ಯಳಂದೂರು: ತಾಲ್ಲೂಕಿನ ಬೂದಿತಿಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಳಭಾಗದಲ್ಲಿ ಛಾವಣಿ ಗಾರೆ ಪ್ರತಿದಿನ ಉದುರುತ್ತಿದ್ದು, ಮಕ್ಕಳು ಆತಂಕದಿಂದ ಕಲಿಯುವಂತಾಗಿದೆ. ಇದರಿಂದ ಪೋಷಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವಂತಾಗಿದೆ.
‘ಇಲ್ಲಿ 1 ರಿಂದ 7ನೇ ತರಗತಿಗೆ ಬೋಧನೆ ನಡೆಯುತ್ತಿದೆ. 38 ಮಕ್ಕಳು ಕಲಿಯುತ್ತಿದ್ದಾರೆ, ಮೂವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆತಂಕದ ನಡುವೆ ಪಠ್ಯ ಚಟುವಟಿಕೆಯಲ್ಲಿ ತೊಡಗುವಂತಾಗಿದೆ. ಈ ಬಗ್ಗೆ ದೂರು ನೀಡಿದರೂ ಸಂಬಂಧಪಟ್ಟವರು ಕ್ರಮವಹಿಸುತ್ತಿಲ್ಲ. ಕೆಲವೊಮ್ಮೆ ಗಾರೆ ಚಕ್ಕೆ ಕೆಳಕ್ಕೆ ಬೀಳುತ್ತದೆ. ಗಾರೆಯನ್ನು ಪ್ರತಿದಿನ ಹೊರಗೆ ಇಟ್ಟು ಕಲಿಸಬೇಕಿದೆ. ಮಕ್ಕಳ ಹಿತದೃಷ್ಟಿಯಿಂದ ತಕ್ಷಣ ಛಾವಣಿ ದುರಸ್ತಿಗೊಳಿಸಬೇಕು. ಈ ಬಗ್ಗೆ ಕ್ರಮವಹಿಸದಿದ್ದರೆ ಮಕ್ಕಳನ್ನು ಶಾಲೆಯಿಂದ ಹೊರಗೆ ಕೂರಿಸಬೇಕಾಗುತ್ತದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವಣ್ಣ ದೂರಿದರು.
‘ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಛಾವಣಿ ದೃಢತೆ ಕಳೆದುಕೊಂಡಿದೆ. ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವುದನ್ನು ತಪ್ಪಿಸುವ ದೆಸೆಯಲ್ಲಿ ಸಂಬಂಧಪಟ್ಟವರು ಕ್ರಮವಹಿಸಲಿ’ ಎನ್ನುತ್ತಾರೆ ಹಳೇ ವಿದ್ಯಾರ್ಥಿ ರಂಗಸ್ವಾಮಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.