ADVERTISEMENT

ಕೊಳ್ಳೇಗಾಲ: ನಡೆದಾಡಲು ದಾರಿ ಹುಡುಕಿ ಕೊಡಿ

ಪಾದಚಾರಿ ಮಾರ್ಗಗಳ ಒತ್ತುವರಿಯಿಂದ ನಾಗರಿಕರಿಗೆ ಸಮಸ್ಯೆ, ಕ್ರಮಕೈಗೊಳ್ಳದ ನಗರಸಭೆ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:31 IST
Last Updated 7 ಮಾರ್ಚ್ 2021, 19:31 IST
ಆರ್‌ಎಂಸಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಸಿಮೆಂಟ್‌ ಪೈಪ್‌ಗಳು, ಇಂಟರ್‌ಲಾಕ್‌ ಹಾಕಿರುವುದು
ಆರ್‌ಎಂಸಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಸಿಮೆಂಟ್‌ ಪೈಪ್‌ಗಳು, ಇಂಟರ್‌ಲಾಕ್‌ ಹಾಕಿರುವುದು   

ಕೊಳ್ಳೇಗಾಲ: ಗಡಿ ಜಿಲ್ಲೆ ಚಾಮರಾಜನಗರದ ವಾಣಿಜ್ಯ ನಗರಿ ಎಂದೇ ಗುರುತಿಸಿಕೊಂಡಿರುವ ಕೊಳ್ಳೇಗಾಲದಲ್ಲಿ ಜನಸಾಮಾನ್ಯರು ನಡೆದಾಡಲು ದಾರಿಯನ್ನು ಹುಡುಕುವಂತಹ ಸ್ಥಿತಿ ಇದೆ.

ಪಾದಚಾರಿಗಳ ಓಡಾಟಕ್ಕೆ ಎಂದು ನಿಗದಿ ಪಡಿಸಿರುವ ಮಾರ್ಗಗಳಲ್ಲಿ ಬಹುತೇಕ ಒತ್ತುವರಿಯಾಗಿದ್ದು, ಪಾದಚಾರಿ ಮಾರ್ಗಗಳು ಹೆಸರಿಗೆ ಮಾತ್ರ ಎಂಬಂತಾಗಿದೆ.

ಕೆಲವು ಕಡೆಗಳಲ್ಲಿ ಅಂಗಡಿಗಳ ಮಾಲೀಕರು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿದ್ದರೆ, ಇನ್ನೂ ಕೆಲವು ಕಡೆ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನೇ ತಮ್ಮ ವಹಿವಾಟಿಗೆ ಬಳಸಿಕೊಳ್ಳುತ್ತಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಗುತ್ತಿಗೆದಾರರಿಗೂ ಕಾಮಗಾರಿಗೆ ಬಳಸುವ ವಸ್ತುಗಳನ್ನು ಹಾಕಲು ಪಾದಚಾರಿ ಮಾರ್ಗಗಳೇ ಬೇಕು. ಇನ್ನೂ ಕೆಲವು ಕಡೆಗಳಲ್ಲಿ ಇದೇ ಮಾರ್ಗಗಳು ದ್ವಿಚಕ್ರ ವಾಹನ, ಆಟೊಗಳ ನಿಲ್ದಾಣವೂ ಆಗಿವೆ.

ADVERTISEMENT

ಪಾದಚಾರಿ ಮಾರ್ಗಗಳು ಒತ್ತುವರಿಯಾಗಿರುವುದರಿಂದ ಜನಸಾಮಾನ್ಯರಿಗೆ ನಗರದಲ್ಲಿ ಓಡಾಡಲು ತೊಂದರೆಯಾಗುತ್ತಿದ್ದು, ವಾಹನಗಳು ಸಾಗುವ ರಸ್ತೆಯಲ್ಲೇ ನಡೆದಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಶಾಲಾ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸಬೇಕಿದೆ. ‌

ನಗರದ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ತಾಲ್ಲೂಕು ಕಚೇರಿ ಮುಂಭಾಗ, ದೇವಾಂಗಪೇಟೆ, ಬಸ್ತೀಪುರ ರಸ್ತೆ, ಎಂ.ಜಿ.ಎಸ್.ವಿ ರಸ್ತೆ, ಕನ್ನಿಕಪರಮೇಶ್ವರಿ ರಸ್ತೆ, ಚಿನ್ನದ ಅಂಗಡಿ ಬೀದಿ ರಸ್ತೆ, ಆರ್.ಎಂ.ಸಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಹುಡುಕಬೇಕಾಗಿದೆ. ಹೆಚ್ಚು ‌ವ್ಯಾಪಾರ, ಜನಸಂದಣಿ ಇರುವ ಪ್ರದೇಶದ ರಸ್ತೆಗಳಲ್ಲೂ ಇದೇ ಪರಿಸ್ಥಿತಿ ಇದೆ.

