ಚಾಮರಾಜನಗರ: ಅರಣ್ಯ ಸಂವರ್ಧನೆ ನೆಪದಲ್ಲಿ ಕಾಡಿನೊಳಗೆ ಜಾನುವಾರುಗಳ ಪ್ರವೇಶ ನಿರ್ಬಂಧಿಸುವ ಸರ್ಕಾರದ ನಿರ್ಧಾರ ಅರಣ್ಯ ಸಂಸ್ಕೃತಿ ನಾಶ ಮಾಡುವ ಹಾಗೂ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಷಡ್ಯಂತ್ರದಂತೆ ಕಾಣುತ್ತಿದೆ ಎಂದು ಜಿಲ್ಲೆಯ ಆದಿವಾಸಿಗಳು, ಬುಡಕಟ್ಟು ಸಮುದಾಯಗಳು ಹಾಗೂ ರೈತರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಶತಮಾನಗಳಿಂದಲೂ ಅರಣ್ಯದೊಂದಿಗೆ ಸಹ ಜೀವನ ಮಾಡಿಕೊಂಡು ಕುರಿ, ಮೇಕೆ, ದನಗಳ ಸಾಕಣೆ ಮೂಲಕ ಜೀವನ ನಿರ್ವಹಣೆ ಮಾಡುತ್ತಿರುವ ಸ್ಥಳೀಯ ಸಮುದಾಯಗಳ ಹಕ್ಕುಗಳನ್ನು ಕಸಿಯಬಾರದು. ಕಿಡಿಗೇಡಿಗಳು ಹುಲಿಗಳಿಗೆ ವಿಷವಿಕ್ಕಿದ ವಿಚಾರ ಮುಂದಿಟ್ಟುಕೊಂಡು ಕಾಡನ್ನೇ ನಂಬಿ ಬದುಕುತ್ತಿರುವವರಿಗೆ ತೊಂದರೆ ನೀಡಬಾರದು ಎಂದು ಕಾಡಂಚಿನ ನಿವಾಸಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ಉದ್ಯೋಗ ಸೃಷ್ಟಿಸಿ ಬುಡಕಟ್ಟು ಸಮುದಾಯಗಳ ಆರ್ಥಿಕ ಸ್ವಾವಲಂಬನೆ ಮಾಡಲು ಸಾಧ್ಯವಾಗದ ಸರ್ಕಾರ ಕಾಡಿನೊಳಗೆ ಜಾನುವಾರು ಮೇಯಿಸಲು ನಿರ್ಬಂಧ ಹೇರಲು ಹೊರಟಿರುವುದು ಅರಣ್ಯವಾಸಿಗಳ ಆರ್ಥಿಕತೆಯ ಮೇಲೆ ಗದಾಪ್ರಹಾರ ಮಾಡಿದಂತೆ. ಆದಿವಾಸಿಗಳನ್ನು ಕಾಡಿನಿಂದ ಹೊರದಬ್ಬುವ ಹುನ್ನಾರದ ಆರಂಭಿಕ ನಡೆಯೂ ಆಗಿರಬಹುದು ಎಂದು ಶಂಕಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಗಳು ಹೆಚ್ಚಾದ ಹೊತ್ತಿನಲ್ಲೇ ಕಾಡಿನೊಳಗೆ ಜಾನುವಾರುಗಳ ನಿರ್ಬಂಧಿಸುವ ಸರ್ಕಾರದ ನಿರ್ಧಾರ ಒಕ್ಕಲೆಬ್ಬಿಸುವಿಯ ತಂತ್ರದಂತೆ ಕಾಣುತ್ತಿದೆ ಎನ್ನುತ್ತಾರೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ.
ಆದಿವಾಸಿಗಳಿಗೆ ಸಂವಿಧಾನವೇ ಕಾನೂನು ಬದ್ಧ ಹಕ್ಕುಗಳನ್ನು ನೀಡಿದೆ. 2006ರ ಅರಣ್ಯ ಹಕ್ಕು ಕಾಯ್ದೆಯಡಿ ಅನಸೂಚಿತ ಬುಡಕಟ್ದು ಸಮುದಾಯಗಳು ಹಾಗೂ 75 ವರ್ಷ ಕಾಡಿನೊಳಗೆ ನೆಲೆಸಿರುವ ಇತರೆ ಪಾರಂಪರಿಕ ಅರಣ್ಯವಾಸಿಗಳಿಗೆ ಕಾಡಿನೊಳಗೆ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು, ಭೂಮಿಯ ಹಕ್ಕು ಹೊಂದಲು ಹಾಗೂ ಜಾನುವಾರುಗಳನ್ನು ಮೇಯಿಸುವ ಹಕ್ಕುಗಳನ್ನು ಕೊಡಮಾಡಲಾಗಿದೆ.
