ADVERTISEMENT

ಕೊಳ್ಳೇಗಾಲ| ಸೆಸ್ಕ್‌ನಿಂದ ಹಣ ವಸೂಲಿ ಆರೋಪ: ರೈತರ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 13:26 IST
Last Updated 24 ಜನವರಿ 2020, 13:26 IST
ಪ್ರತಿಭಟನಕಾರರು ರಸ್ತೆಯಲ್ಲೇ ತರಕಾರಿ ಬಾತ್ ಸೇವಿಸಿದರು
ಪ್ರತಿಭಟನಕಾರರು ರಸ್ತೆಯಲ್ಲೇ ತರಕಾರಿ ಬಾತ್ ಸೇವಿಸಿದರು   

ಕೊಳ್ಳೇಗಾಲ: ಸೆಸ್ಕ್‌ನವರು ಗ್ರಾಹಕರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಆರ್.ಎಂ.ಸಿ ಮಾರುಕಟ್ಟೆ ಯಲ್ಲಿ ಸಮಾವೇಶಗೊಂಡ ನೂರಾರು ರೈತರು ಹಾಗೂ ಮಹಿಳೆಯರು, ತರಕಾರಿ ಮತ್ತು ಸೊಪ್ಪುಗಳನ್ನು ಹಿಡಿದುಕೊಂಡು ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ತಲುಪಿದರು. ಈ ವೇಳೆ, ರಾಜ್ಯ ಸರ್ಕಾರ ಹಾಗೂ ಸೆಸ್ಕ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಡಾ.ರಾಜ್‍ಕುಮಾರ್ ರಸ್ತೆ ತಡೆ ನಡೆಸಿದರು. ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು.

ADVERTISEMENT

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ರೈತರ ಮೇಲೆ ಸೆಸ್ಕ್‌ನವರು ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ. ರೈತರಿಗೆ ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ನೀಡುತ್ತಿದ್ದು, ಇದರ ಬಿಲ್‌ ಅನ್ನು ರೈತರು ಈ ಹಿಂದಿನಿಂದಲೂ ಪಾವತಿಸುತ್ತಿಲ್ಲ. ಈಗ ಏಕಾಏಕಿ ಶುಲ್ಕ ವಸೂಲಾತಿ ಮಾಡಲಾಗುತ್ತಿದೆ. ನಕಲಿ ಮೀಟರ್ ಸೇರಿದಂತೆ ಗ್ರಾಹಕರಿಗೆ ನಕಲಿ ರಶೀದಿ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಇದು ನಿಲ್ಲಬೇಕು’ ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದ ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದಿವೆ. ಆದರೆ, ಬ್ರಿಟೀಷರ ವ್ಯವಸ್ಥೆ ಬದಲಾಗಿಲ್ಲ. ಅಧಿಕಾರಿಗಳು ಇದನ್ನೇ ಮುಂದುವರೆಸುತ್ತಿದ್ದಾರೆ. ರೈತರು ಬಿತ್ತನೆ ಬೀಜಕ್ಕೆ ಹೋರಾಟ ಮಾಡಬೇಕು. ನೀರು, ವಿದ್ಯುತ್‍ಗಾಗಿ, ಬೆಳೆದ ಬೆಳೆಗೆ ದರ ನಿಗದಿಗಾಗಿ ಹೋರಾಟ ಮಾಡಬೇಕಾದ ಸ್ಥಿತಿ ಇದೆ ಎಂದು ದೂರಿದರು.

