ADVERTISEMENT

ಕಾಡಿನ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಿ: ಉಮೇಶ ಕತ್ತಿ

ಮಹದೇಶ್ವರ ಬೆಟ್ಟ: ಶಾಸಕ, ಅರಣ್ಯ ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 5:29 IST
Last Updated 9 ಆಗಸ್ಟ್ 2022, 5:29 IST
ಅರಣ್ಯ ಸಚಿವ ಉಮೇಶ ಕತ್ತಿ ಅವರು ಸೋಮವಾರ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿಗೆ ಭೇಟಿ ನೀಡಿ ಭೋರ್ಗರೆಯುತ್ತಿರುವ ಜಲಪಾತದ ಸೌಂದರ್ಯ ಸವಿದರು
ಅರಣ್ಯ ಸಚಿವ ಉಮೇಶ ಕತ್ತಿ ಅವರು ಸೋಮವಾರ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿಗೆ ಭೇಟಿ ನೀಡಿ ಭೋರ್ಗರೆಯುತ್ತಿರುವ ಜಲಪಾತದ ಸೌಂದರ್ಯ ಸವಿದರು   

ಹನೂರು: ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರಿಗೆ ಮೂಲ ಸೌಕರ್ಯ ಕಲ್ಪಿಸಿಕೊಡಲು ಅರಣ್ಯಾಧಿಕಾರಿಗಳು ಕ್ರಮವಹಿಸಬೇಕು ಎಂದು ಅರಣ್ಯ ಸಚಿವ ಉಮೇಶ ವಿ. ಕತ್ತಿ ಸೋಮವಾರ ಸೂಚಿಸಿದರು.

ತಾಲ್ಲೂಕಿನ ಮಹದೇಶ್ವರ ಬೆಟ್ಟ ಲೋಕೋಪಯೋಗಿ ವಸತಿ ಗೃಹದಲ್ಲಿ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರ ಜೊತೆ ಸಚಿವರು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ‘ಬೆಟ್ಟದ ವ್ಯಾಪ್ತಿಯ ಬಹುತೇಕ ಗ್ರಾಮಗಳು ಅರಣ್ಯದೊಳಗಿವೆ. ತುರ್ತು ಸಂದರ್ಭದಲ್ಲಿ ಬೆಟ್ಟಕ್ಕೆ ಬರಲು ಯಾವುದೇ ರಸ್ತೆ ಸಂಪರ್ಕವಿಲ್ಲ. ಇದರಿಂದ ಇಲ್ಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮಗಳಿಗೆ ಸಮರ್ಪಕ ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕಯಗಳನ್ನು ಕಲ್ಪಿಸಿಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಗ್ರಾಮಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

‘ನರೇಗಾ ಯೋಜನೆಯಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಕಚ್ಚಾ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕು. ಅಲ್ಲದೇ ಅರಣ್ಯದೊಳಗಿರುವ ಜನರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಜನರು ವಲಸೆ ಹೋಗುವುದನ್ನು ತಪ್ಪಿಸಬೇಕು’ ಎಂದರು.

ಜನ-ವನ ಸೇತುವೆ ಸಾರಿಗೆ ಬಳಕೆ: ಕಾಡಿನಲ್ಲಿರುವ ಗ್ರಾಮಗಳಿಗೆ ವಾಹನ ಸಂಪರ್ಕವಿಲ್ಲದಿರುವುದರಿಂದ ಸಮರ್ಪಕವಾಗಿ ಪಡಿತರ ವಿತರಣೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

‘ಮಲೆಮಹದೇಶ್ವರ ವನ್ಯಧಾಮ ಹಾಗೂ ಜಿಲ್ಲಾಡಳಿತ ವತಿಯಿಂದ ಜನರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿರುವ ಜನ-ವನ ಸೇತುವೆ ವಾಹನವನ್ನೇ ಪಡಿತರ ಸಾಗಾಣೆಗೂ ಬಳಸಿಕೊಳ್ಳಿ’ ಎಂದು ಸಚಿವರು ಸೂಚಿಸಿದರು.

ಗಿರಿಜನರಿಂದ ಮನವಿ: ಸಚಿವರು ಸೋಮವಾರ ಬೆಳಿಗ್ಗೆ ಹೊಗೆನಕಲ್ ಜಲಪಾತ ಪ್ರದೇಶ ವೀಕ್ಷಣೆ ಮಾಡಿ ಮಹದೇಶ್ವರ ಬೆಟ್ಟಕ್ಕೆ ವಾಪಸ್‌ ಆಗುತ್ತಿದ್ದಾಗ ಪಾಲಾರ್‌ನಲ್ಲಿ ಗಿರಿಜನರು, ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

‘ಪಾಲಾರ್ ಗ್ರಾಮದಲ್ಲಿ 103 ಕುಟುಂಬಗಳಿದ್ದು, 350ಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ವಿದ್ಯುತ್ ಸೌಲಭ್ಯವಿಲ್ಲದೇ ಇಂದಿಗೂ ಸೀಮೆಎಣ್ಣೆ ಬುಡ್ಡಿ ದೀಪದ ಬೆಳಕಿನಲ್ಲಿ ಜೀವನ ಸಾಗಿಸುವಂತಾಗಿದೆ’ ಎಂದು ಸಚಿವರೊಂದಿಗೆ ಅವಲತ್ತುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಉಮೇಶ ಕತ್ತಿ, ‘ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ ಹೊಗೆನಕಲ್ ಜಲಪಾತ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಪಾಲಾರ್‌ನಿಂದ ಹೊಗೆನಕಲ್‌ಗೆ ತೆರಳುವ ರಸ್ತೆಯಲ್ಲಿ ಸೇತುವೆಗಳು ತಳಮಟ್ಟದಲ್ಲಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುತ್ತವೆ. ಕೂಡಲೇ ಅವುಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಲಾಗುವುದು’ ಎಂದರು.

ಶಾಸಕ ಆರ್.ನರೇಂದ್ರ, ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ಬಿಜೆಪಿ ಮುಖಂಡ ಡಾ. ಪ್ರೀತನ್ ನಾಗಪ್ಪ, ಚಂಗಡಿ ಕರಿಯಪ್ಪ, ಶಾಂತಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ಚಂಗಡಿ ಸ್ಥಳಾಂತರ: 17ರಂದು ಸಿ.ಎಂ ಸಭೆ

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ‘ಜಿಲ್ಲೆಯ ಬಹುನಿರೀಕ್ಷಿತ ಯೋಜನೆಯಾದ ಚಂಗಡಿ ಪುನರ್‌ವಸತಿ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸರ್ವೆ ಕಾರ್ಯ ಮುಗಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೂ ವರದಿ ಸಲ್ಲಿಸಿದೆ. ಆದರೆ, ವರದಿ ಸಲ್ಲಿಸಿ ಏಳೆಂಟು ತಿಂಗಳಾದರೂ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ. ಕೂಡಲೇ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಸಚಿವರು, ‘ಇದೇ 17 ರಂದು ಮುಖ್ಯಮಂತ್ರಿಗಳ ಜತೆ ಸಭೆ ನಿಗದಿಯಾಗಿದೆ. ಗ್ರಾಮಸ್ಥರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಬೇಕು. ನಾನೂ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.