ADVERTISEMENT

ಚಾಮರಾಜನಗರ: ಅರಣ್ಯವಾಸಿಗಳಿಗೆ ಸಿಗದ ನಿವೇಶನ ಹಕ್ಕುಪತ್ರ

ಅರಣ್ಯ ಹಕ್ಕು ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರಿಗೆ ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:27 IST
Last Updated 20 ಜುಲೈ 2025, 2:27 IST
ಚಾಮರಾಜನಗರ ತಾಲ್ಲೂಕಿನ ಕುಂಬಾರಗುಂಡಿಯ ಬುಡಕಟ್ಟು ಗಿರಿಜನ ಆಶ್ರಮ ಶಾಲೆಯಲ್ಲಿ ಅರಣ್ಯ ಹಕ್ಕು ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಗ್ರಾಮದ ಮುಖಂಡರಿಗೆ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಸಭೆಯಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಮಾತನಾಡಿದರು
ಚಾಮರಾಜನಗರ ತಾಲ್ಲೂಕಿನ ಕುಂಬಾರಗುಂಡಿಯ ಬುಡಕಟ್ಟು ಗಿರಿಜನ ಆಶ್ರಮ ಶಾಲೆಯಲ್ಲಿ ಅರಣ್ಯ ಹಕ್ಕು ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಗ್ರಾಮದ ಮುಖಂಡರಿಗೆ ಅರಣ್ಯ ಹಕ್ಕು ಕಾಯ್ದೆಯ ಅನುಷ್ಠಾನ ಸಭೆಯಲ್ಲಿ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಮಾತನಾಡಿದರು   

ಚಾಮರಾಜನಗರ: ಜಿಲ್ಲೆಯ ಹಲವು ಪೋಡುಗಳು ಅರಣ್ಯ ಹಕ್ಕು ಕಾಯ್ದೆಯಡಿ ಪ್ರಮುಖ ಹಕ್ಕುಗಳನ್ನು ಪಡೆಯಲು ಸಾಧ್ಯವಾಗದೆ ಎಲ್ಲ ಆದಿವಾಸಿಗಳಿಗೆ ನಿವೇಶನಗಳ ಹಕ್ಕು ದೊರೆತಿಲ್ಲ ಎಂದು ಏಟ್ರಿ ಸಂಶೋಧಕ ಮತ್ತು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಕುಂಬಾರಗುಂಡಿಯ ಬುಡಕಟ್ಟು ಗಿರಿಜನ ಆಶ್ರಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಶೋಕ ಪರಿಸರ ಸಂಶೋಧನೆ ಮತ್ತು ಪರಿಸರ ವಿಜ್ಞಾನ ಸಂಸ್ಥೆ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಹಾಗೂ ತಾಲ್ಲೂಕು ಸೋಲಿಗ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಚಾಮರಾಜನಗರ ತಾಲ್ಲೂಕಿನ ಅರಣ್ಯ ಹಕ್ಕು ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಗ್ರಾಮದ ಮುಖಂಡರಿಗೆ ಅರಣ್ಯ ಹಕ್ಕು ಕಾಯ್ದೆ 2006ರ ಅನುಷ್ಠಾನದ ಬಗ್ಗೆ ಅರಿವು ಸಭೆಯಲ್ಲಿ ಮಾತನಾಡಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹರಿಗೆ ನಿವೇಶನದ ಹಕ್ಕುಪತ್ರಗಳು ಸಿಗಬೇಕಿದೆ. ತಾಲ್ಲೂಕಿನಲ್ಲಿ 18 ಅರಣ್ಯ ಹಕ್ಕು ಸಮಿತಿಗಳಿದ್ದು ಅದರೊಳಗೆ ಮರಣ ಹಿಂದಿದವರ ಹೆಸರುಗಳಿದ್ದು ಶೀಘ್ರ ಗ್ರಾಮಸಭೆ ನಡೆಸಿ ಸಮಿತಿಗೆ ಹೊಸದಾಗಿ ಸದಸ್ಯರನ್ನು ನೇಮಕ ಮಾಡಿಕೊಳ್ಳಬೇಕಿದೆ. ಉಪ ವಿಬಾಗ ಮಟ್ಟದ ಅರಣ್ಯ ಹಕ್ಕು ಸಮಿತಿಯ ಅರ್ಜಿಯಲ್ಲಿ ದಾಖಲಾತಿಗಳು ಸಮರ್ಪಕವಾಗಿಲ್ಲ ಎಂದು ಗ್ರಾಮ ಪಂಚಾಯಿತಿಗೆ ಮರಳಿ ಕಳಿಸಿ 2 ವರ್ಷ ಕಳೆದರೂ ಸ್ಪಂದನೆ ದೊರೆತಿಲ್ಲ ಎಂದರು.

