ADVERTISEMENT

ಸಿಎಂಗೆ ಅಧಿಕಾರದ ಮದ: ಆರ್‌. ಅಶೋಕ್ ಟೀಕೆ

ಚಾಮರಾಜನಗರದಲ್ಲಿ ರೈತರ ಮನವಿಪತ್ರಗಳು ಚೆಲ್ಲಾಪಿಲ್ಲಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 22:53 IST
Last Updated 13 ಜುಲೈ 2024, 22:53 IST
‘ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತ ಸಂಘಟನೆಗಳು ಸಲ್ಲಿಸಿದ ಅರ್ಜಿಗಳನ್ನು ಕಸದಬುಟ್ಟಿಗೆ ಬಿಸಾಡಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು, ಮುಖ್ಯಮಂತ್ರಿ ರೈತರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವೆ ಕೆ.ವೆಂಕಟೇಶ್ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು
‘ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತ ಸಂಘಟನೆಗಳು ಸಲ್ಲಿಸಿದ ಅರ್ಜಿಗಳನ್ನು ಕಸದಬುಟ್ಟಿಗೆ ಬಿಸಾಡಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು, ಮುಖ್ಯಮಂತ್ರಿ ರೈತರ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವೆ ಕೆ.ವೆಂಕಟೇಶ್ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು   

ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜುಲೈ 10ರಂದು ನಡೆದಿದ್ದ ಕಾಂಗ್ರೆಸ್‌ ಕೃತಜ್ಞತಾ ಸಮಾವೇಶದಲ್ಲಿ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದ ಮನವಿ ಪತ್ರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

‘ಹತ್ತಿದ ಏಣಿಯನ್ನೇ ಒದೆಯುವಷ್ಟು ಅಧಿಕಾರದ ಮದವೇರಿದೆಯೇ ಸಿಎಂ ಸಿದ್ದರಾಮಯ್ಯನವರೇ? ಅಧಿಕಾರದ ಮದವೇರಿದ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಬಳಸಿ ಬಿಸಾಡುವ ವಸ್ತುಗಳೇ ಹೊರತು ಜನರ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದಕ್ಕೆ ಚಾಮರಾಜನಗರದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಟೀಕಿಸಿದ್ದಾರೆ.

‘ಜನರು ಸಮಸ್ಯೆಗಳನ್ನು, ಕುಂದುಕೊರತೆಗಳನ್ನು ಬರೆದು ಅಹವಾಲು ನೀಡಿದರೆ ನಿಕೃಷ್ಟವಾಗಿ ಬೀದಿಪಾಲು ಮಾಡುತ್ತೀರಲ್ಲ, ಇದಕ್ಕೇನಾ ಜನ ನಿಮಗೆ ಅಧಿಕಾರ ಕೊಟ್ಟಿರುವುದು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಮುಖ್ಯಮಂತ್ರಿ ಕುರ್ಚಿ ಜನಸೇವೆ ಮಾಡಲಿ ಎಂದು ಮತದಾರರು ನೀಡಿರುವ ಭಿಕ್ಷೆಯೇ ಹೊರತು, ತಾವು ಯಾವ ಸೀಮೆ ಸುಲ್ತಾನರೂ ಅಲ್ಲ, ನವಾಬರೂ ಅಲ್ಲ. ನಿಮ್ಮ ಅಹಂಕಾರವೇ ನಿಮ್ಮನ್ನು ರಾಜಕೀಯ ಅಧಃಪತನಕ್ಕಿಳಿಸುವುದು ಶತಸಿದ್ಧ’ ಎಂದು ಬರೆದುಕೊಂಡಿದ್ದಾರೆ.

ಘಟನೆಯನ್ನು ಖಂಡಿಸಿ ನಗರದಲ್ಲಿ ಶನಿವಾರ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ರೈತ ಸಂಘದ ಮುಖಂಡ ಡಾ.ಗುರುಪ್ರಸಾದ್, ‌‘ಸ್ವತಃ ಕೈಬರಹದಲ್ಲಿ ರೈತ ಸಂಘಟನೆಗಳು ನೀಡಿರುವ ಮನವಿಯ ಪ್ರತಿಗಳು ಸಮಾವೇಶ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ರೈತ ಸಮುದಾಯಕ್ಕೆ ಆಘಾತವಾಗಿದೆ. ಹಸಿರು ಶಾಲು ಹಾಗೂ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರಿಗೆ ಸರ್ಕಾರ ಅಗೌರವ ತೋರಿದೆ’ ಎಂದು ಗುರುಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿಗಳು ಅಥವಾ ಅಧಿಕಾರಿಗಳು ರೈತರು ಸಲ್ಲಿಸಿದ ಮನವಿ ಪ್ರತಿಗಳನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಇಲ್ಲವಾದರೆ, ಸಿಎಂ ಸಾರ್ವಜನಿಕವಾಗಿ ರೈತರ ಕ್ಷಮೆಯಾಚಿಸಲಿ, ಹಕ್ಕೊತ್ತಾಯ ಮನವಿಗಳನ್ನು ಸಂಬಂಧಪಟ್ಟ ಇಲಾಖೆಗೆ ತಲುಪಿಸದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಿ’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬ ಭರವಸೆಯೊಂದಿಗೆ ರೈತ ಸಂಘಟನೆಗಳು ದೂರದ ಊರುಗಳಿಂದ ಕೃತಜ್ಞತಾ ಸಮಾವೇಶಕ್ಕೆ ಬಂದು ಮನವಿ ಸಲ್ಲಿಸಿದ್ದವು. ದಶಕಗಳಿಂದ ರೈತ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿಯಲ್ಲಿ ಹಕ್ಕೊತ್ತಾಯ ಮಂಡಿಸಲಾಗಿತ್ತು. ಆದರೆ, ಮನವಿಗಳನ್ನು ಕಸದಬುಟ್ಟಿಗೆ ಬಿಸಾಡಿಹೋಗಲಾಗಿದೆ’ ಎಂದು ಆಕ್ರೋಶ ಹೊರಹಾಕಿದರು.

