ADVERTISEMENT

ಚಾಮರಾಜನಗರ: ಕೊನೆಗೂ ರಥ ನಿರ್ಮಾಣ ಕಾರ್ಯ ಶುರು

ಚಾಮರಾಜೇಶ್ವರ ದೇವಸ್ಥಾನ, ಬಿಳಿಗಿರಿರಂಗನಾಥ ಬೆಟ್ಟದ ಮಹಾರಥಗಳಿಗಾಗಿ ಮರ ಕತ್ತರಿಸುವ ಕಾರ್ಯ ಪ್ರಗತಿಯಲ್ಲಿ

ಸೂರ್ಯನಾರಾಯಣ ವಿ
Published 23 ಫೆಬ್ರುವರಿ 2020, 19:45 IST
Last Updated 23 ಫೆಬ್ರುವರಿ 2020, 19:45 IST
ಅಳತೆಗೆ ತಕ್ಕಂತೆ ತೇಗದ ದಿಮ್ಮಿಗಳನ್ನು ಕತ್ತರಿಸಿರುವುದು
ಅಳತೆಗೆ ತಕ್ಕಂತೆ ತೇಗದ ದಿಮ್ಮಿಗಳನ್ನು ಕತ್ತರಿಸಿರುವುದು   

ಚಾಮರಾಜನಗರ: ವರ್ಷದಿಂದೀಚೆಗೆ ನನೆಗುದಿಗೆ ಬಿದ್ದಿದ್ದ ನಗರದ ಚಾಮರಾಜೇಶ್ವರ ದೇವಸ್ಥಾನ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ದೇಗುಲಗಳ ಮಹಾರಥ ನಿರ್ಮಾಣ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ.

ತಲಾ ₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಥಗಳಿಗಾಗಿ ಮರಗಳನ್ನು ಕತ್ತರಿಸುವ ಕೆಲಸ ಎರಡು ವಾರಗಳಿಂದೀಚೆಗೆ ಗದಗ ಜಿಲ್ಲೆಯ ಲಕ್ಷ್ಮೀಶ್ವರದ ಮರದ ಕಾರ್ಖಾನೆಯೊಂದರಲ್ಲಿನಡೆಯುತ್ತಿದೆ. ಇನ್ನು ಎರಡು ಮೂರು ದಿನಗಳಲ್ಲಿ ಕತ್ತರಿಸುವ ಕೆಲಸ ಪೂರ್ಣಗೊಳ್ಳಲಿದ್ದು, ಮಾರ್ಚ್‌ ತಿಂಗಳ ಅಂತ್ಯದ ಹೊತ್ತಿಗೆ ರಥ ನಿರ್ಮಾಣ ಕೆಲಸ ಅಧಿಕೃತವಾಗಿ ಆರಂಭವಾಗಲಿದೆ ಎಂದು ಲೋಕೋಪ‍ಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ (ಇಇ) ಸುರೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಎರಡೂ ರಥಗಳ ನಿರ್ಮಾಣಕ್ಕಾಗಿ ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಿ ವರ್ಷಗಳು ಸಂದಿದ್ದರೂ ಟೆಂಡರ್‌ ಪ್ರಕ್ರಿಯೆ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿತ್ತು. 2019ರ ಫೆಬ್ರುವರಿಯಲ್ಲಿ ರಥಗಳ ಟೆಂಡರ್‌ ಎಲ್ಲ ಅಂತಿಮವಾಗಿ ಗುತ್ತಿಗೆದಾರರಿಗೆ ಕಾರ್ಯಾದೇಶವನ್ನೂ ನೀಡಲಾಗಿತ್ತು.ಬೆಂಗಳೂರಿನ ಬಿ.ಎಸ್‌.ಬಡಿಗೆರ್‌ ಅಂಡ್‌ ಸನ್ಸ್‌ ಸಂಸ್ಥೆಗೆ ರಥಗಳ ನಿರ್ಮಾಣ ಹೊಣೆ ವಹಿಸಲಾಗಿತ್ತು.ಧಾರ್ಮಿಕ ವಿಧಿ ವಿಧಾನಗಳ ಮೂಲಕ ಎರಡೂ ಕಡೆಗಳಲ್ಲಿ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹಾಗಿದ್ದರೂ ನಿರ್ಮಾಣ ಕಾರ್ಯ ಆರಂಭವಾಗಿರಲಿಲ್ಲ.

ADVERTISEMENT

ಚಾಮರಾಜನಗರದಲ್ಲಿ ಹಲವಾರು ಸಂಘಟನೆಗಳು ದೇವಾಲಯದ ಮುಂದೆ ಧರಣಿ ಕುಳಿತು ರಥದ ನಿರ್ಮಾಣಕ್ಕೆ ಆಗ್ರಹಿಸಿದ್ದವು. ಹಿಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಹೆಚ್ಚಿನ ಕಾಳಜಿ ತೋರಿ ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ರಥದ ಕಾಮಗಾರಿ ಆರಂಭಿಸಲು ಪ್ರಯತ್ನಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರಿಗೆ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ, ಜಿಲ್ಲಾಡಳಿತಕ್ಕೆ ಎರಡೂ ರಥಗಳ ನಿರ್ಮಾಣ ಕೆಲಸವನ್ನು ಆರಂಭಿಸಲು ಬೇಕಾದ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು.

