ADVERTISEMENT

ಹನೂರು ಲಸಿಕೆ ಅಭಿಯಾನ ತ್ವರಿತಕ್ಕೆ ರೈತರ ಒತ್ತಾಯ

ಹನೂರು: ಅಲ್ಲಲ್ಲಿ ಕಾಲುಬಾಯಿ ಜ್ವರ ಪ್ರಕರಣ, ಆರು ದಿನಗಳಲ್ಲಿ 11 ಸಾವಿರ ರಾಸುಗಳಿಗೆ ಲಸಿಕೆ

ಬಿ.ಬಸವರಾಜು
Published 23 ಡಿಸೆಂಬರ್ 2021, 20:30 IST
Last Updated 23 ಡಿಸೆಂಬರ್ 2021, 20:30 IST
ಹನೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಲಾಯಿತು
ಹನೂರು ತಾಲ್ಲೂಕಿನ ಗ್ರಾಮವೊಂದರಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಲಾಯಿತು   

ಹನೂರು: ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ಜ್ವರದ ನಿಯಂತ್ರಣಕ್ಕಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ತಾಲ್ಲೂಕಿನಲ್ಲೂ ಲಸಿಕಾ ಅಭಿಯಾನ ಆರಂಭಿಸಿದ್ದು, ಅರಣ್ಯದ ಅಂಚಿನ ಗ್ರಾಮಗಳಲ್ಲಿ ಜಾನುವಾರುಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಲ್ಲೂಕು ವ್ಯಾಪ್ತಿಯ ಚಿಕ್ಕಲ್ಲೂರು, ಮಹದೇಶ್ವರ ಬೆಟ್ಟದಲ್ಲಿ ಹಸು, ಆಡು ಕುರಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಬೆಟ್ಟದಲ್ಲಿ ಏಳು ಕುರಿಗಳು ಜ್ವರದಿಂದಾಗಿ ಮೃತಪಟ್ಟಿವೆ.

ಪಶು ಪಾಲನಾ ಇಲಾಖೆ ನೀಡಿರುವ ಮಾಹಿತಿಯಂತೆ ತಾಲ್ಲೂಕಿನಲ್ಲಿ 65,392 ಹಸುಗಳು, 4,174 ಎಮ್ಮೆ ಸೇರಿ 69,266 ಜಾನುವಾರುಗಳಿವೆ. ಇಲಾಖೆಯು ಇದೇ 16ರಿಂದ ಜಿಲ್ಲೆಯಾದ್ಯಂತ ಲಸಿಕೆ ಅಭಿಯಾನ ಆರಂಭಿಸಿದೆ. 2022ರ ಜನವರಿ 15ರಂದು ಮುಕ್ತಾಯಗೊಳಿಸುವ ಗುರಿ ಹಾಕಿಕೊಂಡಿದೆ.

ADVERTISEMENT

ಆದರೆ, ಬೆಟ್ಟಗುಡ್ಡಗಳಿಂದಲೇ ಆವೃತವಾಗಿರುವ ತಾಲ್ಲೂಕಿನಲ್ಲಿ ತಿಂಗಳ ಅವಧಿಯಲ್ಲಿ ಗುರಿ ತಲುಪುವುದೇ ಎಂಬ ಸಂದೇಹ ರೈತರಲ್ಲಿ ಮನೆ ಮಾಡಿದೆ.

ಡಿ.16ರಿಂದ 22ರವರೆಗಿನ ಅವಧಿಯಲ್ಲಿ 11 ಸಾವಿರ ರಾಸುಗಳಿಗೆ ಲಸಿಕೆ ಹಾಕಲಾಗಿದೆ. 25 ಸಿಬ್ಬಂದಿ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಪ್ರತಿ ದಿನ ಕನಿಷ್ಠ 1,500 ಲಸಿಕೆ ಹಾಕುವ ಗುರಿ ಹೊಂದಿದ್ದಾರೆ. ಇನ್ನು ಅಭಿಯಾನ ಮುಕ್ತಾಯಕ್ಕೆ ಮೂರು ವಾರಗಳು ಮಾತ್ರ ಬಾಕಿ ಇದ್ದು, ಇನ್ನೂ 55 ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಬೇಕಾಗಿದೆ.

