ADVERTISEMENT

ಯಳಂದೂರು | ಕಾಡ್ಗಿಚ್ಚು ತಡೆಗೆ ‘ಬೆಂಕಿ ರೇಖೆ’ ಸಿದ್ಧ: ಗಿರಿವಾಸಿಗಳಲ್ಲಿ ಜಾಗೃತಿ

ಎನ್.ಮಂಜುನಾಥಸ್ವಾಮಿ
Published 25 ಜನವರಿ 2025, 6:58 IST
Last Updated 25 ಜನವರಿ 2025, 6:58 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಸ್ತೆ ಬದಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ರೇಖೆ ಎಳೆಯಲು ಸಿದ್ಧತೆ ನಡೆಸಿದರು.
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಸ್ತೆ ಬದಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ರೇಖೆ ಎಳೆಯಲು ಸಿದ್ಧತೆ ನಡೆಸಿದರು.   

ಯಳಂದೂರು: ಬೇಸಿಗೆ ಅವಧಿಯಲ್ಲಿ ಕಾನನಕ್ಕೆ ಬೀಳಬಹುದಾದ ಬೆಂಕಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಬೆಂಕಿ ತಡೆಯುವ ಸಾಂಪ್ರದಾಯಿಕ ವಿಧಾನಗಳಲ್ಲಿ ಒಂದಾಗಿರುವ ‘ಬೆಂಕಿ ರೇಖೆ’ ಎಳೆಯುವ ಕಾರ್ಯ ಆರಂಭಿಸಿದೆ. ಬಿಆರ್‌ಟಿ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿ ಬೆಂಕಿ ರೇಖೆ ಎಳೆಯುವ ಕಾರ್ಯ ಭರದಿಂದ ಸಾಗಿದ್ದು ಅಗ್ನಿ ಆಕಸ್ಮಿಕ ತಡೆಯುವ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ.

ತಾಲ್ಲೂಕಿನ ಬಿಆರ್‌ಟಿ ಅರಣ್ಯವು ಪ್ರತಿ ವರ್ಷ ಹಲವು ಕಾರಣಗಳಿಂದ ಕಾಡ್ಗಿಚ್ಚಿಗೆ ತುತ್ತಾಗುತ್ತದೆ. ಅರಣ್ಯ ಪಾಲಕರು, ಗಸ್ತುಪಡೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಕಾನನಕ್ಕೆ ಬೀಳುವ ಬೆಂಕಿ ನಂದಿಸಲು ಹರಸಾಹಸ ಪಡುತ್ತವೆ. ಬೆಂಕಿ ಬೀಳದಂತೆ ಎಷ್ಟೆ ಮುನ್ನೆಚ್ಚರಿಕೆ ವಹಿಸಿದರೂ ಆಗಾಗ ಕಾಣಿಸಿಕೊಳ್ಳುವ ಕಾಡ್ಗಿಚ್ಚು ಕಾಡು ಹಾಗೂ ವನ್ಯಜೀವಿಗಳನ್ನು ಅಪೋಷನ ತೆಗೆದುಕೊಳ್ಳುತ್ತಲೇ ಇರುತ್ತದೆ. ಈ ಬಾರಿಯ ಬೇಸಗೆ ಕಾಡ್ಗಿಚ್ಚು ಮುಕ್ತ’ವಾಗರಿಬೇಕು ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಬೆಂಕಿ ರೇಖೆ ಎಳೆಯುವ ಕಾರ್ಯ ಆರಂಭಿಸಿದೆ.

ಏನಿದು ಬೆಂಕಿ ರೇಖೆ:

ಕಾಡು ಹಸಿರು ಇರುವುಗಾಗಲೇ ಬೇಸಗೆ ಆರಂಭಕ್ಕೂ ಮುನ್ನ ಅರಣ್ಯದೊಳಗಿನ ರಸ್ತೆ ಬದಿಯ ತ್ಯಾಜ್ಯವನ್ನು ಒಟ್ಟಾಗಿಸಿ ಸುಡುವುದು, ಪೊದೆಗಳನ್ನು ತೆರವು ಗೊಳಿಸುವುದು, ಹಿಂದೆ ಬೆಂಕಿ ಕಾಣಿಸಿಕೊಂಡ ಸ್ಥಳಗಳನ್ನು ಗುರುತಿಸಿ ವಿಶೇಷ ಆದ್ಯತೆ ಮೇಲೆ ಕಳೆ ಸಸ್ಯಗಳನ್ನು ನಾಶ ಮಾಡುವುದು, ಬೆಟ್ಟ ಗುಡ್ಡಗಳ ಕಲ್ಲು ಬಂಡೆಗಳ ಸಮೀಪದಲ್ಲಿ ಕಾಡ್ಗಿಚ್ಚು ವ್ಯಾಪಿಸದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಬೆಂಕಿ ರೇಖೆ ನಿರ್ಮಿಸಲಾಗುತ್ತದೆ.

ADVERTISEMENT

ಬೆಂಕಿ ರೇಖೆ ವಿಧಾನ ಹಿಂದೆ ಹೆಚ್ಚು ಬಳಕೆಯಲ್ಲಿತ್ತು. ರಸ್ತೆ ಬದಿಗಳಲ್ಲಿ ಮಾತ್ರ ಅಗ್ನಿ ರೇಖೆ ನಿರ್ಮಿಸದೆ, ಅರಣ್ಯದ ನಡುವೆಯೂ ಬೆಂಕಿ ತಡೆಯಲು ಅಗ್ನಿ ರೇಖೆ ನಿರ್ಮಾಣ ಮಾಡಲಾಗುತ್ತಿತ್ತು. ಬೆಂಕಿ ಸುಲಭವಾಗಿ ಹೊತ್ತಿಕೊಳ್ಳುವ ಕಳೆಸಸ್ಯ, ಒಣ ಬಿದಿರು, ಲಂಟಾನ, ಯುಪಟೋರಿಯಂ ಸಸ್ಯಗಳನ್ನು ತೆರವುಗೊಳಿಸಿ ಕಾಡನ್ನು ರಕ್ಷಿಸುವುದು ಬೆಂಕಿ ರೇಖೇ ಹಾಕುವುದರ ಉದ್ದೇಶ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.

