ADVERTISEMENT

ಕಾಡು ಪ್ರಾಣಿಗಳ ಕಳ್ಳಬೇಟೆ: ನಾಲ್ವರು ಆರೋಪಿಗಳ ಬಂಧನ

ಅರಣ್ಯ ಇಲಾಖೆ ಕಾರ್ಯಾಚರಣೆ; ಹುಲಿ ಉಗುರು, ಮೂಳೆ, ಚಿರತೆ ಉಗುರು, ವಿವಿಧ ಪ್ರಾಣಿಗಳ ಚರ್ಮ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 12:56 IST
Last Updated 21 ಆಗಸ್ಟ್ 2020, 12:56 IST
ಬಂಧಿತ ಆರೋಪಿಗಳು ಹಾಗೂ ಅವರಿಂದ ವಶಪಡಿಸಿಕೊಂಡಿರುವ ಪ್ರಾಣಿಗಳ ಅಂಗಾಂಗಗಳೊಂದಿಗೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ
ಬಂಧಿತ ಆರೋಪಿಗಳು ಹಾಗೂ ಅವರಿಂದ ವಶಪಡಿಸಿಕೊಂಡಿರುವ ಪ್ರಾಣಿಗಳ ಅಂಗಾಂಗಗಳೊಂದಿಗೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ   
""
""

ಕೊಳ್ಳೇಗಾಲ: ಮಲೆ ಮಹದೇಶ್ವರ ವನ್ಯಧಾಮ ಮತ್ತು ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿ ಸೇರಿದಂತೆ ಇತರ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅವುಗಳ ಮೂಳೆ, ಉಗುರು, ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಯುವಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಹನೂರು ತಾಲ್ಲೂಕಿನ ನೆಲ್ಲಿಕತ್ರಿ ಗ್ರಾಮದ ಮಹಾದೇವ (28), ಕುಮಾರ್ (20) ಹಾಗೂ ಗೊಂಬೆಗಲ್ಲು ಗ್ರಾಮದ ಮಹದೇವ (22), ರಂಗಸ್ವಾಮಿ (23) ಎಂಬುವವರನ್ನು ಬಂಧಿಸಲಾಗಿದೆ. ಇನ್ನೂ ಮೂರು ಮಂದಿ ಆರೋಪಿಗಳಿದ್ದು, ತಲೆಮರೆಸಿಕೊಂಡಿದ್ದಾರೆ.

ಅವರ ಬಳಿಯಿಂದ ಹುಲಿಯ ನಾಲ್ಕು ಉಗುರುಗಳು, ಒಂದು ಹುಲಿಯ ಮೂಳೆಗಳು, ಚಿರತೆಯ ಎರಡು ಉಗುರುಗಳು, ಎರಡು ಜಿಂಕೆಗಳ ಚರ್ಮ, ಎರಡು ಕಾಡುಕುರಿಯ ಚರ್ಮ, ಎರಡು ಹಾರುವ ಅಳಲಿನ ಚರ್ಮ, ಸೀಳುನಾಯಿಯ ಚರ್ಮ ಮತ್ತು ಮೂಳೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿರುವ ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ADVERTISEMENT

ನಲ್ಲಿಕತ್ರಿ ಹಾಗೂ ಗೊಂಬೆಗಲ್ಲು ಗ್ರಾಮ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಬಂಧಿತ ನಾಲ್ವರು ಕೂಡ ಸೋಲಿಗ ಸಮುದಾಯದವರು.

ಇತ್ತೀಚಿನ ವರ್ಷಗಳಲ್ಲಿ ಚಾಮರಾಜನಗರ ಜಿಲ್ಲೆಯ ಅರಣ್ಯ ಭಾಗದಲ್ಲಿ ವರದಿಯಾದ ಅತ್ಯಂತ ದೊಡ್ಡ ಕಳ್ಳಬೇಟೆ ಪ್ರಕರಣ ಇದು.