‘ಪಾದಚಾರಿ ಮಾರ್ಗ ಒತ್ತುವರಿ ಆಗಿರುವುದು, ಜನರಿಗೆ ಇದರಿಂದ ತೊಂದರೆಯಾಗುತ್ತಿರುವುದರ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿದಿದ್ದರೂ, ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂಬುದು ಸಾರ್ವಜನಿಕರ ಆರೋಪ.

ನಗರದ ಎಲ್ಲ ರಸ್ತೆಗಳಲ್ಲಿ ಪಾದಚಾರಿಗಳಿಗೆ ಎಂದು ಪ್ರತ್ಯೇಕ ಮಾರ್ಗ ಇಲ್ಲ. ಇತ್ತೀಚೆಗೆ ಅಭಿವೃದ್ಧಿ ಪಡಿಸಲಾದ ರಸ್ತೆಗಳಲ್ಲಿ ಈ ವ್ಯವಸ್ಥೆ ಇದೆ. ಹಳೆಯ ರಸ್ತೆಗಳಲ್ಲಿ ಪ್ರತ್ಯೇಕ ಪಥ ಇಲ್ಲದಿದ್ದರೂ, ರಸ್ತೆಯ ಪಕ್ಕದ ಖಾಲಿ ಸ್ಥಳವನ್ನು ಪಾದಚಾರಿಗಳ ಸಂಚಾರಕ್ಕೆ ಇರುವುದು ಎಂದು ನಗರಸಭೆ ಗುರುತಿಸಿದೆ. ಈ ಎಲ್ಲ ಸ್ಥಳಗಳೂ ಒತ್ತುವರಿಯಾಗಿವೆ.

ವಿದ್ಯಾರ್ಥಿಗಳು, ಹಿರಿಯ ನಾಗರಿಕರ ಗೋಳು: ನಗರದಲ್ಲಿ ಪ್ರತಿ ನಿತ್ಯ ನೂರಾರು ವಿದ್ಯಾರ್ಥಿಗಳು ನಡೆದುಕೊಂಡೇ ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ಹಿರಿಯ ನಾಗರಿಕರು ಮತ್ತು ಮಹಿಳೆಯರು ವಾಯುವಿಹಾರಕ್ಕೆಂದು ನಡೆದಾಡಲು ಸಂಜೆ ವೇಳೆ ಬರುತ್ತಾರೆ. ಸಂಜೆಯ ಹೊತ್ತು ವಾಹನಗಳ ಓಡಾಟ ಹೆಚ್ಚಿರುವುದರಿಂದ, ರಸ್ತೆಯಲ್ಲಿ ನಡೆದಾಡುವಾಗ ಸುರಕ್ಷೆಯ ಬಗ್ಗೆ ಖಾತ್ರಿ ಇಲ್ಲ. ಹಾಗಿದ್ದರೂ ಅನಿವಾರ್ಯವಾಗಿ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾಗಿದೆ.

‘ವಾಹನಗಳ ಸಂಚಾರ ಹೆಚ್ಚಿರುವ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಬಿಟ್ಟು ರಸ್ತೆಯ ಬದಿಯಲ್ಲಿ ನಡೆಯುವುದು ಅಪಾಯ. ದ್ವಿಚಕ್ರವಾಹನ ಸವಾರರು ಪಾದಚಾರಿಗಳಿಗೆ ಡಿಕ್ಕಿ ಹೊಡೆಯುತ್ತಾರೆ. ಸಣ್ಣ ಪುಟ್ಟ ಅಪಘಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸಲು ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ನಾಗರಿಕ ಮೋಹನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ಕಲ್ಪಿಸಿ: ‘ಬೀದಿ ಬದಿ ವ್ಯಾಪಾರಿಗಳು ಕೂಡ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವುದು ನಿಜ. ಅವರು ಬಡವರು. ಇಲ್ಲಿ ಸಂಪಾದನೆ ಮಾಡಿದರೆ ಮಾತ್ರ ಅವರಿಗೆ ಬದುಕು. ಹಾಗಾಗಿ, ನಗರಸಭೆಯು ಅವರಿಗಾಗಿ ಪ್ರತ್ಯೇಕ ಜಾಗ ನಿಗದಿ ಪಡಿಸಿ ಅಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಎಂಬುದು ಸಾರ್ವಜನಿಕರ ಒತ್ತಾಯ.

ವಾಹನಗಳ ನಿಲುಗಡೆ ತಾಣ
ಪಾದಚಾರಿ ಮಾರ್ಗಗಳನ್ನು ಅಂಗಡಿಯವರು, ಬೀದಿ ಬದಿ ವ್ಯಾಪಾರಿಗಳು ಮಾತ್ರ ಅತಿಕ್ರಮಿಸಿಕೊಂಡಿಲ್ಲ. ವಾಹನ ಸವಾರರು, ಆಟೊ ಚಾಲಕರೂ ಇದರಲ್ಲಿ ಪಾಲುದಾರರೇ.