ಬುಡಕಟ್ಟು ಜನರಿಗೆ ಕಾನನ ಬದುಕಿನ ಭಾಗವಾಗಿದ್ದು ಕಿರು ಅರಣ್ಯ ಉತ್ಪನ್ನಗಳನ್ನು ಪೂರೈಸುವ ಮೂಲಕ ಹೊಟ್ಟೆ ಹೊರೆಯಲು ನೆರವಾಗಿದೆ. ಅರಣ್ಯದೊಳಗಿನ ಜೇನು, ಗಿಡಮೂಲಿಕೆ ಸಸ್ಯ ಹಾಗೂ ನೀರಿನ ಅಮೂಲ್ಯ ಆಕರಗಳು ಗಿರಿಜನರ ಪಾಲಿನ ಬದುಕನ್ನು ಪೊರೆಯುತ್ತಿವೆ. ಬೆಂಕಿ ಅವಘಡಗಳಿಂದ ಕಾಡಿನ ಮೂಲ ನಿವಾಸಿಗಳು ಸಹ ಸಮಸ್ಯೆ ಎದುರಿಸಬೇಕಾಗಿದೆ.

ಈ ದೆಸೆಯಲ್ಲಿ ಅರಣ್ಯ ಇಲಾಖೆಯು ಪ್ರತಿ ವರ್ಷ ಹಾಡಿಗಳ ನಿವಾಸಿಗಳಿಗೆ ಬೆಂಕಿ ಅನಾಹುತ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದರೂ ಈ ವರ್ಷವೂ ಮುಂದುವರಿಸಿದೆ. ಕಾಡಿನ ಜನರ ಅನುಭವವನ್ನು ಕಾಡ್ಗಿಚ್ಚು ತಗ್ಗಿಸುವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದು ಕೂಡ ಕಾರ್ಯಕ್ರಮದ ಉದ್ದೇಶವಾಗಿದ್ದು ಬುಡಕಟ್ಟು ಸಂಘ-ಸಂಸ್ಥೆಗಳು ಈ ದೆಸೆಯಲ್ಲಿ ಗಿರಿಜನರಿಗೆ ಮಾಹಿತಿ ನೀಡುತ್ತವೆ ಎಂದು ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಹೇಳಿದರು.

ಕಾಡ್ಗಿಚ್ಚಿನ ದುಷ್ಪರಿಣಾಮಗಳ ಬಗ್ಗೆ ಬುಡಕಟ್ಟು ಜನರಿಗೆ ಆರ್ಎಫ್ಒ ಎನ್.ನಾಗೇಂದ್ರ ನಾಯಕ್ ತಿಳಿಸಿದರು.

ಈ ಬಾರಿ ವಿಶೇಷ ಸಿದ್ಧತೆ:

ಆರ್‌ಎಫ್‌ಒ ರಾಷ್ಟ್ರೀಯ ಉದ್ಯಾನಗಳ ವ್ಯಾಪ್ತಿಯ ರಸ್ತೆಗಳ ಬದಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಇಲಾಖೆಯ ಸಿಬ್ಬಂದಿ ಜತೆಗೆ ಸ್ಥಳೀಯರ ಸಹಕಾರ ಪಡೆಯಲಾಗುತ್ತಿತ್ತು. ಈ ಬಾರಿ ಡಿಸೆಂಬರ್ ಅಂತ್ಯದಿಂದಲೇ ಬೆಂಕಿ ಬೀಳುವ ಸ್ಥಳಗಳನ್ನು ಗುರುತಿಸಿ ಹುಲ್ಲು ಪೊದೆಯನ್ನು ಕತ್ತರಿಸಿ ಬೆಂಕಿ ಹಚ್ಚಲಾಗುತ್ತದೆ. ನಂತರ ಹಸಿಸೊಪ್ಪು ಮತ್ತು ಗೋಣಿ ಚೀಲದಿಂದ ಬೆಂಕಿ ನಂದಿಸಲಾಗುತ್ತದೆ. ಈ ಸ್ಥಳ ಕಪ್ಪಾಗಿ ಒಣಗುವುದರಿಂದ ಬೇಸಗೆಯಲ್ಲಿ ಈ ಜಾಗದ ಸುತ್ತಮುತ್ತ ಬೆಂಕಿ ಹರಡುವುದಿಲ್ಲ ಬೆಂಕಿಯೂ ವ್ಯಾಪಿಸುವುದಿಲ್ಲ. ಬೆಂಕಿ ರೇಖೆ ಕಾರ್ಯಕ್ಕೆ 80ಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರು ಮತ್ತು ನೌಕರರು ಬೇಸಿಗೆ ಅವಧಿ ಮುಗಿಯುವ ತನಕ ಬೆಂಕಿ ರೇಖೆ ಸಿದ್ಧಗೊಳಿಸಲಿದ್ದಾರೆ ಎಂದು ಯಳಂದೂರು ವನ್ಯಜೀವಿ ವಲಯದ ಆರ್‌ಎಫ್‌ಒ ನಾಗರಾಜ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.