ADVERTISEMENT

ಅರಣ್ಯ ಹಕ್ಕು ಸಮಿತಿ ಜವಾಬ್ದಾರಿ ತೆಗೆದುಕೊಂಡು ಅರ್ಜಿಗಳನ್ನು ಮರು ಪರಿಶೀಲಿಸಿ ದಾಖಲಾತಿಗಳನ್ನು ಉಪ ವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಿಕೊಡಬೇಕು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆದಿವಾಸಿಗಳ ಅರಣ್ಯ ಹಕ್ಕುಗಳ ಬಗ್ಗೆ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಸರಿಯಾಗಿ ಕೆಲಸಗಳಾಗದೆ ಆದಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಆದಿವಾಸಿಗಳ ಹಕ್ಕುಗಳಿಗಾಗಿ ಅರಣ್ಯ ಹಕ್ಕು ಕೋಶ ರಚನೆ ಮಾಡಲಾಗಿದ್ದರೂ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ಸಂಘದ ಮುಖಂಡರು ಮತ್ತು ಅರಣ್ಯ ಹಕ್ಕು ಸಮಿತಿಗಳು ಪ್ರಶ್ನೆ ಮಾಡಬೇಕು ಎಂದರು.

ಅರಣ್ಯ ಹಕ್ಕು ಸಮಿತಿಗಳು ನಿವೇಶನ, ಪುನರ್ವಸತಿ, ಜಮೀನು, ಸ್ಮಶಾನ, ಕಂದಾಯ ಗ್ರಾಮ, ದೇವಸ್ಥಾನ, ಕಲ್ಲುಗುಡಿ, ಮೂಲಸೌಲಭ್ಯಗಳಾದ ಸಮುದಾಯ ಭವನ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಕರ್ಯ ಸೇರಿದಂತೆ ಇತರೆ ಸೌಲಭ್ಯಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಕೆರೆ ಹಾಗೂ ಅಣೆಕಟ್ಟೆಗಳಲ್ಲಿ ಮೀನುಗಾರಿಕೆ ಮಾಡಲು ಅರ್ಜಿ ಸಲ್ಲಿಸಿ ಅರಣ್ಯ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಮೀನಿಗೆ ಅರ್ಜಿ ಸಲ್ಲಿಸುವಾಗ ಮಕ್ಕಳ ಹೆಸರು ಕೈಬಿಟ್ಟಿದ್ದರೆ, ಮರಣ ಹೊಂದಿದ್ದರೆ ವಂಶವೃಕ್ಷ ಮಾಡಿಸುವುದು ಅವಶ್ಯಕವಾಗಿದೆ ಎಂದು ಮಾದೇಗೌಡ ತಿಳಿಸಿದರು.

ತಾಲ್ಲೂಕು ಸೋಲಿಗ ಸಂಘದ ಅಧ್ಯಕ್ಷ ಸಿ.ಕೋಣುರೇಗೌಡ ಮಾತನಾಡಿದರು. ಸಭೆಯಲ್ಲಿ ತಾಲ್ಲೂಕು ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಣ್ಣ ಹೈದ, ಸಂಘಟನೆ ಕಾರ್ಯದರ್ಶಿ ನಂಜೇಗೌಡ, ಜಿಲ್ಲಾ ಸಂಘದ ಉಪಾದ್ಯಕ್ಷೆ ಮಹದೇವಮ್ಮ, ಲ್ಯಾಂಪ್ಸ್ ಅಧ್ಯಕ್ಷ ಶಿವಣ್ಣ, ಮುಖಂಡರಾದ ಆಲಮ್ಮ, ಜೆ.ಮಾದೇವ, ಚೆನ್ನಂಜೇಗೌಡ, ಮುಖಂಡರಾದ ಸಿದ್ದೇಗೌಡ, ಗೌರಮ್ಮ, ಕುಂಭಮ್ಮ, ಮಾದೇಗೌಡ, ಶಿವಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.