ADVERTISEMENT

’ಬಡವರು, ಶೋಷಿತರ ಸಮಾನತೆಗೆ ಶಮಿಸಿದ ದಯಾಳ್‌’

ಮರಿಯಾಲ: ಫಿಟ್ ಇಂಡಿಯಾ ಪ್ರೀಡಂ ರನ್ 2.0 ಕಾರ್ಯಕ್ರಮದಲ್ಲಿ ಶ್ರೀಧರ್‌ ಮಾತು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:53 IST
Last Updated 25 ಸೆಪ್ಟೆಂಬರ್ 2021, 16:53 IST
ಫಿಟ್‌ ಇಂಡಿಯಾ ರನ್‌ 2.0 ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್‌ ಅವರು ಚಾಲನೆ ನೀಡಿದರು. ಮುರುಘ ರಾಜೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಉಪನ್ಯಾಸಕ ಸುರೇಶ್‌ ಎನ್‌.ಋಗ್ವೇದಿ, ನೆಹರು ಯುವ ಕೇಂದ್ರದ ಯುವಜನಾಧಿಕಾರಿ ಜಗದೀಶ್‌ ಕಾರಂತ್‌ ಇತರರು ಇದ್ದರು
ಫಿಟ್‌ ಇಂಡಿಯಾ ರನ್‌ 2.0 ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್‌ ಅವರು ಚಾಲನೆ ನೀಡಿದರು. ಮುರುಘ ರಾಜೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಉಪನ್ಯಾಸಕ ಸುರೇಶ್‌ ಎನ್‌.ಋಗ್ವೇದಿ, ನೆಹರು ಯುವ ಕೇಂದ್ರದ ಯುವಜನಾಧಿಕಾರಿ ಜಗದೀಶ್‌ ಕಾರಂತ್‌ ಇತರರು ಇದ್ದರು   

ಚಾಮರಾಜನಗರ: ’ದೇಶದಲ್ಲಿದ್ದ ಬಡವರು, ಶೋಷಿತರು ಹಾಗೂ ನಿರ್ಗತಿಕರನ್ನು ಮುಖ್ಯವಾಹಿನಿಗೆ ತಂದು ಅವರಿಗೂ ಸಾಮಾಜಿಕ ಸಮಾನತೆ ಸಿಗುವಂತೆ ಮಾಡಲು ಶ್ರಮಿಸಿದವರಲ್ಲಿ ಪಂಡಿತ ದೀನ ದಯಾಳ್ ಉಪಾಧ್ಯಾಯ ಅವರು ಪ್ರಮುಖರಾಗಿದ್ದಾರೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಅವರು ಶನಿವಾರ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮರಿಯಾಲದ ಶ್ರೀ ಮುರುಘ ರಾಜೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶ್ರೀ ಮುರುಘ ರಾಜೇಂದ್ರ ಪದವಿ ಪೂರ್ವ ಕಾಲೇಜು ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ 75ನೇ ಸ್ವಾತಂತ್ರೋತ್ಸವ ಹಾಗೂ ಪಂಡಿತ ದೀನ ದಯಾಳ್ ಉಪಾಧ್ಯಾಯ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಫಿಟ್ ಇಂಡಿಯಾ ಪ್ರೀಡಂ ರನ್ 2.0 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉಪಾಧ್ಯಾಯ ಅವರದ್ದು ಅದರ್ಶ ವ್ಯಕ್ತಿತ್ವ. ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಲು ನಡೆದ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬುದು ದೀನ ದಯಾಳ್ ಉಪಾಧ್ಯಾಯ ಅವರ ಧ್ಯೇಯವಾಗಿತ್ತು. ಸಮಾಜದಲ್ಲಿ ಸತ್ಪ್ರಜೆಗಳಾಗಲು ಅವರ ಮೌಲ್ಯ. ಚಿಂತನೆಗಳು ನೆಮ್ಮೆಲ್ಲರಿಗೂ ದಾರಿದೀಪವಾಗಿವೆ’ ಎಂದರು.

ಕಾನೂನು ಅರಿಯಿರಿ: ‘ನಾವೆಲ್ಲರೂ ಸಂವಿಧಾನದ ಆಶೋತ್ತರಗಳನ್ನು ಅನುಸರಿಸಬೇಕಾಗಿದೆ. ವಿದ್ಯಾರ್ಥಿಗಳು ವ್ಯಾಸಂಗ ಮುಗಿದ ನಂತರ ಸಮಾಜದಲ್ಲಿ ಬದುಕಲು ಕಾನೂನಿನ ಅರಿವು ಅಗತ್ಯವಾಗಿದೆ. ಬೇರೆಯವರ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆಯಬೇಕು. ಹಿಂದೆ ಬಸವಣ್ಣನವರ ವಚನಗಳು ಅಲಿಖಿತ ಕಾನೂನಾಗಿದ್ದವು, ನಂತರ ಡಾ. ಬಿ.ಆರ್.ಅಂಬೇಡ್ಕರ್ ಅವರು ಬರವಣಿಗೆ ಮೂಲಕ ಕಾನೂನಿಗೆ ಒಂದು ರೂಪ ನೀಡಿದರು’ ಎಂದು ಶ್ರೀಧರ್ ಅವರು ತಿಳಿಸಿದರು.

ADVERTISEMENT

ಉಪನ್ಯಾಸಕ ಎನ್.ಸುರೇಶ್ ಋಗ್ವೇದಿ ಅವರು ಮಾತನಾಡಿ, ‘ಪಂಡಿತ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ. ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಸಮರ್ಪಿಸಿದ ದೀನ್ ದಯಾಳ್ ಉಪಾಧ್ಯಾಯ ಅವರು ಶ್ರೇಷ್ಠ ಚಿಂತಕರು. ಅವರ ಸಾಮಾಜಿಕ, ಅರ್ಥಿಕ, ರಾಜಕೀಯ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ’ ಎಂದರು.

ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಫಿಟ್ ಇಂಡಿಯಾ ಪ್ರೀಡಮ್ ರನ್ 2.0 ನಡೆಯಿತು. ಓಟದಲ್ಲಿ ಭಾಗವಹಿಸಿದ್ದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ನೆಹರು ಯುವ ಕೇಂದ್ರದ ಜಿಲ್ಲಾ ಯುವಜನಾಧಿಕಾರಿ ರಾಜೇಶ್ ಕಾರಂತ್, ಕೇಂದ್ರದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.