ADVERTISEMENT

ಚಾಮರಾಜನಗರದಲ್ಲಿ ಇಬ್ಬರು ಸೋಂಕಿತರ ಸಾವು, 57 ಹೊಸ ಪ್ರಕರಣ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 14:31 IST
Last Updated 21 ಸೆಪ್ಟೆಂಬರ್ 2020, 14:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಸೋಮವಾರ ಕೋವಿಡ್‌ ಸೋಂಕಿತ ಇಬ್ಬರು ಮೃತಪಟ್ಟಿದ್ದಾರೆ. ಒಬ್ಬರು ಕೋವಿಡ್‌ ಕಾರಣದಿಂದ ಮೃತಪಟ್ಟಿದ್ದರೆ, ಇನ್ನೊಬ್ಬರು ಬೇರೆ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 55ಕ್ಕೆ ಏರಿದೆ ಅನ್ಯ ಕಾರಣದಿಂದ ಸಾವಿಗೀಡಾದವರ ಸಂಖ್ಯೆ 23ಕ್ಕೆ ತಲುಪಿದೆ.‌

ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯ 65 ವರ್ಷದ ಪುರುಷ ಭಾನುವಾರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿನ ರಾತ್ರಿ ಮೃತಪಟ್ಟಿದ್ದಾರೆ.

ADVERTISEMENT

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಚಾಮರಾಜನಗರ ತಾಲ್ಲೂಕಿನ ಕಮರವಾಡಿಯ 52 ವರ್ಷದ ವ್ಯಕ್ತಿಯೊಬ್ಬರು ಸೆ.18ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ 19ರಂದು ಮೃತ‍ಪಟ್ಟಿದ್ದರು. ನಂತರ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಸೋಮವಾರ 57 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 3,541ಕ್ಕೆ ಏರಿದೆ. 60 ಮಂದಿ ಗುಣಮುಖರಾಗಿದ್ದಾರೆ. ಸೋಂಕು ಮುಕ್ತರಾದವರ ಸಂಖ್ಯೆ 2,850ಕ್ಕೆ ಹಿಗ್ಗಿದೆ. 614 ಸಕ್ರಿಯ ಪ್ರಕರಣಗಳಿದ್ದು, 256 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 34 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ 365 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದೆ. ಆರ್‌ಟಿಪಿಸಿಆರ್‌ ವಿಧಾನದಲ್ಲಿ 132, ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ 188, ಟ್ರು ನಾಟ್‌ನಲ್ಲಿ 45 ಪರೀಕ್ಷೆಗಳನ್ನು ಮಾಡಲಾಗಿದೆ. 309 ಮಂದಿಯ ವರದಿ ನೆಗೆಟಿವ್‌ ಬಂದಿವೆ. 56 ಮಂದಿಗೆ ಸೋಂಕು ಖಚಿತವಾಗಿದೆ. ಒಂದು ಪ್ರಕರಣ ಮೈಸೂರಿನಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.