ADVERTISEMENT

ಬಿಳಿಗಿರಿರಂಗನ ಬನದಲ್ಲೂ ಹಾರುವ ಹಾವು

ಕಾಡಂಚಿನ ತೋಟಗಳಲ್ಲಿ ಮೊದಲ ಬಾರಿಗೆ ಪತ್ತೆಯಾದ ಉರಗ

ನಾ.ಮಂಜುನಾಥ ಸ್ವಾಮಿ
Published 2 ಜನವರಿ 2021, 13:03 IST
Last Updated 2 ಜನವರಿ 2021, 13:03 IST
ಹಾರುವ ಹಾವನ್ನು ರಕ್ಷಿಸಿದ ಸ್ನೇಕ್‌ ಮಹೇಶ್‌
ಹಾರುವ ಹಾವನ್ನು ರಕ್ಷಿಸಿದ ಸ್ನೇಕ್‌ ಮಹೇಶ್‌   

ಯಳಂದೂರು: ರಾಜ್ಯದ ಪಶ್ಚಿಮ ಘಟ್ಟ, ಈಶಾನ್ಯ ರಾಜ್ಯ ಹಾಗೂ ಗೋವಾದ ಪಶ್ಚಿಮ ಘಟ್ಟಗಳಲ್ಲಿಕಂಡುಬರುವ ವಿಶಿಷ್ಟ ಪ್ರಭೇದದ ಹಾರುವ ಹಾವು ಇತ್ತೀಚೆಗೆ ಬಿಳಿ ಗಿರಿರಂಗನಬೆಟ್ಟದ ಅರಣ್ಯ ಪ್ರದೇಶದಲ್ಲಿ ಮೊದಲ ಬಾರಿಗೆಕಂಡು ಬಂದಿದೆ. ‌

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ ಕಂಡು ಬರುವ ಬಹು ವರ್ಣಗಳಿಂದ ಕೂಡಿದ ಸುಂದರ ಉರಗವನ್ನುಬಿಳಿಗಿರಿಬೆಟ್ಟದ ಕಾಡಂಚಿನ ತೋಟಗಳ ಬಳಿಗುರುತಿಸಲಾಗಿದೆ.

ಈ ಹಾವಿನ ಶರೀರ ವೈವಿಧ್ಯಮಯ ಬಣ್ಣಗಳಿಂದ ಕೂಡಿದೆ. ಬೆನ್ನಿನ ಮೇಲೆ ಕಪ್ಪು, ಕೆಂಪು, ಹಳದಿ ಬಣ್ಣದ ಪಟ್ಟಿಗಳಿವೆ. ದೇಹದ ಪೊರೆ ಹುರುಪೆ ಮೃದುವಾಗಿದ್ದು,ಹೊಳೆಯುತ್ತದೆ. ದೇಹದ ಅಡಿ ಭಾಗ ತಿಳಿಹಸಿರು ಬಣ್ಣ ಹೊಂದಿದ್ದು, ತಲೆ ಅಡಿಭಾಗ ಬಿಳಿ ಇಲ್ಲವೇತಿಳಿ ಹಳದಿ ಬಣ್ಣಗಳ ಸಂಯೋಜನೆಯಿಂದ ಕಂಗೊಳಿಸುತ್ತದೆ. ತೆಳುವಾದ ಶರೀರ, ಕುತ್ತಿಗೆಗಿಂತಅಗಲವಾದ ತಲೆ ಮತ್ತು ಬಾಲ ಮರ ಏರಲು ಸಹಕರಿಸುತ್ತದೆ.

ADVERTISEMENT

ಇವು ಸದಾ ಕ್ರೀಯಾಶೀಲ ಆಗಿದ್ದು, ಹಗಲು ಮತ್ತು ಇರುಳಿನಲ್ಲಿ ಚಟುವಟಿಕೆಯಿಂದಕೂಡಿರುತ್ತದೆ. ಬೇಟೆಯ ಸಂದರ್ಭ ಇಲ್ಲವೇ ಅಪಾಯಕಾರಿ ಸ್ಥಳಗಳಲ್ಲಿ ಶತ್ರುಗಳಿಂದ ರಕ್ಷಣೆಪಡೆಯಲು ಮರದಿಂದ ಮರಕ್ಕೆ ಕೆಳಮುಖವಾಗಿ ಹಾರುತ್ತವೆ. ತೇಲುವಾಗ ಶರೀರದಪಕ್ಕೆಲುಬುಗಳನ್ನು ಅಗಲಗೊಳಿಸಿ, ಒಳಗಿನ ಗಾಳಿಯನ್ನು ಹೊರದೂಡುತ್ತ, ಉದರ ಭಾಗವನ್ನುಒಳಕ್ಕೆ ಎಳೆದುಕೊಂಡು 'ಪ್ಯಾರಾಚ್ಯೂಟ್' ನಂತೆ ಇಳಿಯುತ್ತವೆ. ಟೊಂಗೆ,ಬಿಳಲುಗಳನ್ನು ವೇಗವಾಗಿ ಏರುತ್ತವೆ. ಮನೆಹಲ್ಲಿ, ಕಪ್ಪೆ, ಹಕ್ಕಿ, ಓತಿಕ್ಯಾತ ಹಾಗೂವಿಷರಹಿತ ಸಣ್ಣ ಹಾವುಗಳು ಈ ಹಾವಿನ ಆಹಾರ.