ದ್ವಿಚಕ್ರವಾಹನ ಸವಾರರು ಪಾದಚಾರಿಗಳ ಪಥದಲ್ಲಿ ವಾಹನ ನಿಲ್ಲಿಸುತ್ತಾರೆ. ಡಾ.ಬಿ.ಆರ್‌.ಅಂಬೇಡ್ಕರ್ ರಸ್ತೆಯಲ್ಲಿ ಪಾದಚಾರಿ ಮಾರ್ಗವೇ ಆಟೊ ನಿಲ್ದಾಣವಾಗಿದೆ.

ಸಂಚಾರ ಸಂಕಷ್ಟ: ಕೊಳ್ಳೇಗಾಲದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಏರುತ್ತಿದೆ. ಪ್ರಮುಖ ವಹಿವಾಟು ಕೇಂದ್ರವಾಗಿರುವುದರಿಂದ ಭೇಟಿ ನೀಡುವ ಜನರ ಸಂಖ್ಯೆಯೂ ಹೆಚ್ಚಿರುತ್ತದೆ. ಪಾದಚಾರಿ ಮಾರ್ಗಗಳು ಒತ್ತುವರಿಯಾಗಿರುವುದರಿಂದ ಜನರು ಸಂಚರಿಸಲು ರಸ್ತೆಯನ್ನೇ ಅವಲಂಬಿಸಬೇಕು. ವಾಹನಗಳ ದಟ್ಟಣೆ, ಜನರ ದಟ್ಟಣೆ ಹೆಚ್ಚುತ್ತಿರುವುದರಿಂದ ಆಗಾಗ ಸಂಚಾರ ಸಮಸ್ಯೆ ಎದುರಾಗುತ್ತಿದೆ. ಪೊಲೀಸರು ಸಂಚಾರ ನಿಯಂತ್ರಣಕ್ಕಾಗಿ ಹರಸಾಹಸ ಪಡಬೇಕಾಗಿದೆ.

ಜನರು ಏನಂತಾರೆ?
ಒತ್ತುವರಿ ತೆರವುಗಳಿಸಿ
ಪಾದಚಾರಿ ಮಾರ್ಗದಲ್ಲಿಯೇ ಅನೇಕ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಅಧಿಕಾರಿಗಳು ಇತ್ತ ಗಮನಹರಿಸಿ ವಸ್ತುಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು.
–ಪೀಟರ್,ಕೊಳ್ಳೇಗಾಲ

ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ನಗರದಲ್ಲಿ ಬಹುತೇಕ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ನಗರಸಭೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸದೆ ಕಣ್ಣುಮ್ಮುಚ್ಚಿ ಕುಳಿತಿದ್ದಾರೆ. ಜನರ ಕಷ್ಟ ಅವರಿಗೆ ಅರ್ಥವೇ ಆಗುತ್ತಿಲ್ಲ.
–ರವಿ, ಸಾರ್ವಜನಿಕ

ತಿರುಗಾಡಲು ಆಗುತ್ತಿಲ್ಲ
ಜನರು ಸಂಚರಿಸಬೇಕಾದ ಪಾದಚಾರಿ ಮಾರ್ಗದಲ್ಲಿ ಬೈಕ್, ಆಟೋ, ಕಾರುಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ವೃದ್ಧರು, ಮಹಿಳೆಯರು, ಮಕ್ಕಳಿಗೆ ಸುರಕ್ಷಿತವಾಗಿ ತಿರುಗಾಡಲು ಸಾಧ್ಯವಾಗದ ಸ್ಥಿತಿ ಇದೆ
–ಲಿಂಗರಾಜು, ನಗರ ನಿವಾಸಿ

***

ನಗರದಲ್ಲಿ ಒತ್ತುವರಿಯಾಗಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಗೊಳಿಸಲು ತಕ್ಷಣ ಕ್ರಮ ವಹಿಸಲಾಗುವುದು.
-ಗಂಗಮ್ಮ, ನಗರಸಭೆ ಅಧ್ಯಕ್ಷೆ

***

ಎಲ್ಲೆಲ್ಲಿ ಪಾದಚಾರಿ ಮಾರ್ಗಗಳು ಒತ್ತುವರಿಯಾಗಿದೆ ಎಂಬುದನ್ನು ಗುರುತು ಮಾಡಿ, ಶೀಘ್ರದಲ್ಲಿ ತೆರವುಗೊಳಿಸಿ ಜನರಿಗೆ ಅನುಕೂಲ ಕಲ್ಪಿಸುತ್ತೇವೆ.
-ವಿಜಯ್‌, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.