ADVERTISEMENT

ಚಾಮರಾಜನಗರ: ಜೀವಸಂಕುಲಕ್ಕಾಗಿ ಪ್ರಕೃತಿ ಉಳಿಸಿ-ದೊರೆರಾಜು

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೆರಾಜು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 3:10 IST
Last Updated 17 ನವೆಂಬರ್ 2025, 3:10 IST
ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರಿನ ಕೆಸಿಟಿಯು ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಇ.ಎಸ್.ಎಂ. ಯೋಜನೆ ಕುರಿತು ಅರಿವು ಕಾರ್ಯಗಾರ ನಡೆಯಿತು
ಚಾಮರಾಜನಗರದ ಜೆ.ಎಸ್.ಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರಿನ ಕೆಸಿಟಿಯು ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಇ.ಎಸ್.ಎಂ. ಯೋಜನೆ ಕುರಿತು ಅರಿವು ಕಾರ್ಯಗಾರ ನಡೆಯಿತು   

ಚಾಮರಾಜನಗರ: ‘ಮನುಷ್ಯ ಪ್ರಕೃತಿಯನ್ನು ರಕ್ಷಿಸಿದರೆ ಪ್ರಕೃತಿ ಮನುಕುಲವನ್ನು ಉಳಿಸುತ್ತದೆ ಎಂಬ ಸತ್ಯದ ಅರಿವಿರಬೇಕು, ಜೀವ ಸಂಕುಲದ ಉಜ್ವಲ ಭವಿಷ್ಯಕ್ಕಾಗಿ ಪ್ರಕೃತಿ ಉಳಿಸಬೇಕಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೆರಾಜು ಹೇಳಿದರು.

ನಗರದ ಜೆ.ಎಸ್.ಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರಿನ ಕೆಸಿಟಿಯು ಟೆಕ್ಸಾಕ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಹಯೋಗದಲ್ಲಿ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆ ಹೆಚ್ಚಿಸಿ ವೇಗಗೊಳಿಸುವ ಯೋಜನೆಯಡಿ ಇ.ಎಸ್.ಎಂ. ಯೋಜನೆ ಕುರಿತು ಹಮ್ಮಿಕೊಳ್ಳಲಾಗಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆಗೆ ಸರ್ಕಾರವು ಹಲವು ಯೋಜನೆ ಕಾರ್ಯಕ್ರಮಗಳನ್ನು ರೂಪಿಸಿದೆ. ವ್ಯರ್ಥವಾಗುವ ಶಕ್ತಿಯ ಮೂಲಗಳನ್ನು ಉಳಿಸಿ ಪರಿಸರದಲ್ಲಿ ಸಮತೋಲನ ಕಾಪಾಡುವುದು ಪರಿಸರ ಮತ್ತು ಸಾಮಾಜಿಕ ನಿರ್ವಹಣೆ ಯೋಜನೆಯ ಸದುದ್ದೇಶವಾಗಿದೆ. ಯೋಜನೆಯಡಿ ನವಉದ್ಯಮ ಆರಂಭಿಸುವವರಿಗೆ ಪರಿಸರ, ಸಾಮಾಜಿಕ ಕಳಕಳಿಯ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಎಂದರು.

ADVERTISEMENT

ಇ.ಎಸ್.ಎಂ ಯೋಜನೆಯು ಮುಖ್ಯವಾಗಿ ಕಾರ್ಖಾನೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಅಥವಾ ಕೊಳಚೆ ಸಂಸ್ಕರಣಾ ಘಟಕ ಸ್ಥಾಪಿಸಿ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಪರಿಸರಕ್ಕೆ ಬಿಡುವ ಮೊದಲು ಅದನ್ನು ಶುದ್ಧೀಕರಿಸುವ ಪ್ರಕ್ರಿಯೆಯಾಗಿದೆ. ಕೈಗಾರಿಕಾ ತ್ಯಾಜ್ಯದ ನೀರಿನಲ್ಲಿರುವ ಮಾಲಿನ್ಯಕಾರಕಗಳನ್ನು ತೆಗೆದು ನೀರಿನ ಗುಣಮಟ್ಟವನ್ನು ಸುಧಾರಿಸಿ ಪರಿಸರ ಮತ್ತು ಮನುಷ್ಯರ ಆರೋಗ್ಯಕ್ಕೆ ಹಾನಿಯಾಗುವುದನ್ನು ತಡೆದು, ಪುನರ್ಬಳಕೆ ಮಾಡಬೇಕಿದೆ ಎಂದು ತಿಳಿಸಿದರು.

