
ಮೈಸೂರು/ಚಾಮರಾಜನಗರ: ನಾಗರಹೊಳೆ ಮತ್ತು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಸಫಾರಿಯನ್ನು ಮರು ಆರಂಭಿಸಲು ಸರ್ಕಾರ ನಿರ್ಧರಿಸಿರುವುದನ್ನು ಖಂಡಿಸಿ ಮೈಸೂರಿನ ಅರಣ್ಯ ಭವನ ಹಾಗೂ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯ ಸಫಾರಿ ಕೇಂದ್ರದ ಎದುರು ರೈತರು ಗುರುವಾರ ಪ್ರತಿಭಟನೆ ನಡೆಸಿದರು.
ಸಫಾರಿ ಕೇಂದ್ರದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮುಖಂಡ ಹೊನ್ನೂರು ಪ್ರಕಾಶ್, ‘ಸಫಾರಿ ಸ್ಥಗಿತಗೊಂಡ ಬಳಿಕ ಜಿಲ್ಲೆಯಲ್ಲಿ ಮಾನವ–ಪ್ರಾಣಿ ಸಂಘರ್ಷ ಕಡಿಮೆಯಾಗಿದೆ. ಸಫಾರಿಯಿಂದ ಬರುವ ಆದಾಯವೇ ಸರ್ಕಾರಕ್ಕೆ ಮುಖ್ಯವಾಗಿದ್ದರೆ ರೈತರೆಲ್ಲರೂ ಭಿಕ್ಷೆ ಬೇಡಿ ಹಣ ನೀಡುತ್ತೇವೆ. ಸಫಾರಿ ಮಾತ್ರ ಆರಂಭಿಸಬಾರದು’ ಎಂದು ಒತ್ತಾಯಿಸಿದರು.
‘ಪ್ರವಾಸೋದ್ಯಮದ ಬಗ್ಗೆ ಕಾಳಜಿ ಇದ್ದರೆ ಕಾಡಂಚಿನಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಿ. ಪರಿಸರ ಸ್ನೇಹಿ ಹೋಮ್‌ಸ್ಟೇ, ಕಟ್ಟಡಗಳ ನಿರ್ಮಾಣಕ್ಕೆ ರೈತರಿಗೆ ಅನುಮತಿ ನೀಡಲಿ. ರೆಸಾರ್ಟ್ ಹಾಗೂ ಹೋಮ್‌ಸ್ಟೇಗಳ ಮಾಲೀಕರ ಲಾಬಿಗೆ ಮಣಿದು ಸಫಾರಿ ಮರು ಆರಂಭಿಸಿದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳ್ಳಲಿದೆ’ ಎಂದು ಎಚ್ಚರಿಸಿದರು.
‘ಸಫಾರಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ರೆಸಾರ್ಟ್ ಹಾಗೂ ಹೋಮ್‌ಸ್ಟೇ ಮಾಲೀಕರು ಬೆದರಿಕೆ ಹಾಕಿದ್ದು, ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.
ಮುತ್ತಿಗೆಗೆ ಯತ್ನ: ಮೈಸೂರಿನ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಮುಖಂಡರು, ‘ಬೇಡ ಬೇಡ ಸಫಾರಿ ಬೇಡ’, ‘ಬೇಕೆ ಬೇಕು ನ್ಯಾಯ ಬೇಕು’, ‘ಸಫಾರಿ ಆರಂಭಿಸಿರುವ ಸರ್ಕಾರಕ್ಕೆ ದಿಕ್ಕಾರ’ ಘೋಷಣೆ ಕೂಗಿದರು.
‘ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಅರಣ್ಯ ಸಚಿವರು ಮೈಸೂರಿಗೆ ಪ್ರವೇಶಿಸಲು ಬಿಡುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಸಫಾರಿ ಆರಂಭಕ್ಕೆ ಒತ್ತಾಯ ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ):
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರೆಸಾರ್ಟ್ ಹೋಮ್‌ಸ್ಟೇ ಸಿಬ್ಬಂದಿ ವ್ಯಾಪಾರಿಗಳು ಹಾಗೂ ಸ್ಥಳೀಯರು ‘ಸಫಾರಿ ಮರು ಆರಂಭವಾಗಬೇಕು’ ಎಂದು ಒತ್ತಾಯಿಸಿ ಘೋಷಣೆ ಕೂಗಿದರು. ‘ಸಫಾರಿ ನಂಬಿಕೊಂಡು ಐದು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬದುಕುತ್ತಿದ್ದು ಅವರೆಲ್ಲ ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬಾರದು’ ಎಂದು ಒತ್ತಾಯಿಸಿದರು. ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು ಸ್ಥಳೀಯರು ಹಾಗೂ ರೈತರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.