ತಾಲ್ಲೂಕಿನಲ್ಲಿ ಕಾಡಂಚಿನ ಪ್ರದೇಶಗಳು ಹೆಚ್ಚಿವೆ. ಮಲೆ ಮಹದೇಶ್ವರ ವನ್ಯಧಾಮದ ಒಳಗಿರುವ ಗ್ರಾಮಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಜಾನುವಾರುಗಳು ಇವೆ.

‘ಗುಡ್ಡಗಾಡು ಪ್ರದೇಶದಿಂದಲೇ ಆವೃತವಾಗಿರುವ ರಾಮಾಪುರ ಹೋಬಳಿಯಲ್ಲಿ ಲಸಿಕಾ ಅಭಿಯಾನ ಆಮೆಗತಿಯಲ್ಲಿ ಸಾಗಿದೆ. ಒಂದು ತಿಂಗಳಲ್ಲಿ ಎಲ್ಲ ಜಾನುವಾರುಗಳಿಗೂ ಲಸಿಕೆ ಹಾಕುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಾನುವಾರುಗಳ ಸಂಖ್ಯೆ ಹೆಚ್ಚಿರುವುದರಿಂದ ಇಲಾಖೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದರೆ ಒಳ್ಳೆಯದು’ ಎಂದು ಪೊನ್ನಾಚಿ ಗ್ರಾಮದ ರೈತ ಮಾದೇವ ಹೇಳಿದರು.

ಅರಣ್ಯ ಇಲಾಖೆ ನೆರವು: ಕಾಲುಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ ಅರಣ್ಯ ಇಲಾಖೆ ಕೂಡ ಪಶುಪಾಲನಾ ಇಲಾಖೆಗೆ ನೆರವು ನೀಡಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು, ‘ತಾಲ್ಲೂಕಿನಲ್ಲಿ ಬಹುತೇಕ ಗ್ರಾಮಗಳು ಅರಣ್ಯದ ಮಧ್ಯದಲ್ಲಿರುವುದರಿಂದ ಅರಣ್ಯ ಇಲಾಖೆಯು ಗ್ರಾಮಗಳಿಗೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ, ಜೂನ್ ತಿಂಗಳಲ್ಲಿ 4 ಸಾವಿರ ಲಸಿಕೆಯನ್ನೂ ಪೂರೈಸಿತ್ತು’ ಎಂದರು.

‘ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ಲಸಿಕೆ ಹಾಕುತ್ತಿದ್ದೇವೆ. ರೈತರು ಸಹ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸುವುದರ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸಬೇಕು’ ಎಂದು ಅವರು ಮನವಿ ಮಾಡಿದರು.

ಪಶು ವೈದ್ಯರ ಕೊರತೆ

ತಾಲ್ಲೂಕಿನಲ್ಲಿ ಪಶುಪಾಲನಾ ಇಲಾಖೆಯು ವೈದ್ಯಾಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ತಾಲ್ಲೂಕಿನಲ್ಲಿರುವ 12 ಪಶು ಚಿಕಿತ್ಸಾಲಯಗಳ ಪೈಕಿ ರಾಮಾಪುರ ಆಸ್ಪತ್ರೆಯಲ್ಲಿ ಮಾತ್ರ ವೈದ್ಯಾಧಿಕಾರಿ ಇದ್ದಾರೆ. ಉಳಿದ 11 ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ.

‘ಚಾಮುಲ್‌ ಹಾಗೂ ಇಲಾಖೆಯಲ್ಲಿರುವ ಸಿಬ್ಬಂದಿಯನ್ನೇ ಬಳಸಿಕೊಂಡು ಲಸಿಕೆ ಹಾಕಲಾಗುತ್ತಿದೆ. ಕೊಳ್ಳೇಗಾಲ ಭಾಗದಲ್ಲಿ ಮುಗಿಯುತ್ತಿದ್ದಂತೆ ಇಲ್ಲಿನ ಸಿಬ್ಬಂದಿಯನ್ನೇ ಅಲ್ಲಿಗೆ ನಿಯೋಜಿಸಿ ಲಸಿಕೆ ಗುರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು’ ಎಂದು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಮುತ್ತುರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

--

ಅರಣ್ಯದಂಚಿನ ಜಾನುವಾರುಗಳಿಗೆ ಲಸಿಕೆ ನೀಡುವ ಸಲುವಾಗಿ ಪಶುಪಾಲನಾ ಇಲಾಖೆಗೆ ನಮ್ಮ ಇಲಾಖೆಯಿಂದ ₹ 1 ಲಕ್ಷ ನೀಡಲಾಗಿದೆ
ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.