ಅಕ್ಟೋಬರ್‌ನಲ್ಲಿ ಖರೀದಿ

ಒಂದು ರಥಕ್ಕೆ 700 ಚದರ ಅಡಿಯಂತೆ ಒಟ್ಟು 1,400 ಚದರ ಅಡಿ ವಿಸ್ತೀರ್ಣದ ತೇಗದ ಮರವನ್ನು ಉತ್ತರ ಕನ್ನಡದ ಕಿರುವತ್ತಿಯಲ್ಲಿರುವ ಅರಣ್ಯ ಇಲಾಖೆಯ ಮರದ ಡಿಪೋದಿಂದ ಲೋಕೋಪಯೋಗಿ ಇಲಾಖೆ ಖರೀದಿಸಿದೆ. ಒಟ್ಟು 53 ದಿಮ್ಮಿಗಳನ್ನು ಖರೀದಿಸಲಾಗಿದೆ.

‘ಮರ ಖರೀದಿಸಲು ಅನುಮತಿಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅನುಮತಿ ಸಿಕ್ಕ ನಂತರ 2019ರ ಅಕ್ಟೋಬರ್‌ನಲ್ಲಿ ಕಿರುವತ್ತಿಯಲ್ಲಿ ಮರವನ್ನು ಆಯ್ಕೆ ಮಾಡಲಾಗಿತ್ತು. ಡಿಸೆಂಬರ್‌ ವೇಳೆಗೆ ಖರೀದಿ ಪ್ರಕ್ರಿ‌ಯೆ ಮುಕ್ತಾಯವಾಗಿತ್ತು. ಶಿಲ್ಪಿಗಳ ಸಲಹೆ ಮೇರೆಗೆ ದಿಮ್ಮಿಗಳನ್ನು ನಮಗೆ ಬೇಕಾದ ಅಳತೆಗೆ ಕತ್ತರಿಸಲು ಲಕ್ಷ್ಮೇಶ್ವರದ ಮರದ ಕಾರ್ಖಾನೆಗೆ ಸಾಗಿಸಲಾಗಿತ್ತು. ವಾರದಿಂದೀಚೆಗೆ ಕತ್ತರಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು 10 ಟನ್‌ಗಳಷ್ಟು ಮರವನ್ನು ಕತ್ತರಿಸಬೇಕಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಸುರೇಂದ್ರ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕತ್ತರಿಸಿದ ಬಳಿಕ ಮರದ ತುಂಡುಗಳನ್ನು 15 ದಿನಗಳ ಕಾಲ ಅಲ್ಲೇ ಒಣಗಲು ಬಿಡಲಾಗುವುದು. ನಂತರ ಶಿಲ್ಪಿಗಳು ಮೂಲತಃ ಬೆಂಗಳೂರಿನವರಾಗಿದ್ದು, ಅಲ್ಲಿಗೆ ಸಾಗಿಸಿ ರಥದ ನಿರ್ಮಾಣ ಕಾರ್ಯವನ್ನು ಆರಂಭಿಸಲಿದ್ದಾರೆ’ ಎಂದು ಅವರು ವಿವರಿಸಿದರು.

ಮುಂದಿನ ವರ್ಷಕ್ಕೆ ರಥೋತ್ಸವ ಖಚಿತ

ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯದಲ್ಲಿ ರಥ ಶಿಥಿಲಗೊಂಡಿರುವ ಕಾರಣಕ್ಕೆ 2016ರಿಂದ ರಥೋತ್ಸವ ನಡೆದಿಲ್ಲ. ಚಾಮರಾಜೇಶ್ವರ ದೇವಸ್ಥಾನದಲ್ಲಿ 2017ರ ಫೆಬ್ರುವರಿಯಲ್ಲಿ ಕಿಡಿಗೇಡಿಯೊಬ್ಬ ರಥಕ್ಕೆ ಬೆಂಕಿ ಹಾಕಿದ ನಂತರ ಮಹಾ ರಥೋತ್ಸವ ನಡೆದಿಲ್ಲ.

ಬಿಳಿಗಿರಿರಂಗನಬೆಟ್ಟದಲ್ಲಿ ಸಾಮಾನ್ಯವಾಗಿ ಏಪ್ರಿಲ್‌–ಮೇ ತಿಂಗಳಲ್ಲಿ ರಥೋತ್ಸವ ನಡೆದರೆ, ಚಾಮರಾಜೇಶ್ವರ ಸ್ವಾಮಿಯ ರಥೋತ್ಸವ ಆಷಾಢ ಮಾಸದಲ್ಲಿ ನಡೆಯುತ್ತದೆ.

ಮಾರ್ಚ್‌ನಲ್ಲಿ ರಥಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಲಿರುವುದರಿಂದ ಈ ವರ್ಷ ಎರಡೂ ರಥೋತ್ಸವಗಳು ನಡೆಯುವ ಸಾಧ್ಯತೆ ಕಡಿಮೆ. ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಆರು ತಿಂಗಳಾದರೂ ಬೇಕು ಎಂದು ಹೇಳುತ್ತಾರೆ ಅಧಿಕಾರಿಗಳು. ಸ್ವಲ್ಪ ವಿಳಂಬವಾದರೂ ಮುಂದಿನ ವರ್ಷದ ರಥೋತ್ಸವದ ಸಮಯಕ್ಕೆ ರಥಗಳು ಸಿದ್ಧಗೊಳ್ಳುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.