ADVERTISEMENT

ಚಾಮರಾಜನಗರ ಜಿಲ್ಲೆಯಲ್ಲೂ ಬಂದ್ ಆಚರಿಸಲು ಸಿದ್ಧತೆ

ರೈತ, ಕನ್ನಡ ಸಂಘಟನೆಗಳು, ವಿರೋಧ ಪಕ್ಷಗಳ ಬೆಂಬಲ, ಎಂದಿನಂತೆ ಬಸ್‌ ಸಂಚಾರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 2:41 IST
Last Updated 27 ಸೆಪ್ಟೆಂಬರ್ 2021, 2:41 IST
ಸೋಮವಾರದ ಭಾರತ ಬಂದ್‌ ಅನ್ನು ಬೆಂಬಲಿಸುವಂತೆ ವರ್ತಕರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡುವುದಕ್ಕಾಗಿ ಕಬ್ಬು ಬೆಳೆಗಾರರ ಸಂಘ, ಬಿಎಸ್‌ಪಿ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೈಕ್‌ ರ‍್ಯಾಲಿ ನಡೆಸಿದರು
ಸೋಮವಾರದ ಭಾರತ ಬಂದ್‌ ಅನ್ನು ಬೆಂಬಲಿಸುವಂತೆ ವರ್ತಕರು ಹಾಗೂ ಸಾರ್ವಜನಿಕರಿಗೆ ಮನವಿ ಮಾಡುವುದಕ್ಕಾಗಿ ಕಬ್ಬು ಬೆಳೆಗಾರರ ಸಂಘ, ಬಿಎಸ್‌ಪಿ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬೈಕ್‌ ರ‍್ಯಾಲಿ ನಡೆಸಿದರು   

ಚಾಮರಾಜನಗರ: ಕೃಷಿ ಕಾನೂನುಗಳು, ಸರ್ಕಾರಿ ಸಂಸ್ಥೆಗಳ ಖಾಸಗೀಕರಣ, ಇಂಧನ, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ರೈತ ಸಂಘಟನೆಗಳು ಸೋಮವಾರ (ಸೆ.27) ಕರೆ ನೀಡಿರುವ ಭಾರತ ಬಂದ್ ಅನ್ನು ಜಿಲ್ಲೆಯಲ್ಲೂ ಅಚರಿಸಲು ರೈತ ಸಂಘಟನೆಗಳು, ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಸಿದ್ಧತೆ‌ ನಡೆಸಿವೆ.

ಚಾಮರಾಜನಗರ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಈಗಾಗಲೇ ರೈತ ಸಂಘಟನೆಗಳು ಹಾಗೂ ಇತರ ಸಂಘಟನೆಗಳ ಪ್ರತಿನಿಧಿಗಳು ಸಭೆ ಸೇರಿ ಬಂದ್‌ ಆಚರಿಸಲು ಹಾಗೂ ಸಮಾಜದ ಎಲ್ಲ ವರ್ಗದವರೂ ಇದಕ್ಕೆ ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಲು ಮನವಿ ಮಾಡಿದ್ದಾರೆ.

ಕರ್ನಾಟಕ ರಕ್ಷಣಾ ಪಡೆ ಸೇರಿದಂತೆ ವಿವಿಧ ಕನ್ನಡ, ಕಾರ್ಮಿಕ ಸಂಘಟನೆಗಳು ಬಂದ್‌ಗೆ ಬೆಂಬಲ ಘೋಷಿಸಿವೆ. ರಾಜಕೀಯ ಪಕ್ಷಗಳಾದ ಬಿಎಸ್‌ಪಿ ಹಾಗೂ ಎಸ್‌ಡಿಪಿಐ ಕೂಡ ಬಂದ್‌ ಪರವಾಗಿವೆ. ವರ್ತಕರು, ಆಟೊ, ಟ್ಯಾಕ್ಸಿಗಳ ಚಾಲಕರು ಹಾಗೂ ಮಾಲೀಕರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ADVERTISEMENT

ಬೆಂಬಲಿಸುವಂತೆ ಬೈಕ್‌ ರ‍್ಯಾಲಿ: ಈ ಮಧ್ಯೆ, ಸೋಮವಾರ ಭಾರತ ಬಂದ್‌ ಅನ್ನು ಬೆಂಬಲಿಸುವಂತೆರಾಜ್ಯ ಕಬ್ಬು ಬೆಳೆಗಾರರ ಸಂಘ, ಕನ್ನಡ ಪರ ಸಂಘಟನೆಗಳು, ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳು ಭಾನುವಾರ ನಗರದಲ್ಲಿ ಬೈಕ್ ರ‍್ಯಾಲಿ ಮೂಲಕ ತಟ್ಟೆ, ಚಮಕ ಕುಟ್ಟುವ ಜಾಗೃತಿ ಮೂಡಿಸಿದರು.

