ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಗುಂಡ್ಲುಪೇಟೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವ ರೈತ ಸಂಘಟನೆ ಪದಾಧಿಕಾರಿಗಳು ತಾಲ್ಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ, ಹೆದ್ದಾರಿ ತಡೆದು ಪ್ರತಿಭಟಿಸಿದರು.
ತಾಲ್ಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಸಮಾವೇಶಗೊಂಡ ಸಂಘಟನೆ ಪದಾಧಿಕಾರಿಗಳು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಗೆ ಧಿಕ್ಕಾರದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕಟ್ಟಡ ಸೋರುವುದು ಶುರುವಾಗಿ ವರ್ಷಗಳೇ ಕಳೆದಿರುವ ಕಾರಣ ಕೂಡಲೇ ದುರಸ್ತಿ ಮಾಡಿಸಬೇಕು. ಗ್ರಾಮ ಪಂಚಾಯಿತಿ ಕೇಂದ್ರವಾದ ಭೀಮನಬೀಡು ಗ್ರಾಮದ ಚರಂಡಿಗಳ ಹೂಳೆತ್ತಿಸಬೇಕು. ಶೌಚಾಲಯ ನಿರ್ಮಿಸಿಕೊಂಡ 41 ಫಲಾನುಭವಿಗಳಿಗೆ ಕೂಡಲೇ ಬಿಲ್ ಪಾವತಿಸಬೇಕು. ಸೂಕ್ತ ಬೆಳಕಿನ ವ್ಯವಸ್ಥೆಗೆ ಎರಡು ಕಡೆ ಟವರ್ ಲೈಟ್ ಹಾಕಬೇಕು. ಜಿಪಿಎಸ್ ಆಗಿರುವ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ಬಿಲ್ ಮಾಡಿಕೊಡಬೇಕು. ಗ್ರಾಮದ ಎರಡು ಬೀದಿಗಳಲ್ಲಿ ಕೂಡಲೇ ಚರಂಡಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ರೈತರ ಮನವಿ ಆಲಿಸಲು ತಾಲ್ಲೂಕು ಪಂಚಾಯಿತಿ ಇಒ ಬಾರದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಸಮಾವೇಶಗೊಂಡು ಪ್ರತಿಭಟನೆ ಮುಂದುವರೆಸಿದರು. ನಂತರ ಪೊಲೀಸ್ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಮತ್ತೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು ಆಗಮಿಸಿ ಸಮಸ್ಯೆ ಆಲಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಬೇಡಿಕೆಗಳ ಈಡೇರಿಕೆಗೆ ಭರವಸೆ ನೀಡಿದರು.
ಸಿಡಿಪಿಒ ಹೇಮಾವತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ ತಮ್ಮ ಇಲಾಖೆಯಿಂದ ಆಗಬೇಕಾದ ಕೆಲಸಗಳನ್ನು ಕಾಲಮಿತಿಯಲ್ಲಿ ಮಾಡಿಸಿಕೊಡಲು ಒಪ್ಪಿಕೊಂಡರು.
ಪ್ರತಿಭಟನೆ ವೇಳೆ ರೈತ ಸಂಘಟನೆ ಬಗ್ಗೆ ಲಘುವಾಗಿ ಮಾತನಾಡಿದ್ದ ಪಿಡಿಒ ಭೋಜೇಶ್ ಕ್ಷಮೆ ಕೇಳಿದರು. ನನ್ನ ಹಂತದಲ್ಲಿ ಆಗುವ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುವ ಮತ್ತು ಸಮಸ್ಯೆ ಇದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು.
ಸಾಮೂಹಿಕ ನಾಯಕತ್ವ ರೈತ ಸಂಘಟನೆ ಮುಖಂಡರಾದ ಹಳ್ಳದಮಾದಹಳ್ಳಿ ಲೋಕೇಶ್, ಬೆಟ್ಟದಮಾದಹಳ್ಳಿ ಷಣ್ಮುಖಸ್ವಾಮಿ, ಮಾಡ್ರಹಳ್ಳಿ ಪಾಪಣ್ಣ, ಹಸಗೂಲಿ ಮಹೇಶ್, ಭೀಮನಬೀಡು ರಾಜು, ಕೂತನೂರು ಗಣೇಶ್, ಹೊನ್ನೇಗೌಡನಹಳ್ಳಿ ಗುರು, ಉಮೇಶ್, ನಟರಾಜು, ಸಿದ್ದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.