ADVERTISEMENT

ಜೋತು ಬಿದ್ದ ವಿದ್ಯುತ್‌ ತಂತಿ ತಗುಲಿ ರೈತ ಸಾವು

ಚಾಮರಾಜನಗರ: ಕುತ್ತಿಗೆ ಕುಯ್ದ ತಂತಿ, ಮುಂಡ ನೆಲದಲ್ಲಿ, ರುಂಡ ತಂತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 12:12 IST
Last Updated 19 ಏಪ್ರಿಲ್ 2021, 12:12 IST
ವೇಲುಸ್ವಾಮಿ
ವೇಲುಸ್ವಾಮಿ   

ಚಾಮರಾಜನಗರ: ತಾಲ್ಲೂಕಿನ ಶಿವಪುರ ಬಳಿಕ ಕಟ್ಟೇಪುರ ಗ್ರಾಮದಲ್ಲಿ ಜಮೀನಿನಲ್ಲಿ ಜೋತು ಬಿದ್ದಿದ್ದ ವಿದ್ಯುತ್‌ ತಂತಿ ತಗುಲಿ ರೈತರೊಬ್ಬರು ಮೃತಪಟ್ಟಿದ್ದಾರೆ. ರೈತನ ಕುತ್ತಿಗೆಗೆ ತಂತಿ ತಗುಲಿದ್ದು, ತಲೆಯು ದೇಹದಿಂದ ತುಂಡಾಗಿ ತಂತಿಯಲ್ಲೇ ಸಿಕ್ಕಿಹಾಕಿಕೊಂಡಿತ್ತು.

ಕಟ್ಟೇಪುರ ಗ್ರಾಮದ ನಿವಾಸಿ ವೇಲುಸ್ವಾಮಿ (60) ಮೃತಪಟ್ಟ ರೈತ. ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.

ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ತೋಟಕ್ಕೆ ನೀರು ಹಾಕುವುದಕ್ಕಾಗಿ ಪಂಪ್‌ ಚಾಲೂ ಮಾಡಲು ವೇಲುಸ್ವಾಮಿ ಅವರು ಜಮೀನಿಗೆ ತೆರಳಿದ್ದರು. ಜಮೀನಿನಲ್ಲಿ ವಿದ್ಯುತ್‌ ತಂತಿಯೊಂದು ಜೋತು ಬಿದ್ದಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ನಡೆದುಕೊಂಡು ಹೋಗುತ್ತಿದ್ದಾಗ ಕುತ್ತಿಗೆಗೆ ತಾಗಿದೆ. ತಕ್ಷಣವೇ ವಿದ್ಯುತ್‌ ಆಘಾತ ಆಗಿದೆ. ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಂತಿಯು ಕತ್ತನ್ನು ಕುಯ್ದಿದ್ದು, ರುಂಡ ತಂತಿಯಲ್ಲೇ ಸಿಕ್ಕಿ ಹಾಕಿಕೊಂಡಿದೆ.

ADVERTISEMENT

ಜಮೀನಿಗೆ ಹೋದ ತಂದೆ ರಾತ್ರಿ 11 ಗಂಟೆಯಾದರೂ ಬಾರದೇ ಇದ್ದುದರಿಂದ, ಅವರನ್ನು ಹುಡುಕುತ್ತಾ ಮಗ ಜಮೀನಿಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.

ಮೇಲುಸ್ವಾಮಿ ಮೂಲತಃ ತಮಿಳುನಾಡಿನವರು. ಕಟ್ಟೇಪುರದಲ್ಲಿ ಜಮೀನು ಖರೀದಿಸಿ ನೆಲೆಸಿದ್ದರು.

ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಚಾಮರಾಜನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪೂರ್ಣಚಂದ್ರ ತೇಜಸ್ವಿ ಅವರು, ‘ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಇದೊಂದು ಆಕಸ್ಮಿಕ ದುರ್ಘಟನೆ. ತಂತಿ ಜೋತು ಬಿದ್ದಿರುವುದು ವೇಲುಸ್ವಾಮಿ ಅವರ ಗಮನಕ್ಕೆ ಬಾರದೆ ಇದ್ದುದರಿಂದ ಈ ರೀತಿ ಆಗಿದೆ. ಮೃತರ ಕುಟುಂಬಕ್ಕೆ ಇಲಾಖೆಯಿಂದ ₹5 ಲಕ್ಷ ಪರಿಹಾರ ನೀಡಲಾಗುವುದು. ಆದಷ್ಟು ಶೀಘ್ರವಾಗಿ ವಿತರಣೆ ಮಾಡಲಾಗುವುದು’ ಎಂದರು.

ಹೆಚ್ಚಿನ ‍ಪರಿಹಾರಕ್ಕೆ ಆಗ್ರಹ : ರೈತನ ಅಂತಿಮ ದರ್ಶನ ಪಡೆಯಲು ಶವಾಗಾರಕ್ಕೆ ಬಂದಿದ್ದ ರೈತ ಸಂಘದ ಮುಖಂಡರು ಸೆಸ್ಕ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

‘ಹಗಲಿನಲ್ಲೇ ಮೂರು ಫೇಸ್‌ ವಿದ್ಯುತ್‌ ಪೂರೈಕೆ ಮಾಡಬೇಕು ಎಂದು ಸರ್ಕಾರ, ನಿಗಮಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಹಾಗಿದ್ದರೂ ರಾತ್ರಿ ಹೊತ್ತು ಮೂರು ಫೇಸ್‌ ವಿದ್ಯುತ್‌ ನೀಡುತ್ತಿದ್ದಾರೆ. ಇದರಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ರಾತ್ರಿ ಹೊತ್ತು ಕೃಷಿ ಚಟುವಟಿಕೆಗಳು ನಡೆಯಬಾರದು. ಕಾಡು ಪ್ರಾಣಿಗಳು, ವಿದ್ಯುತ್‌ ನಿಂದಾಗಿ ಅಪಾಯಗಳಿರುತ್ತವೆ. ಬೇಜವಾಬ್ದಾರಿ ಕೆಲಸಗಳಿಂದ ಈ ರೀತಿ ಆಗುತ್ತಿವೆ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಹೇಶ್‌ ಪ್ರಭು ಅವರು ದೂರಿದರು.

‘ಸೆಸ್ಕ್‌ ಈಗ ನೀಡುತ್ತಿರುವ ಪರಿಹಾರವನ್ನು ಒಪ್ಪಲು ಸಾಧ್ಯವಿಲ್ಲ. ಹೆಚ್ಚಿನ ಪರಿಹಾರ ನೀಡಬೇಕು. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಎಲ್ಲೂ ಮರುಕಳಿಸಬಾರದು. ಸೆಸ್ಕ್‌ ತಂತಿಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ತಂತಿಗಳನ್ನು ಸರಿಪಡಿಸಿ: ‘ಜಿಲ್ಲೆಯಾದ್ಯಂತ ಕೃಷಿ ಜಮೀನುಗಳಲ್ಲಿ‌ತಂತಿಗಳು ಜೋತಾಡುತ್ತಿದ್ದು, ಅಪಾಯಕ್ಕೆ ಆಹ್ವಾನಿಸುತ್ತಿವೆ. ಇವುಗಳನ್ನು ಸರಿಪಡಿಸಲು ಸೆಸ್ಕ್‌ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜ್ಯೋತಿಗೌಡನಪುರ ಸಿದ್ದರಾಜು ಅವರು ಒತ್ತಾಯಿಸಿದರು.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.