ADVERTISEMENT

ಕಬ್ಬಿಗೆ ಏಕರೂಪ ದರ, ಖರೀದಿ ಕೇಂದ್ರ ತೆರೆಯಲು ಆಗ್ರಹ

ಸಾಮೂಹಿಕ ನಾಯಕತ್ವದ ರೈತ ಸಂಘದಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:51 IST
Last Updated 25 ನವೆಂಬರ್ 2025, 2:51 IST
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿಯಲ್ಲಿ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿದರು
ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಧರಣಿಯಲ್ಲಿ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿದರು   

ಚಾಮರಾಜನಗರ: ಕಬ್ಬಿಗೆ ಏಕರೂಪ ದರ ನಿಗದಿಗೊಳಿಸಬೇಕು, ಮೆಕ್ಕೆಜೋಳ ಕ್ವಿಂಟಲ್‌ಗೆ ₹ 3,000 ದರ ನಿಗದಿಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಸಾಮೂಹಿಕ ನಾಯಕತ್ವದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆಹೋರಾತ್ರಿ ಧರಣಿ ಆರಂಭಿಸಲಾಯಿತು.

ಧರಣಿಗೂ ಮುನ್ನ ಹನೂರು, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ, ಗುಂಡ್ಲುಪೇಟೆ, ಹರದನಹಳ್ಳಿ, ಪಣ್ಯದಹುಂಡಿ ಸೇರಿದಂತೆ ಜಿಲ್ಲೆಯ ನಾಲ್ಕು ಮೂಲೆಗಳಿಂದ ನೂರಾರು ಸಂಖ್ಯೆಯ ರೈತರು ಬೈಕ್‌ ರ‍್ಯಾಲಿ ಮೂಲಕ ನಗರದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದರು. ಬಳಿಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟನೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಘೋಷಣೆ ಕೂಗಿದರು.

ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ‘ಅಮೆರಿಕಾದಿಂದ ಶೂನ್ಯ ಸುಂಕದಡಿ ಜೋಳ ಹಾಗೂ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರ ರೈತ ವಿರೋಧಿಯಾಗಿದೆ. ಭವಿಷ್ಯದಲ್ಲಿ ರೈತರು ಹಾಗೂ ಹೈನುಗಾರರು ಬೀದಿಗೆ ಬರಲಿದ್ದು ತಕ್ಷಣ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದರು.

ADVERTISEMENT

‘ಮೆಕ್ಕೆಜೋಳ ಕ್ವಿಂಟಲ್‌ಗೆ ₹ 2,600 ಬೆಂಬಲ ಬೆಲೆಯ ಜೊತೆಗೆ ₹ 600 ಪ್ರೋತ್ಸಾಹ ಧನ ನೀಡಿ 3,000ಕ್ಕೆ ಖರೀದಿ ಮಾಡಬೇಕು. ಭತ್ತ, ಮೆಕ್ಕೆಜೋಳ ಹಾಗೂ ಸಿರಿಧಾನ್ಯಗಳ ಖರೀದಿ ಕೇಂದ್ರ ತೆರೆಯಬೇಕು. ಕಬ್ಬಿಗೆ ರಾಜ್ಯದಾದ್ಯಂತ ಏಕರೂಪದ ದರ ನಿಗದಿಪಡಿಸಬೇಕು, ಕಾರ್ಖಾನೆ ಮಾಲೀಕರು ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನು ರೈತರಿಗೆ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಕಾಡುಪ್ರಾಣಿಗಳ ದಾಳಿಯಿಂದ ಜಾನುವಾರುಗಳ ಮೃತಪಟ್ಟರೆ ಕನಿಷ್ಠ ಪರಿಹಾರ ನೀಡಲಾಗುತ್ತಿದೆ. ಹೈನುಗಾರರು ಒಂದು ಹಸು ಖರೀದಿಗೆ ₹80 ರಿಂದ ₹1 ಲಕ್ಷ ವ್ಯಯ ಮಾಡುತ್ತಾರೆ. ಆದರೆ, ಪ್ರಾಣಿಗಳ ದಾಳಿಯಿಂದ ಹಸು ಸತ್ತರೆ ಅರಣ್ಯ ಇಲಾಖೆ ಕೇವಲ ₹30,000 ಪರಿಹಾರ ನಿಗದಿಮಾಡಿರುವುದು ಅವೈಜ್ಞಾನಿಕ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಪಿಎಂಸಿಯಲ್ಲಿ ರೈತರಿಂದ ನಿಯಮ ಬಾಹಿರವಾಗಿ ಶೇ 10ರಷ್ಟು ಕಮಿಷನ್ ಪಡೆಯಲಾಗುತ್ತಿದ್ದು, ತಕ್ಷಣ ನಿಲ್ಲಿಸಬೇಕು. ಅಟ್ಟುಗೂಳಿಪುರ ಟೋಲ್‌ನಲ್ಲಿ ಸ್ಥಳೀಯ ರೈತರು ಬೆಳೆದ ಆಹಾರ ಧಾನ್ಯಗಳನ್ನು ಸಾಗಿಸಲು ಅನುಕೂಲವಾಗುವಂತೆ ಟೋಲ್‌ ವಿನಾಯಿತಿ ನೀಡಬೇಕು. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗಳಲ್ಲಿ ರೈತರ ವಾಹನಗಳಿಂದ ತೆರಿಗೆ ವಸೂಲಿ ಮಾಡಬಾರದು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಾಡ್ರಳ್ಳಿ ಪಾಪಣ್ಣ, ಚಂಗಡಿ ಕರಿಯಪ್ಪ, ಬರಗಿ ಮಹೇಶ್‌, ಬೇರಂಬಾಡಿ ಶಶಿ, ಪ್ರಸಾದ್‌, ಹನೂರು ಮಾದಪ್ಪ, ಶಾಂತಕುಮಾರ್, ಕುರಟ್ಟಿ ಹೊಸೂರು ಪುಟ್ಟಸ್ವಾಮಿ, ಸಿದ್ದಪ್ಪ, ಶಿವಪ್ಪ, ರಾಣಿ, ಹೊನ್ನೇಗೌಡನಹಳ್ಳಿ ರಾಜು ಸೇರಿದಂತೆ ಹಲವರು ಇದ್ದರು.

‘ಸಫಾರಿ ಪುನರಾರಂಭಿಸಿದರೆ ಬೀದಿಗಿಳಿದು ಹೋರಾಟ’

‘ಬಂಡೀಪುರದಲ್ಲಿ ಸಫಾರಿ ಪುನರಾರಂಭಿಸುವಂತೆ ರೆಸಾರ್ಟ್‌ ಹಾಗೂ ಹೋಟೆಲ್ ಮಾಲೀಕರ ಒತ್ತಡಕ್ಕೆ ಮಣಿಯಬಾರದು. ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಸಫಾರಿ ಆರಂಭಿಸಿದರೆ ರೈತರು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಹೊನ್ನೂರು ಪ್ರಕಾಶ್ ಎಚ್ಚರಿಕೆ ನೀಡಿದರು. ‘ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ. ಕಾಡುಪ್ರಾಣಿಗಳ ದಾಳಿಯಿಂದ ಬೆಳೆ ನಾಶವಾಗುತ್ತಿದ್ದು ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಬೆಳೆ ನಾಶವಾದರೆ ಮಾರುಕಟ್ಟೆ ದರ ಆಧರಿಸಿ ಪರಿಹಾರ ನಿಗದಿಪಡಿಸಬೇಕು ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡದಂತೆ ಕ್ರಮ ಕೈಗೊಳ್ಳಬೇಕು’ ಎಂದರು.