ಗುಂಡ್ಲುಪೇಟೆ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿದ ರಾಜ್ಯ ಸರ್ಕಾರ ಹಾಗೂ ಅರಣ್ಯಾಧಿಕಾರಿಗಳ ನಡೆ ಖಂಡಿಸಿ ರೈತ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಬೆಟ್ಟದ ತಪ್ಪಲಿನ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ಜಮಾವಣೆಗೊಂಡ ರೈತ ಸಂಘಟನೆ ಪದಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ‘ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೂಕ್ಷ್ಮ ಪರಿಸರ ವಲಯವಾಗಿದ್ದು, 2016ರಿಂದಲೇ ಖಾಸಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೀಗಿದ್ದರೂ ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣಕ್ಕೆ ಅರಣ್ಯಾಧಿಕಾರಿಗಳು ಅವಕಾಶ ನೀಡಿರುವುದು ಸರಿಯಲ್ಲ. ಆದ್ದರಿಂದ ಅವಕಾಶ ಮಾಡಿಕೊಟ್ಟವರ ವಿರುದ್ಧ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
‘ಬೆಟ್ಟಕ್ಕೆ ಸ್ಥಳೀಯರು ಖಾಸಗಿ ವಾಹನಗಳಲ್ಲಿ ತೆರಳಲು ಅವಕಾಶ ಮಾಡಿಕೊಡದೆ ಸೂಕ್ಷ್ಮ ಪರಿಸರ ವಲಯ ಎನ್ನುವ ಅರಣ್ಯಾಧಿಕಾರಿಗಳು, ಪರಭಾಷೆಯ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವುದೇಕೆ’ ಎಂದು ಪ್ರಶ್ನಿಸಿದರು.
‘ಮುಂದಿನ ದಿನಗಳಲ್ಲಿ ಎಲ್ಲರೂ ಚಿತ್ರೀಕರಣಕ್ಕೆ ಅವಕಾಶ ಕೊಡಿ ಎಂದು ಬೇಡಿಕೆ ಇಡುತ್ತಾರೆ. ಆಗ ಅನುಮತಿ ಕೊಡುತ್ತೀರಾ?. ಇದರಿಂದ ಪರಿಸರ ಹಾಗೂ ವನ್ಯ ಜೀವಿಗಳಿಗೆ ಸಮಸ್ಯೆಯಾಗುವುದಿಲ್ಲವೇ?, ಅರಣ್ಯ ಇಲಾಖೆ ಅಧಿಕಾರಿಗಳು ಮುಂದೆ ಇಂತಹ ಕೃತ್ಯಕ್ಕೆ ಕೈ ಹಾಕಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಮೂಲಸೌಕರ್ಯ ಒದಗಿಸಿ: ‘ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದರೂ ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸುವಲ್ಲಿ ತಾಲೂಕು ಆಡಳಿತ, ಅರಣ್ಯ ಇಲಾಖೆ, ಕೆಎಸ್‍ಆರ್‌ಟಿಸಿ ವಿಫಲವಾಗಿದೆ. ಬೆಟ್ಟದ ತಪ್ಪಲಿನಲ್ಲಿ ಕುಡಿಯುವ ನೀರು, ಸಮರ್ಪಕ ಶೌಚಾಲಯ ವ್ಯವಸ್ಥೆಯಿಲ್ಲ. ಜೊತೆಗೆ ಸೂಕ್ತ ನೆರಳಿನ ವ್ಯವಸ್ಥೆಯಿಲ್ಲದೆ ಟಿಕೆಟ್ ಖರೀದಿಗೆ ಜನರು ಗಂಟೆಗಟ್ಟಲೆ ಬಿಸಿಲಿನಲ್ಲಿ ನಿಲ್ಲಬೇಕಾಗಿದೆ. ತಪ್ಪಲಿನಿಂದ ಬೆಟ್ಟಕ್ಕೆ ಕೇವಲ 6 ಕಿ.ಮೀ ಇದ್ದರೂ ₹70 ದರ ತೆಗೆದುಕೊಳ್ಳುತ್ತಿರುವುದು ಸರಿಯಲ್ಲ. ಆದ್ದರಿಂದ ಸಂಬಂಧಪಟ್ಟರು ಕೂಡಲೇ ಮೂಲಸೌಲಭ್ಯ ನೀಡಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಕಂದೇಗಾಲದ ಹೊಸೂರು ಮಹೇಶ, ಮುಖಂಡರಾದ ಹಾಲಹಳ್ಳಿ ಮಹೇಶ, ಬೆಟ್ಟಮಾದಹಳ್ಳಿ ಲೋಕೇಶ, ಕಬ್ಬಹಳ್ಳಿ ಪ್ರಕಾಶ್, ಕೋಡಹಳ್ಳಿ ರಘು, ಕಂದೇಗಾಲ ವೃಷಬೇಂದ್ರ, ಬೆಟ್ಟದಮಾದಹಳ್ಳಿ ಬುದ್ದಿ, ಗೋಪಾಲಪುರ ರಾಜಶೇಖರ್, ಜಗದೀಶ ಕುಣಗಹಳ್ಳಿ, ಹಿರೀಕಾಟಿ ಚಿಕ್ಕಣ್ಣ ಸೇರಿದಂತೆ ರೈತರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.