2012ರಲ್ಲಿ ಕೌದಳ್ಳಿ ವಲಯದಲ್ಲಿ ಮೃತಪಟ್ಟಿದ್ದ ಆನೆಯೊಂದರ ಎರಡು ದಂತಗಳನ್ನು ಮನೆಯಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು. 2016ರಲ್ಲಿ ಮಲೆ ಮಹದೇಶ್ವರ ಬೆಟ್ಟ ವಲಯದಲ್ಲಿ ಚಿರತೆಯನ್ನು ಉರುಳು ಹಾಕಿ ಬೇಟೆಯಾಡಿದ್ದ ಆರೋಪಿಯೊಬ್ಬ ಅದರ ಚರ್ಮವನ್ನು ಮನೆಯಲ್ಲಿ ಸಂಗ್ರಹಿಸಿಕೊಂಡಿದ್ದ.

‘ಒಂದೆರಡು ವರ್ಷಗಳಿಂದ ಇವರು ಪ್ರಾಣಿಗಳನ್ನು ಬೇಟೆಯಾಗಿ ಅವುಗಳ ಮೂಳೆ, ಉಗುರು ಚರ್ಮಗಳನ್ನು ಸಂಗ್ರಹಿಸಿದ್ದರು. ಈಗ ಮಾರಾಟ ಮಾಡುವುದಕ್ಕೆ ಯತ್ನಿಸುವಾಗ ಸಿಕ್ಕಿ ಬಿದ್ದಿದ್ದಾರೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಲೆಮಹದೇಶ್ವರ ವನ್ಯಧಾಮ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಧಾಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ಕೊಳ್ಳೇಗಾಲದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಏಡುಕುಂಡಲು ಅವರು, ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.

ವನ್ಯಜೀವಿಗಳ ಅಂಗಾಂಗಗಳು

ಮಾರಾಟಕ್ಕೆ ಯತ್ನ: ‘ಕೆಲವರು ಪ್ರಾಣಿಗಳ ಅಂಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಮೂರು ಅರಣ್ಯ ವಿಭಾಗದ ಸಿಬ್ಬಂದಿಯನ್ನು ಬಳಸಿಕೊಂಡು 15 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದೆವು. ಗುರುವಾರ ಮಧ್ಯರಾತ್ರಿ ಗುಂಡಾಲ್‌ ಜಲಾಶಯದ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಅವರು ಹೇಳಿದರು.

‘ಆರೋಪಿಗಳು ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವನ್ಯಜೀವಿ ವಲಯ, ಬಿಆರ್‌ಟಿಯ ಬೈಲೂರು, ಬಿಆರ್‌ಟಿ ವನ್ಯಜೀವಿ ವಲಯಗಳಲ್ಲಿ ಉರುಳು/ಬಲೆ ಹಾಕಿ ಪ್ರಾಣಿಗಳನ್ನು ಬೇಟೆಯಾಗಿ ಅವುಗಳ ಚರ್ಮ, ಉಗುರು, ಮೂಳೆಗಳು ಸೇರಿದಂತೆ ವಿವಿಧ ಅಂಗಗಳನ್ನು ಅವರ ಜಮೀನುಗಳಲ್ಲಿ ಬಚ್ಚಿಟ್ಟಿದ್ದರು. ಈಗ ಅವುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು. ಕೆಲವು ದಿನಗಳಿಂದ ಖರೀದಿದಾರರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸ್ಥಳೀಯರು ನೀಡಿದ ಹಾಗೂ ಗುಪ್ತಚರ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು.

