ಮತ್ತು ವಿಲೇವಾರಿ ಬಗ್ಗೆ ಅರಿವು ಮೂಡಿಸಬೇಕು. ನಿಷ್ಕಲ್ಮಶ ಮನಸ್ಸಿನ ಮುಗ್ಧಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸಲು ಯಶಸ್ವಿಯಾಗಿರುವುದಕ್ಕೆ ಸಂತೋಷವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರ‍್ಯಾಕ್ಟ್ ಕ್ಲಬ್ ಆಫ್ ಬೆಂಗಳೂರು ನಾಗಸಂದ್ರದ ಅಧ್ಯಕ್ಷ ಪೃಥ್ವಿರಾಜ್, ರಾಮಯ್ಯ ವಿಶ್ವ ವಿದ್ಯಾಲಯದ ರೋಟರ‍್ಯಾಕ್ಟ್ ನಿಯೋಜಿತ ಅಧ್ಯಕ್ಷ ಯಶವಂತ ಗೌಡ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಶೋಯಬ್ ಪಾಷಾ, ಗ್ರಾಮ ಪಂಚಾಯಿತಿ ಸದಸೈ ಕಮಲಮ್ಮ, ಮರಿಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಜು, ಉಪ ವಲಯ ಅರಣ್ಯ ಅಧಿಕಾರಿ ಬಿ. ಅನಂತ ರಾಮು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.