ADVERTISEMENT

ಪ್ರವಾಹ: ತೆಂಗಿನ ಮರ ಏರಿ ಕುಳಿತ ರೈತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 15:58 IST
Last Updated 5 ಸೆಪ್ಟೆಂಬರ್ 2022, 15:58 IST

ಸಂತೇಮರಹಳ್ಳಿ (ಚಾಮರಾಜನಗರ): ‌ಭಾರಿ ಮಳೆ, ನದಿ, ಕೆರೆಕಟ್ಟೆ ಉಕ್ಕಿ ಉಂಟಾಗಿರುವ ಪ್ರವಾಹದಿಂದ ರಕ್ಷಿಸಿಕೊಳ್ಳಲು ಹೋಬಳಿಯ ಕಣ್ಣೇಗಾಲ ಗ್ರಾಮದಲ್ಲಿ ರೈತರೊಬ್ಬರು ತೆಂಗಿನ ಮರ ಏರಿ ಕುಳಿತಿದ್ದಾರೆ.

ಗ್ರಾಮದ ರಂಗಸ್ವಾಮಿ ನಾಯಕ (60) ಎಂಬುವವರು ಮರ ಹತ್ತಿ ಪ್ರವಾಹದಿಂದ ರಕ್ಷಣೆ ಪಡೆದಿದ್ದು, ಸೋಮವಾರ ಸಂಜೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅವರನ್ನು ಮರದಿಂದ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲು ಸಾಧ್ಯವಾಗಿಲ್ಲ.

‘ಸೋಮವಾರ ಬೆಳಿಗ್ಗೆ 6 ಗಂಟೆಗೆ ರಂಗಸ್ವಾಮಿ ಎಂದಿನಂತೆ ಜಮೀನಿಗೆ ಕೃಷಿ ಕೆಲಸಕ್ಕೆ ಹೋಗಿದ್ದಾರೆ. ಆಗ ನೆರೆ ಪರಿಸ್ಥಿತಿ ಇರಲಿಲ್ಲ. 11 ಗಂಟೆಗೆ ವಾಪಸ್‌ ಬರುವ ಹೊತ್ತಿಗೆ ನೀರಿನ ಮಟ್ಟ ಹೆಚ್ಚಿ ಪ್ರವಾಹ ಉಂಟಾಗಿತ್ತು. ನೀರು ಇಳಿದ ನಂತರ ಹೋಗೋಣ ಎಂದು ಅಲ್ಲೇ ಕುಳಿತಿದ್ದರು. ಆದರೆ, ಮಧ್ಯಾಹ್ನ, ಸಂಜೆಯ ಹೊತ್ತಿಗೆ ನೆರೆ ಮತ್ತಷ್ಟು ಹೆಚ್ಚಾಯಿತು. ಇದರಿಂದ ಅವರಿಗೆ ವಾಪಸ್‌ ಬರುವುದಕ್ಕೆ ಆಗಿಲ್ಲ’ ಎಂದು ಸ್ಥಳೀಯರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ADVERTISEMENT

‘ರಂಗಸ್ವಾಮಿ ಅವರು ತೆಂಗಿನ ಮರ ಏರಿ ಕುಳಿತಿರುವುದನ್ನು ಸ್ಥಳೀಯರು ನೋಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಪ್ರಯತ್ನ ಪಟ್ಟರೂ ಅವರನ್ನು ಕರೆತರಲು ಆಗಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.