ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನ ಕೈಬಿಟ್ಟಿರುವ ಸರ್ಕಾರದ ನಿರ್ಧಾರ ಸ್ವಾಗತಿಸಿ ಹಾಗೂ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮೆರವಣಿಗೆ ನಡೆಸಲಾಯಿತು
ಚಾಮರಾಜನಗರ: ದೇವನಹಳ್ಳಿಯಲ್ಲಿ ರೈತರ ಭೂಸ್ವಾಧೀನ ಕೈಬಿಟ್ಟಿರುವ ಸರ್ಕಾರದ ನಿರ್ಧಾರ ಸ್ವಾಗತಿಸಿ ಹಾಗೂ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮೆರವಣಿಗೆ ನಡೆಸಲಾಯಿತು.
ನಗರದ ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಹಾಗೂ ತಾಲ್ಲೂಕು ಕಚೇರಿವರೆಗೂ ಮೆರವಣಿಗೆಯಲ್ಲಿ ಸಾಗಿದ ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಹಾಗೂ ತಹಶೀಲ್ದಾರ್ ಗಿರಿಜಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಸಂಘಟನೆಯ ರಾಜ್ಯಾಧ್ಯಕ್ಷ ಮಹೇಶ್ ಪ್ರಭು ಮಾತನಾಡಿ, ‘ರಾಜ್ಯ ಸರ್ಕಾರ ಕೈಗಾರಿಕೆಗಳಿಗೆ ಬಲವಂತವಾಗಿ ಫಲವತ್ತಾದ ಭೂಮಿ ವಶಪಡಿಸಿಕೊಳ್ಳಬಾರದು. ಉದ್ಯೋಗ ಸೃಷ್ಟಿಮಾಡಲು ಕೈಗಾರಿಕೆಗಳ ಸ್ಥಾಪನೆ ಅನಿವಾರ್ಯವಾದರೆ ಕೃಷಿಯೇತರ ಭೂಮಿಯನ್ನು ಪಡೆಯಬೇಕು. ಭೂಸುಧಾರಣಾ ಕಾಯ್ದೆ ವಾಪಸ್ ಪಡೆಯಬೇಕು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ನಿರ್ಧಾರ ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಮಹೇಶ್ ಹೆಗ್ಗವಾಡಿಪುರ ಮಾತನಾಡಿ, ‘ರೈತರು ಹುತಾತ್ಮರಾಗುತ್ತಿದ್ದರೂ ಸರ್ಕಾರಗಳು ರೈತ ಪರವಾದ ನೀತಿಗಳನ್ನು ಜಾರಿಗೆ ತರುತ್ತಿಲ್ಲ. ಜಿಲ್ಲೆಯಲ್ಲಿ ಕಬಿನಿ ಎರಡನೇ ಹಂತದ ಯೋಜನೆ ಜಾರಿಯಾಗಿ ಹಲವು ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಯೋಜನೆ ಪೂರ್ಣಗೊಳಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.