ADVERTISEMENT

ಒಡೆಯರಪಾಳ್ಯ: 10 ದಿನದಲ್ಲಿ 42 ‌ಮಂದಿಗೆ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 16:24 IST
Last Updated 3 ಆಗಸ್ಟ್ 2021, 16:24 IST
ಹನೂರು ತಾಲ್ಲೂಕಿನ ಒಡೆಯರಪಾಳ್ಯ ಬಳಿಯ ಟಿಬೆಟನ್ನರ ನಿರಾಶ್ರಿತ ಶಿಬಿರದಲ್ಲಿರುವ ದಾಂಡೇಲಿಂಗ್ ಆಸ್ಪತ್ರೆ
ಹನೂರು ತಾಲ್ಲೂಕಿನ ಒಡೆಯರಪಾಳ್ಯ ಬಳಿಯ ಟಿಬೆಟನ್ನರ ನಿರಾಶ್ರಿತ ಶಿಬಿರದಲ್ಲಿರುವ ದಾಂಡೇಲಿಂಗ್ ಆಸ್ಪತ್ರೆ   

ಹನೂರು: ತಾಲ್ಲೂಕಿನ ಒಡೆಯರಪಾಳ್ಯ ಗ್ರಾಮದ ಬಳಿಯಿರುವ ಟಿಬೆಟನ್ನರ ನಿರಾಶ್ರಿತರ ಶಿಬಿರದಲ್ಲಿ 10 ದಿನಗಳ ಅವಧಿಯಲ್ಲಿ 42 ಮಂ‌ದಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್‌ ಕಾಣಿಸಿಕೊಂಡು, ನಂತರ ಶಿಬಿರದಲ್ಲಿ ಸೋಂಕು ಶೂನ್ಯಕ್ಕೆ ತಲುಪಿತ್ತು. ಜುಲೈ 23ರಿಂದ ಮತ್ತೆ ಪ್ರಕರಣಗಳು ವರದಿಯಾಗುತ್ತಿದ್ದು, ದಿನಕಳೆದಂತೆ ಹೆಚ್ಚಾಗುತ್ತಿದೆ. ಸೋಮವಾರದವರೆಗೆ 37 ಪ್ರಕರಣಗಳಿದ್ದವು. ಮಂಗಳ ಮತ್ತೆ ಐವರಿಗೆ ಸೋಂಕು ದೃಢಪಟ್ಟಿದೆ. ಈಗ ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿದೆ.

ಮೊದಲನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದ ಇಲ್ಲಿನ ಆಡಳಿತ ಮಂಡಳಿ, ಎರಡನೆ ಅಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾದರೂ ಅದನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡಿತ್ತು. ನಿರಾಶ್ರಿತರ ಶಿಬಿರದ ಆಡಳಿತ ನಿಯಂತ್ರಣಕ್ಕೆ ಅನುಸರಿಸಿದ್ದ ವಿಧಾನ ಎಲ್ಲರ ಮೆಚ್ಚಗೆಗೆ ಪಾತ್ರವಾಗಿತ್ತು.

ADVERTISEMENT

ಮೂರು ಕಡೆ ಕ್ವಾರಂಟೈನ್‌ ಕೇಂದ್ರಗಳನ್ನು ತೆರೆಯಲಾಗಿತ್ತು. ಹೊರಗಿನಿಂದ ಬರುವ ಪ್ರತಿಯೊಬ್ಬರಿಗೂ ಕೋವಿಡ್‌ ಪರೀಕ್ಷಾ ನೆಗಟಿವ್‌ ವರದಿ ಕಡ್ಡಾಯ ಮಾಡಲಾಗಿತ್ತು. ಅಲ್ಲದೇ ಅವರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗಿತ್ತು.

ಕಾಲೊನಿಯಲ್ಲಿ ಈಗ ಮತ್ತೆ ಸೋಂಕು ಕಾಣಿಸಿಕೊಂಡು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸುತ್ತಮುತ್ತಲಿನ ಗ್ರಾಮಸ್ಥರಲ್ಲೂ ಆತಂಕ ಮೂಡಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್‌ ಅವರು, ‘ಟಿಬೆಟನ್ನರಕಾಲೊನಿಯಲ್ಲಿ 10 ದಿನಗಳಿಂದೀಚೆಗೆ ಸೋಂಕಿನ ಪ್ರಕರಣ ಕಾಣಿಸಿಕೊಳ್ಳುತ್ತಿವೆ. ದಿನವೂ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಕಾಲೊನಿಯನ್ನು ಲಾಕ್‌ಡೌನ್ ಮಾಡಲು ಸೂಚಿಸಲಾಗಿದೆ. ಜೊತೆಗೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಲ್ಲಿನ ಆಸ್ಪತ್ರೆಯ ಆಡಳಿತ ಮಂಡಳಿಗೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.