‘ಪ್ರತಿನಿತ್ಯ ರೈತರು, ಬಡವರು, ದಲಿತರು, ಸಾರ್ವಜನಿಕರು ಮುಖ್ಯಮಂತ್ರಿಯ ಬಳಿ ದುಃಖ ದುಮ್ಮಾನ ಹೇಳಿಕೊಂಡು ಅಹವಾಲು ಸಲ್ಲಿಸುತ್ತಾರೆ. ಮನವಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ತೆರಳುತ್ತಾರೆ. ಆದರೆ, ಸರ್ಕಾರ ಜನರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಖಂಡನೀಯ’ ಎಂದರು.

‘ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತ ಸಂಘಟನೆಗಳು ಸಲ್ಲಿಸಿದ ಅರ್ಜಿಗಳನ್ನು ಕಸದಬುಟ್ಟಿಗೆ ಬಿಸಾಡಿರುವ ಅಧಿಕಾರಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಚಾಮರಾಜನಗರದಲ್ಲಿ ಶನಿವಾರ ಎಸ್‌ಪಿ ಡಾ.ಬಿ.ಟಿ.ಕವಿತಾ ಅವರಿಗೆ ರೈತರು ಮನವಿ ಸಲ್ಲಿಸಿದರು
ಕಾಂಗ್ರೆಸ್‌ ಸಮಾವೇಶ ಖಾಸಗಿಯಾದ್ದರಿಂದ ಅಧಿಕಾರಿಗಳು ವೇದಿಕೆಯಲ್ಲಿರಲಿಲ್ಲ. ಸ್ಥಳದಲ್ಲಿ ಸಂಗ್ರಹಿಸಿದ ಅರ್ಜಿಗಳನ್ನು ಮುಖ್ಯಮಂತ್ರಿ ಕಚೇರಿಗೆ ಕಳಿಸಲಾಗುವುದು.
–ಗೀತಾ ಹುಡೇದ ಹೆಚ್ಚುವರಿ ಜಿಲ್ಲಾಧಿಕಾರಿ
ರೈತರ ಅರ್ಜಿಗಳು ಚೆಲ್ಲಾಪಿಲ್ಲಿಯಾಗಿರುವ ಬಗ್ಗೆ ಪರಿಶೀಲಿಸಲಾಗುವುದು. ಅಧಿಕಾರಿಗಳು ಅರ್ಜಿಗಳನ್ನು ತಮ್ಮೊಂದಿಗೆ ಕೊಂಡೊಯ್ದರೆ ಅಥವಾ ಇಲ್ಲವೇ ಎಂಬ ಮಾಹಿತಿ ಸಂಗ್ರಹಿಸಲಾಗುವುದು
–ಡಾ.ಬಿ.ಟಿ.ಕವಿತಾ ಎಸ್‌ಪಿ

ಜನತಾದರ್ಶನದ ಅರ್ಜಿಗಳ ಸ್ಥಿತಿ ಏನು ?

‘ರೈತ ಸಂಘಟನೆಗಳು ಸಲ್ಲಿಸಿದ ಮನವಿಗಳ ಸ್ಥಿತಿಯೇ ಹೀಗಾದರೆ ಮುಖ್ಯಮಂತ್ರಿ ಜನತಾದರ್ಶನ ಸಚಿವರು ಶಾಸಕರು ಅಧಿಕಾರಿಗಳು ನಡೆಸುವ ಜನಸ್ಪಂದನ ಕಾರ್ಯಕ್ರಮಗಳಲ್ಲಿ ಸಲ್ಲಿಕೆಯಾಗುವ ಲಕ್ಷಾಂತರ ಅರ್ಜಿಗಳ ಪರಿಸ್ಥಿತಿ ಏನು ಎಂಬ ಅನುಮಾನ ಕಾಡುತ್ತಿದೆ. ಚಾಮರಾಜನಗರದಲ್ಲಿ ನಡೆದ ಸಮಾವೇಶದ ವಿಡಿಯೋ ಪರಿಶೀಲಿಸಿ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ರಾಜ್ಯ ರೈತ ಸಂಘದ ಮುಖಂಡ ಗುರುಪ್ರಸಾದ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.