‘ಬ್ಯಾಂಕಿನವರು ಸಾಲ ವಸೂಲಾತಿಗೆ ಮುಂದಾಗಿದ್ದಾರೆ. ಹಿಂದಿನ ಸರ್ಕಾರ ಸಾಲಮನ್ನಾ ಮಾಡುವುದಾಗಿ ಘೋಷಿಸಿತ್ತು. ಆದರೆ, ಸಾಲಮನ್ನಾ ಆಗಲಿಲ್ಲ. 24 ಗಂಟೆಗಳಲ್ಲಿ ಸಾಲಮನ್ನಾ ಮಾಡುವಂತೆ ಆಗ ಬಿ.ಎಸ್.ಯಡಿಯೂರಪ್ಪ ಅವರು ಹೋರಾಟ ಮಾಡಿದ್ದರು. ಆದರೆ ಅವರ ಸರ್ಕಾರವೇ ಈಗ ಸಾಲ ವಸೂಲಾತಿಗೆ ನಿಂತಿದೆ. ಇದು ಮುಂದುವರೆದರೆ ನಿಮ್ಮ ಕುರ್ಚಿ ಬಿದ್ದು ಹೋಗುತ್ತದೆ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ವಿದ್ಯುತ್ ದರ ನಿರಾಕರಣೆ ಚಳವಳಿ ಮಾಡಿದ್ದೇವೆ. ರೈತರ ವಿದ್ಯುತ್ ಹಳೇ ಬಾಕಿ ಮನ್ನಾ ಮಾಡಲೇಬೇಕು. ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಿ’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಂ, ತಾಲ್ಲೂಕು ಘಟಕದ ಅಧ್ಯಕ್ಷ ಗೌಡೇಗೌಡ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ರವಿನಾಯ್ಡು, ಮುಖಂಡ ಅಣಗಳ್ಳಿ ಬಸವರಾಜು, ಭಾಸ್ಕರ್, ರಾಮಕೃಷ್ಣ, ರಂಗಸ್ವಾಮಿ ಸೇರಿದಂತೆ ನೂರಾರು ಮಹಿಳೆಯರು ಇದ್ದರು.

ರಸ್ತೆಯಲ್ಲೇ ಮಲಗಿ ಪ್ರತಿಭಟನೆ

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ವೃತ್ತ ಸೂಪರಿಟೆಂಡೆಂಟಿಂಗ್‌ ಎಂಜಿನಿಯರ್ ಮಹಾದೇವಸ್ವಾಮಿ ಅವರನ್ನು ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು. ವಿದ್ಯುತ್ ದರ ಸಂಬಂಧ ಪಟ್ಟಂತೆ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಅಧಿಕಾರಿ ನೀಡಿದ ಉತ್ತರದಿಂದ ಅಸಮಾಧಾನಗೊಂಡ ರೈತರು, ಹಿರಿಯ ಅಧಿಕಾರಿಗಳು ಬಂದು ಉತ್ತರಿಸಲಿ ಎಂದು ಪಟ್ಟುಹಿಡಿದರು. ಹಿರಿಯ ಅಧಿಕಾರಿಗಳು ಬಂದು ಸಮರ್ಪಕ ಉತ್ತರ ನೀಡುವವರೆಗೂ ಇಲ್ಲೇ ಧರಣಿ ನಡೆಸುತ್ತೇವೆ ಎಂದು ಮಹಾದೇವಸ್ವಾಮಿ ಅವರು ನಿಂತಿದ್ದ ಸ್ಥಳದ ಸುತ್ತಲೂ 30ಕ್ಕೂ ಹೆಚ್ಚು ರೈತರು ಮಲಗಿ ಪ್ರತಿಭಟಿಸಿದರು. ನಂತರ, ರೈತರು ಮಧ್ಯಾಹ್ನ ಅಲ್ಲೇ ತರಕಾರಿ ಬಾತ್ ತಯಾರಿಸಿ ಊಟ ಮಾಡಿದರು.

ನಂತರ ಸ್ಥಳಕ್ಕೆ ಬಂದ ಮೈಸೂರು ವಿಭಾಗೀಯ ಮುಖ್ಯ ಎಂಜಿನಿಯರ್ ಚಂದ್ರಶೇಖರ್, ಜ.24ರಂದು ಬೆಳಿಗ್ಗೆ 11 ಗಂಟೆಗೆ ಶಾಸಕರು ಮತ್ತು ಅಧಿಕಾರಿ ಗಳ ಸಮ್ಮುಖದಲ್ಲಿ ಸಭೆ ನಡೆಯಲಿದ್ದು, ಈ ಸಂಬಂಧ ಚರ್ಚಿಸಲಾಗುತ್ತದೆ’ ಎಂದು ರೈತರನ್ನು ಮನವೊಲಿಸಿದ ಬಳಿಕ ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.