ಪ್ರವಾಸಿಮಂದಿರ ಆವರಣದಿಂದ ಆರಂಭವಾದ ರ‍್ಯಾಲಿ ದೊಡ್ಡಂಗಡಿ ಬೀದಿ, ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತ, ತಾಲ್ಲುಕು ಕಚೇರಿ, ಸೋಮವಾರಪೇಟೆ, ಹಳೆಯ ಆರ್‌ಟಿಒ, ಜೀವವಿಮೆ ಕಚೇರಿ, ನಂಜನಗೂಡು ವೃತ್ತ, ಸಂಪಿಗೆ ರಸ್ತೆಯ ಮೂಲಕ ಹಳೆಯ ಖಾಸಗಿ ಬಸ್ ನಿಲ್ದಾಣ, ಚಾಮರಾಜೇಶ್ವರ ದೇವಸ್ಥಾನ ಮುಂಭಾಗ ಮುಕ್ತಾಯಗೊಂಡಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ‘ದೇಶದಲ್ಲಿ ಕೇಂದ್ರ ಸರ್ಕಾರ ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿರುವ ನೀತಿ ಖಂಡಿಸಿ ದೆಹಲಿಯಲ್ಲಿ 10 ತಿಂಗಳಿಂದ ನಿರಂತರ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಸಾವಿರಾರು ಮುಗ್ಧ ರೈತರು ಮೃತಪಟ್ಟಿದ್ದರು. ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.

‘ಅಗತ್ಯವಸ್ತುಗಳಾದ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಧೋರಣೆಯನ್ನು ಖಂಡಿಸಿ ಹಾಗೂ ರೈತ, ದಲಿತ, ಕಾರ್ಮಿಕ ವರ್ಗದ ಜನರಿಗೆ ವಿರೋಧಿ, ಮಾರಕ ಕಾನೂನುಗಳನ್ನು ಜಾರಿಗೆ ತರಲು ಯತ್ನಿಸುತ್ತಿರುವುದು ಖಂಡನೀಯವಾದದ್ದು, ಕೇಂದ್ರ ಕೃಷಿ ಸಚಿವರಾದ ಶೋಭ ಕರಂದ್ಲಾಜೆ, ಪ್ರಲ್ಹಾದ ಜೋಶಿ ರೈತನ್ನು ದಲ್ಲಾಳಿಗಳು ಎಂದು ಮಾತನಾಡಿದ್ದಕ್ಕಾಗಿ ದೇಶದ ಜನರು ಹಾಗೂ ರೈತರ‌ ಕ್ಷಮೆ ಕೋರಬೇಕು’ ಎಂದರು.

ನಿಜಧ್ವನಿಗೋವಿಂದರಾಜು, ಬಿಎಸ್‌ಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪಟೇಲ್ ಶಿವಮೂರ್ತಿ, ಬಾಣಹಳ್ಳಿ ಕುಮಾರ್, ಮೂಕಳ್ಳಿ ಮಹದೇವಸ್ವಾಮಿ, ಸಾಣೇಗಾಲ ಸಿದ್ದರಾಜು, ವಿಜಿ, ತೆಳ್ಳನೂರು ನಾಗೇಂದ್ರ, ಕೋಡಿಉಗನೆ ರವಿ, ರಾಮಸಮುದ್ರ ಆಶ್ರಿತ್‌ ಇದ್ದರು.

ಎಂದಿನಂತೆ ಬಸ್‌ ಸಂಚಾರ

ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಇರಲಿವೆ. ‘ಕೆಎಸ್‌ಆರ್‌ಟಿಸಿ ಬಸ್‌ಗಳು ಸೋಮವಾರ ಬೆಳಿಗ್ಗೆಯಿಂದಲೇ ಸಂಚಾರ ನಡೆಸಲಿವೆ. ಪೊಲೀಸರು ಬಸ್‌ಗಳನ್ನು ಓಡಿಸುವಂತೆ ಸೂಚನೆ ನೀಡಿದ್ದಾರೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರತ ಬಂದ್‌ ಇದ್ದರೂ ನಾವು ಬಸ್‌ಗಳನ್ನು ಓಡಿಸಲು ನಿರ್ಧರಿಸಿದ್ದೇವೆ. ಎಂದಿನಂತೆ ಖಾಸಗಿ ಬಸ್‌ಗಳು ಸಂಚರಿಸಲಿವೆ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ತ್ಯಾಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.