ಹೀಗಿರುವಾಗ ಅರಣ್ಯದೊಳಗೆ ಜಾನುವಾರುಗಳ ಪ್ರವೇಶ ನಿರ್ಬಂಧಿಸುವಂತಹ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಅರಣ್ಯ ಹಕ್ಕು ಕಾಯ್ದೆಯನ್ನು ಸರ್ಕಾರ ಹಾಗೂ ಅರಣ್ಯ ಸಚಿವರು ಮೊದಲು ಅರಿಯಬೇಕು ಎಂದು ಮುಖಂಡ ಮುತ್ತಯ್ಯ ಒತ್ತಾಯಿಸಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿ ವಲಯದ ಸುತ್ತಮುತ್ತಲಿರುವ 56 ಪೋಡುಗಳಲ್ಲಿ 8,000ಕ್ಕೂ ಹೆಚ್ಚು ಮಂದಿ ಬುಡಕಟ್ಟು ಜನರು ಇದ್ದಾರೆ. ಮಲೆ ಮಹದೇಶ್ವರನ ಆರಾಧಿಸುವ ಬೇಡಗಂಪಣ ಸಮುದಾಯದ 10,000ಕ್ಕೂ ಹೆಚ್ಚು ಮಂದಿ ಕಾಡಂಚಿನಲ್ಲಿ ಕುರಿ, ಮೇಕೆ, ದನಗಳ ಸಾಕಾಣೆಯಲ್ಲಿ ತೊಡಗಿದ್ದಾರೆ.
ಹೆಚ್ಚು ಲಾಭಕೊಡುವ ಹೈಬ್ರಿಡ್ ತಳಿಯ ಹಸುಗಳ ಬದಲಾಗಿ ಇಂದಿಗೂ ಬೇಡಗಂಪಣರು ಶುದ್ಧ ನಾಟಿ ತಳಿಯ ದೇಸಿ ದನಗಳ ಸಾಕಾಣೆ ಮಾಡುತ್ತಿದ್ದಾರೆ. ಸ್ವಂತ ಭೂಮಿ ಇಲ್ಲದೆ ಕಾಡಿನೊಳಗೆ ಕುರಿ, ಮೇಕೆ, ದನಗಳನ್ನು ಮೇಯಿಸುವುದು ಈ ಭಾಗದಲ್ಲಿ ರೂಢಿಯಲ್ಲಿದ್ದು, ಕಾನೂನುಗಳ ನೆಪವೊಡ್ಡಿ ಮೂಲ ಕಸುಬಿಗೆ ಅಡ್ಡಿಪಡಿಸುವುದು ಸರಿಯಲ್ಲ ಎನ್ನುತ್ತಾರೆ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ.
ಸರ್ಕಾರದ ನಿಲುವಿಗೆ ಜಿಲ್ಲೆಯ ರೈತ ಸಂಘಟನೆಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ. ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿವೆ.
ಅರಣ್ಯದೊಳಗೆ ಜಾನುವಾರು ಮೇಯಿಸಲು ಯಾವುದೇ ನಿರ್ಬಂಧ ಇಲ್ಲ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಬೇಕು, ಕಾಡಂಚಿನ ರೈತರ ಮೇಲೆ ದಬ್ಬಾಳಿಕೆ ನಿಲ್ಲಿಸಬೇಕು, ರೈತರು ಹಾಗೂ ಮುಖಂಡರನ್ನೊಳಗೊಂಡ ಅರಣ್ಯ ಅಭಿವೃದ್ಧಿ ಸಮಿತಿ ರಚಿಸಬೇಕು, ಕಾಡುಪ್ರಾಣಿಗಳ ದಾಳಿಯಿಂದ ರೈತರು ಮೃತಪಟ್ಟರೆ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಪ್ರಾಣಿಗಳು ಬೆಳೆ ಹಾನಿ ಮಾಡಿದರೆ ಬೆಳೆಯ ಸಂಪೂರ್ಣ ವೆಚ್ಚ ಭರಿಸಬೇಕು, ಅರಣ್ಯ ಒತ್ತುವರಿ ತೆರವುಗೊಳಿಸಿ ಅಕ್ರಮ ರೆಸಾರ್ಟ್, ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಳಂದೂರು ತಾಲ್ಲೂಕಿನ ಸುತ್ತಮುತ್ತ 12 ಹೆಚ್ಚು ಗ್ರಾಮಗಳು ಕಾಡಂಚಿನಲ್ಲಿ ಇದ್ದು ಸೋಲಿಗರು ಮತ್ತು ಸ್ಥಳೀಯರು ಕಾಡಿನ ಸುತ್ತಮುತ್ತ ಸಿಗುವ ಹಸಿರು ನಂಬಿ ಬದುಕುತ್ತಿದ್ದಾರೆ. ಹಾಡು ಕುರಿ ಹಸು ಸೇರಿದಂತೆ ಸಾಕುಪ್ರಾಣಿಗಳಿಗೆ ಬೇಕಾದ ಹುಲ್ಲು ಮತ್ತು ನೀರು ಸಿಗುವ ಕಾಡಿನೊಳಗೆ ಜಾನುವಾರು ಪ್ರವೇಶ ನಿರ್ಬಂಧಿಸಿದರೆ ರೈತರಿಗೆ ಸಮಸ್ಯೆಯಾಗಲಿದೆ.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ., ಬಸವರಾಜು ಬಿ., ನಾ.ಮಂಜುನಾಥಸ್ವಾಮಿ, ಮಲ್ಲೇಶ ಬಿ., ಮಹದೇವ್ ಹೆಗ್ಗವಾಡಿಪುರ, ಪ್ರದೀಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.