ADVERTISEMENT

ಭಾಗವತ್‌ ವಿರುದ್ಧ ಪ್ರಕರಣ ದಾಖಲಿಸಿ: ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 14:11 IST
Last Updated 18 ಜನವರಿ 2025, 14:11 IST
ವಿ.ಎಸ್‌.ಉಗ್ರಪ್ಪ
ವಿ.ಎಸ್‌.ಉಗ್ರಪ್ಪ   

ಮೈಸೂರು: ‘ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದಾಗಲೇ ಭಾರತಕ್ಕೆ ನಿಜವಾಗಿ ಸ್ವಾತಂತ್ರ್ಯ ಬಂದಿದ್ದು ಎನ್ನುವ ಮೂಲಕ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ದೇಶದ ಸ್ವಾತಂತ್ರ್ಯ ಚಳವಳಿಗೆ ಅಪಮಾನ ಮಾಡಿದ್ದಾರೆ. ಅವರ ವಿರುದ್ಧ ಕೇಂದ್ರ ಸರ್ಕಾರವು ರಾಷ್ಟ್ರದ್ರೋಹದಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರ‍ಪ್ಪ ಒತ್ತಾಯಿಸಿದರು.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಆದರೆ, ಭಾಗವತ್‌ ಇಡೀ ಹೋರಾಟವನ್ನೇ ಅಪಹಾಸ್ಯ ಮಾಡಿದ್ದು, ಇದು ಸಂವಿಧಾನದ ವಿಧಿ 51ಎಗೆ ವಿರುದ್ಧವಾಗಿದೆ. ಜನಸಾಮಾನ್ಯರು, ಹೋರಾಟಗಾರರ ಮೇಲೆ ದೇಶದ್ರೋಹ ಆರೋಪ ಹೊರಿಸುವ ಸರ್ಕಾರ ಈ ವಿಚಾರದಲ್ಲಿ ಮಾತ್ರ ಏಕೆ ಮೌನವಾಗಿದೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಶ್ರೀರಾಮಚಂದ್ರ ದೇವರಲ್ಲ. ರಾಜನಾಗಿ ಅವರು ತೋರಿದ ಮಾನವೀಯ ಮೌಲ್ಯಗಳ ಕಾರಣದಿಂದ ದೈವತ್ವ ಪಡೆದವರು. ಕೇವಲ ದೇಗುಲ ಕಟ್ಟುವುದರಿಂದ ಪ್ರಯೋಜನ ಇಲ್ಲ. ಶ್ರೀರಾಮ ಹಾಗೂ ಸಂವಿಧಾನದ ಆಶಯದಂತೆ ಪ್ರತಿ ಜನರಿಗೂ ಸಮಪಾಲು ದೊರೆಯಬೇಕು’ ಎಂದು ಆಶಿಸಿದರು.

ADVERTISEMENT

‘ಜ.21ರಂದು ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ‌ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಅಗ್ರಗಣ್ಯ ನಾಯಕರು ಪಾಲ್ಗೊಳ್ಳಲಿದ್ದು, ಮೈಸೂರಿನ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಕೆಪಿಸಿಸಿ ಉಪಾಧ್ಯಕ್ಷ ನಂಜುಂಡ ಸ್ವಾಮಿ, ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ್‌ ಕುಮಾರ್, ನಗರ ಸಮಿತಿ ಅಧ್ಯಕ್ಷ ಆರ್. ಮೂರ್ತಿ, ಕಾರ್ಯದರ್ಶಿ ಶಿವಣ್ಣ ಇದ್ದರು.

‘ರಾಜ್ಯ ಸರ್ಕಾರ ಸುಭದ್ರ’

‘ರಾಜ್ಯದಲ್ಲಿ ಕಾಂಗ್ರೆಸ್‌ 138 ಸ್ಥಾನಗಳೊಂದಿಗೆ ಪೂರ್ಣಾವಧಿ ಸುಭದ್ರ ಆಡಳಿತ ನೀಡಲಿದೆ. ಯಾರು ಮುಖ್ಯಮಂತ್ರಿಯಾಗಿ ಇರುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಯಾರು ಸಿ.ಎಂ. ಆಗಬೇಕು ಆಗಬಾರದು ಎಂದು ನಾನು ಬೆಂಕಿ ಹಚ್ಚುವ ಕೆಲಸ ಮಾಡುವುದಿಲ್ಲ’ ಎಂದು ವಿ.ಎಸ್. ಉಗ್ರ‍ಪ್ಪ ಹೇಳಿದರು. ‘ಯಡಿಯೂರಪ್ಪ ಹೆಸರಿಲ್ಲದೇ ವಿಜಯೇಂದ್ರ ಅವರಿಗೆ ಅಸ್ತಿತ್ವವೇ ಇಲ್ಲ. ಬಿಜೆಪಿಯೇ ಒಂದು ಮನೆ ಮೂರು ಬಾಗಿಲು ಎಂಬಂತಾಗಿದೆ. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ’ ಎಂದು ಸಲಹೆ ನೀಡಿದರು. ‘ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರವೇ ಜನಗಣತಿಯೊಂದಿಗೆ ಜಾತಿಗಣತಿ ನಡೆಸಿ ವರದಿ ಬಿಡುಗಡೆ ಮಾಡಬೇಕು’ ಎಂದು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.