ADVERTISEMENT

ಬೆಂಕಿ: ಮಾಹಿತಿ ನೀಡಿದವನನ್ನೇ ವಶಕ್ಕೆ! 

ಹುಲುಗನಮುರಡಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಬಿದ್ದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದ ಪತ್ರಕರ್ತ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 11:27 IST
Last Updated 25 ಫೆಬ್ರುವರಿ 2020, 11:27 IST
ಹುಲುಗನಮುರಡಿ ಬಳಿ ಶುಕ್ರವಾರ ಕಂಡು ಬಂದಿದ್ದ ಬೆಂಕಿ
ಹುಲುಗನಮುರಡಿ ಬಳಿ ಶುಕ್ರವಾರ ಕಂಡು ಬಂದಿದ್ದ ಬೆಂಕಿ   

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಬಳಿಯ ಹುಲುಗನಮುರಡಿ ಬೆಟ್ಟದ ಬಳಿ ಬೆಂಕಿ ಬಿದ್ದಿರುವ ಮಾಹಿತಿಯನ್ನು ನೀಡಿದ ಸಂಜೆ ಪತ್ರಿಕೆಯೊಂದರ ವರದಿಗಾರ ಆರ್‌.ಪ್ರಮೋದ್‌ ಅವರನ್ನು ವಶಕ್ಕೆ ಪಡೆದು, ರಾತ್ರಿ ಇಡೀ ಅನ್ನ ನೀರು ನೀಡದೆ ಕಚೇರಿಯಲ್ಲಿ ಕೂರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳ ಕ್ರಮಕ್ಕೆ ವ್ಯಾಪ‍ಕ ಆಕ್ರೋಶ ವ್ಯಕ್ತವಾಗಿದೆ.

ಶುಕ್ರವಾರ (ಫೆ.21) ಸಂಜೆ ಪತ್ರಕರ್ತ ಮನೆಗೆ ಹೋಗುವ ಸಂದರ್ಭದಲ್ಲಿ ಹುಲಗನಮರಡಿ ಬೆಟ್ಟದ ತಪ್ಪಲಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಅವರು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರ ಗಮನಕ್ಕೆ ತಂದಿದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಅವರು ಸಾಮಾಜಿಕ ಅರಣ್ಯ ವಿಭಾಗದ ಎಸಿಎಫ್‌ ಪರಮೇಶ್‌, ವಲಯ ಅರಣ್ಯಾಧಿಕಾರಿ ಹಾಗೂ ಇತರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದಿದ್ದರು.

ಪರಮೇಶ್‌ ಅವರು ಪ್ರಮೋದ ಅವರ ಊರಿಗೆ ಬಂದು ತಮ್ಮ ವಾಹನದಲ್ಲಿ ಅವರನ್ನು ಬೆಂಕಿ ಬಿದ್ದ ಸ್ಥಳವನ್ನು ತೋರಿಸುವಂತೆ ಕರೆದುಕೊಂಡು ಹೋದರು. ಸ್ಥಳಕ್ಕೆ ಹೋದಾಗ ಬೆಂಕಿ ನಂದಿ ಹೋಗಿತ್ತು.

ADVERTISEMENT

‘ಇದು ಅರಣ್ಯ ಪ್ರದೇಶ ಅಲ್ಲ. ಖಾಸಗಿ ಜಮೀನು. ನೀವು ತಪ್ಪು ಮಾಹಿತಿ ನೀಡಿದ್ದೀರಿ’ ಎಂದು ಪ್ರಮೋದ್‌ ಅವರನ್ನು ಬೆದರಿಸಿದ್ದ ಅರಣ್ಯ ಅಧಿಕಾರಿಗಳು, ಸ್ಥಳದಲ್ಲೇ ಬಲವಂತವಾಗಿ ತಪ್ಪೊಪ್ಪಿಗೆ ಪತ್ರ ಬರೆಸಿ ತೆರಕಣಾಂಬಿ ಠಾಣೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಪೊಲೀಸರು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಾಗ ಅರಣ್ಯ ಇಲಾಖೆಯ ಕಚೇರಿಗೆ ಕರೆದುಕೊಂಡು ಹೋಗಿ ಇಡೀ ರಾತ್ರಿ ಕೂರಿಸಿದ್ದರು.

ವಿಷಯ ಗೊತ್ತಾಗುತ್ತಿದ್ದಂತೆಯೇ ರೈತ ಮುಖಂಡ ಶಾಂತಮಲ್ಲಪ್ಪ ಹಾಗೂ ಇತರರು ಶನಿವಾರ ಅರಣ್ಯ ಇಲಾಖೆಯ ಕಚೇರಿಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾಹಿತಿ ನೀಡಿದವರನ್ನೇ ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಳಿಕ ಅಧಿಕಾರಿಗಳು ತಪ್ಪೊಪ್ಪಿಗೆ ಪತ್ರವನ್ನು ವಾಪಸ್‌ ನೀಡಿ, ಪ್ರಮೋದ್‌ ಅವರನ್ನು ಕಳುಹಿಸಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಾಲಚಂದ್ರ ಅವರು, ‘ನನಗೆ ಪ್ರಮೋದ್‌ ಅವರು ಮಾಹಿತಿ ನೀಡಿದ ತಕ್ಷಣ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಹೋಗಿದ್ದೆ. ಅದು ಅರಣ್ಯ ಪ್ರದೇಶವಾಗಿರಲಿಲ್ಲ. ರೈತರ ಜಮೀನು ಆಗಿತ್ತು. ಅಲ್ಲಿಂದ ಅರಣ್ಯಕ್ಕೆ 2 ಕಿ.ಮೀ ಹೆಚ್ಚು ದೂರವಿತ್ತು. ರಸ್ತೆ ಬದಿಯಲ್ಲೇ ಬೆಂಕಿ ಬಿದಿತ್ತು. ಅದು ಕಾಡು ಅಲ್ಲ ಎಂಬುದು ಯಾರಿಗಾದರೂ ಗೊತ್ತಾಗುತ್ತಿತ್ತು. ಹಾಗಾಗಿ, ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದುಕೊಂಡು ಯುವ ಪತ್ರಕರ್ತನನ್ನು ವಿಚಾರಣೆ ಮಾಡಿದ್ದು ನಿಜ. ಆದರೆ, ನಂತರ ಅವರು ಮಾಹಿತಿ ನೀಡಿದ್ದರಲ್ಲಿ ದುರುದ್ದೇಶ ಇರಲಿಲ್ಲ ಎಂದು ಗೊತ್ತಾದ ತಕ್ಷಣ ಅವರನ್ನು ಬಿಟ್ಟಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.