‘ಈ ಬೇಟೆಗಾರರು ಪ್ರಾಣಿಗಳನ್ನು ಕೊಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಭಾಗದಲ್ಲಿ ವನ್ಯಪ‍್ರಾಣಿಗಳನ್ನು ಬೇಟೆಯಾಡುವ ದೊಡ್ಡ ತಂಡವೊಂದು ಸಕ್ರಿಯವಾಗಿದೆ ಎಂಬ ಮಾಹಿತಿಯೂ ಲಭಿಸಿದೆ. ಈ ನಾಲ್ವರೊಂದಿಗೆ ಇನ್ನೂ ಮೂವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಅವರನ್ನೂ ಶೀಘ್ರದಲ್ಲಿ ಬಂದಿಸುತ್ತೇವೆ. ಪ್ರಾಣಿಗಳ ಅಂಗಗಳನ್ನು ಎಲ್ಲಿಗೆ ಪೂರೈಸುತ್ತಿದ್ದರು ಅಥವಾ ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ’ ಎಂದು ಏಡುಕುಂಡಲು ಅವರು ಹೇಳಿದರು.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಕಾವೇರಿ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು, ಪಿ.ಜಿ.ಪಾಳ್ಯ ವನ್ಯಜೀವಿ ವಲಯ ಅರಣ್ಯಾಧಿಕಾರಿ ಸೈಯದ್‍ ಸಾಬ್ ನದಾಫ್, ಬೈಲೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಶಿವರಾಮ್, ಪಾಲಾರ್ ಅರಣ್ಯ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಕೌದಳ್ಳಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಕೊತ್ತನೂರು ವನ್ಯಜೀವಿ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದಾರೆ.

ಜಿಂಕೆಗಳ ಚರ್ಮ

ಹುಲಿ ಚರ್ಮಕ್ಕಾಗಿ ಹುಡುಕಾಟ

ಬಂಧಿತರು ಹುಲಿಯ ಮೂಳೆ ಹಾಗೂ ನಾಲ್ಕು ಉಗುರುಗಳನ್ನು ಬಚ್ಚಿಟ್ಟಿದ್ದ ಮಾಹಿತಿಯನ್ನು ನೀಡಿದ್ದಾರೆ. ಆದರೆ, ಅದರ ಚರ್ಮ ಹಾಗೂ ಹಲ್ಲುಗಳು ಪತ್ತೆಯಾಗಿಲ್ಲ.

‘ಹುಲಿಯನ್ನು ಕೂಡ ಇವರೇ ಬೇಟೆಯಾಡಿದ್ದಾರೆ. ನಾಲ್ಕು ಉಗುರು ಹಾಗೂ ದೇಹದ ಎಲ್ಲ ಮೂಳೆಗಳನ್ನು ವಶಪಡಿಸಿಕೊಂಡಿದ್ದೇವೆ.ಚರ್ಮ ಹಾಗೂ ಹಲ್ಲುಗಳು ನಾಪತ್ತೆಯಾಗಿದೆ. ಈ ಬಗ್ಗೆ ಬಂಧಿತರಿಂದ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ವೃತ್ತಿಪರ ಬೇಟೆಗಾರರು?

ಬಂಧಿತ ಆರೋಪಿಗಳು ವೃತ್ತಿಪರ ಬೇಟೆಗಾರರು ಆಗಿರುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಹಿಂದೆ, ಇವರ ವಿರುದ್ಧ ಪ್ರಕರಣಗಳು ದಾಖಲಾಗಿವೆಯೇ ಎಂಬ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ವನ್ಯಜೀವಿಗಳ ಅಂಗಾಂಗಗಳ ಖರೀದಿದಾರರೊಂದಿಗೆ ಇವರು ನೇರ ಸಂಪರ್ಕ ಹೊಂದಿರುವ ಸಾಧ್ಯತೆಯನ್ನೂ ಅವರು ತಳ್ಳಿ ಹಾಕಿಲ್ಲ.

ಟಿವಿ ಬಾಕ್ಸ್‌ಗಳಲ್ಲಿ ಚರ್ಮ, ಉಗುರು, ಮೂಳೆಗಳನ್ನು ಇರಿಸಿ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಗುಪ್ತಚರ ಇಲಾಖೆ ನೀಡಿರುವ ನಿಖರ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.