ತ್ಯಾಜ್ಯ ನಿರ್ವಹಣೆ ಯೋಜನೆಯಡಿ ಕಸ ಸಂಗ್ರಹಿಸಿ, ವಿಂಗಡಿಸಿ, ಸಂಸ್ಕರಿಸುವುದು ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಅಥವಾ ಮರುಬಳಕೆ ಮಾಡಲಾಗುತ್ತದೆ. ಸ್ವಂತ ಕಾರ್ಖಾನೆ ಅಥವಾ ಉದ್ಯಮ ಸ್ಥಾಪಿಸಲು ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯಗಳು ದೊರೆಯುತ್ತಿವೆ. ಮಹಿಳೆಯರಿಗೆ ಶೇ 33ರಷ್ಟು ವಿಶೇಷ ಸೌಲಭ್ಯಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಉದ್ದಿಮೆಗಳು ಹೆಚ್ಚಾಗಿ ಸ್ಥಾಪನೆಯಾದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ದೊರೆರಾಜು ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಬಿ.ವಿಜಯಕುಮಾರ್ ಮಾತನಾಡಿ, ಸರ್ಕಾರವು ಎಂ.ಎಸ್.ಎಂ.ಇ. ಯೋಜನೆಯಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಪ್ರತಿ ಜಿಲ್ಲೆಯಲ್ಲಿ 16 ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ನವ ಉದ್ಯಮಿಗಳಿಗೆ ಸರ್ಕಾರದಿಂದ ಶೇ 30ರಷ್ಟು ಸಹಾಯಧನ ನೀಡಲಾಗುತಿದೆ.ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ ನವ ಉದ್ಯಮಿಗಳು ‘ಇನ್ವೆಸ್ಟ್ ಕರ್ನಾಟಕ ತಂತ್ರಾಂಶ’ದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಆಲ್ ಇಂಡಿಯಾ ಗ್ರಾನೈಟ್ಸ್ ಅಸೋಸಿಯೇಷನ್‌ ಅಧ್ಯಕ್ಷ ಜಿ.ಎಂ. ಹೆಗಡೆ ಮಾತನಾಡಿ ಸರ್ಕಾರ ಪರಿಸರ ಸಂರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕೈಗಾರಿಕೆ ವಲಯದಲ್ಲಿ ನೀತಿ ನಿಯಮಗಳನ್ನು ರೂಪಿಸಿದೆ. ವಿದ್ಯಾರ್ಥಿಗಳು ಪರಿಸರದ ಕಾಳಜಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಉಪ ಪರಿಸರ ಅಧಿಕಾರಿ ಡಾ.ಶೃತಿ ಮತ್ತು ಸ್ಟಾಕ್ ಮಾರ್ಕೆಟಿಂಗ್ ನಿರ್ದೇಶಕ ಎಸ್.ಎಸ್. ಮೂರ್ತಿ ಉಪಸ್ಥಿತರಿದ್ದರು.

ಉದ್ದಿಮೆಗಳ ಸೃಷ್ಟಿಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ ಎಂ.ಎಸ್.ಎಂ.ಇ ಜಾಗೃತಿಗೆ 16 ಕಾರ್ಯಕ್ರಮಗಳ ಜಾರಿ ‘ಪರಿಸರ ಕೇಂದ್ರಿತ ಉದ್ಯಮಗಳ ಸ್ಥಾಪನೆ ಇಂದಿನ ಅಗತ್ಯ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.