ವಿಶೇಷ ಹಾಗೂ ವಿಸ್ಮಯ
ಕನ್ನಡದಲ್ಲಿ ಹಾರುವ ಹಾವನ್ನು 'ಬಟ್ಟೆ ಬಣಜಿಗ' ಎನ್ನುತ್ತಾರೆ. ತುಳುವಿನಲ್ಲಿ'ಪುಲ್ಲೀಪುತ್ರ', ಉರ್ದುವಿನಲ್ಲಿ 'ಕಲಜಿನ್' ಹೆಸರಿದೆ, ಇಂಗ್ಲಿಷ್‌ನಲ್ಲಿ 'ಗೋಲ್ಡನ್ಟ್ರೀ ಸ್ನೇಕ್' ಎಂದು ಕರೆಯುವ ಇದರ ವೈಜ್ಞಾನಿಕ ಹೆಸರು 'ಕ್ರೈಸೋಪೆಲಿಯ ಆರ್ನೇಟ'. ಇವುಮಾರ್ಚ್-ಏಪ್ರಿಲ್ನಲ್ಲಿ ಮಿಲನಗೊಂಡು ಜೂನ್-ಜುಲೈನಲ್ಲಿ 6 ರಿಂದ 12 ಮೊಟ್ಟೆಇಡುತ್ತವೆ. ತಮ್ಮ ಮೊಟ್ಟೆಗಳಿಗೆ ಇವು ಕಾವು ಕೊಡುವುದಿಲ್ಲ. ಮರದ ಪೊಟರೆ,ತೆಂಗು-ಕಂಗು, ಮರಗಳೆಡೆ ಇಟ್ಟ ತತ್ತಿಗಳು 60-70 ದಿನಗಳಲ್ಲಿ ಮೊಟ್ಟೆ ಒಡೆದುಕೊಂಡುಮರಿಗಳು ಹೊರಬರುತ್ತವೆ. ಎಳೆ ಮರಿಗಳ ಬಣ್ಣ ಕಪ್ಪಾಗಿದ್ದು, ಶಿರದಿಂದ ಬಾಲದ ತನಕ ಬಿಳಿಇಲ್ಲವೆ ಹಳದಿ ಬಣ್ಣದ ಹೊಳೆಯುವ ಅಡ್ಡ ಪಟ್ಟಿಗಳಿಂದ ಗಮನ ಸೆಳೆಯುತ್ತವೆ. ‌

ಹುಟ್ಟಿದಾಗ ಐದರಿಂದ ಎಂಟು ಇಂಚು ಉದ್ದ ಇದ್ದರೆ, ಸಂಪೂರ್ಣ ಬೆಳೆದಾಗ 39ರಿಂದ 69 ಇಂಚಿನವರೆಗೂಬೆಳೆಯುತ್ತದೆ. ಹೆಣ್ಣು ಗಂಡಿಗಿಂತ ದೊಡ್ಡದಾಗಿ ಬೆಳೆಯುತ್ತದೆ. ಗೋವಾ, ಈಶಾನ್ಯ ರಾಜ್ಯಗಳು ಹಾಗೂಚೀನಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಲ್ಲಿ ಈ ಹಾವು ಕಂಡು ಬರುತ್ತವೆ.‌

ಧರೆಯ ಆಭರಣವನ್ನು ಕೊಲ್ಲದಿರಿ: ‘ಈ ಹಾವುಗಳ ವರ್ತನೆ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. ವೃಕ್ಷದಿಂದ ವೇಗವಾಗಿ ಹಾರುವುದನ್ನು ಕಂಡ ಸ್ಥಳೀಯರು ಇವುಗಳನ್ನು ವಿಷಕಾರಿ ಎಂದು ಕೊಲ್ಲುವುದೇ ಹೆಚ್ಚು.ಬಿಳಿಗಿರರಂಗನ ಬನದ ಹೊರವಲಯದ ತೋಟಗಳಲ್ಲಿ ಮೊದಲ ಸಲ ಕಂಡು ಬಂದಿದ್ದು, ಮನೆ ಸಮೀಪದ ಬೊಡ್ಡೆಬಳಿ ಇಳಿ ಬಿದ್ದಿದ್ದ ಹಾವನ್ನು ಸಂರಕ್ಷಿಸಲಾಗಿದೆ. ಇವು ಅಲ್ಪ ವಿಷಕಾರಿ.ಹಾಗಾಗಿ, ಧರೆಯ ಆಭರಣವಾದ ಈ ಉರಗದ ಕುಲವನ್ನು ಸಂರಕ್ಷಿಸಬೇಕು’ ಎಂದುಉರಗ ತಜ್ಞ ಸಂತೇಮರಹಳ್ಳಿ ಸ್ನೇಕ್ ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.