ADVERTISEMENT

ಚಾಮರಾಜನಗರ: ಜಿಲ್ಲಾಧಿಕಾರಿ ಸೇರಿ 177 ಮಂದಿಗೆ ಲಸಿಕೆ

ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ವಿತರಣೆ ಆರಂಭ, ಮೊದಲ ದಿನ ಕಾಣದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 17:29 IST
Last Updated 8 ಫೆಬ್ರುವರಿ 2021, 17:29 IST
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡರು
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಸೋಮವಾರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಂಡರು   

ಚಾಮರಾಜನಗರ: ಜಿಲ್ಲೆಯಲ್ಲಿ ಎರಡನೇ ಹಂತದ ಕೋವಿಡ್‌ ಲಸಿಕೆ ವಿತರಣೆ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಗಿದೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರಿಗೆ (ಫ್ರಂಟ್‌ಲೈನ್‌ ವರ್ಕರ್ಸ್‌) ಕೋವಿಶೀಲ್ಡ್‌ ಲಸಿಕೆ ನೀಡಲಾಗುತ್ತಿದ್ದು, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮೊದಲಿಗರಾಗಿ ಲಸಿಕೆ ಹಾಕಿಸಿಕೊಂಡರು.

ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ (ಆರ್‌ಡಿಪಿಆರ್‌), ಪೊಲೀಸರು ಹಾಗೂ ನಗರಾಭಿವೃದ್ಧಿ ಇಲಾಖೆ (ನಗರ ಸ್ಥಳೀಯ ಸಂಸ್ಥೆಗಳು) ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸಲಾಗಿದೆ.

ADVERTISEMENT

ಕಾಣದ ಉತ್ಸಾಹ: ಲಸಿಕೆ ಪಡೆಯಲು ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ಉತ್ಸಾಹ ಕಂಡು ಬರಲಿಲ್ಲ. ಮೊದಲ ದಿನ ಕೇವಲ ಶೇ 5ರಷ್ಟು ಪ್ರಗತಿಯಾಗಿದೆ.

ನಗರದ ಜಿಲ್ಲಾ ಆಸ್ಪತ್ರೆ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಪಟ್ಟಣದ ಸರ್ಕಾರಿ ಆಸ್ಪತ್ರೆ, ಬೇಗೂರು, ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರ, ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ 3,802 ಮಂದಿಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸಲಾಗಿದ್ದು, ಮೊದಲ ದಿನ ಕೇವಲ 177 ಮಂದಿ ಮಾತ್ರ ಲಸಿಕೆ ಹಾಕಿಕೊಂಡಿದ್ದಾರೆ. ಇನ್ನೂ ಎರಡು ದಿನ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಂದಾಯ ಇಲಾಖೆಯಲ್ಲಿ 581, ಆರ್‌ಡಿಪಿಆರ್‌ ಇಲಾಖೆಯಲ್ಲಿ 1.649, ಪೊಲೀಸ್ ಮತ್ತು ಗೃಹರಕ್ಷಕ ಇಲಾಖೆಯಲ್ಲಿ 1461, ನಗರಾಭಿವೃದ್ದಿ ಇಲಾಖೆಯಲ್ಲಿ 111 ಅಧಿಕಾರಿ, ಸಿಬ್ಬಂದಿ ಲಸಿಕೆಗಾಗಿ ಹೆಸರು ನೋಂದಾಯಿಸಿದ್ದಾರೆ.

ಈ ಪೈಕಿ ಪೊಲೀಸ್‌ ಇಲಾಖೆಯ 73, ಆರ್‌ಡಿಪಿಆರ್‌ನ 48, ಕಂದಾಯ ಇಲಾಖೆಯ 36 ಹಾಗೂ ನಗರಾಭಿವೃದ್ಧಿ ಇಲಾಖೆಯ 20 ಮಂದಿ ಸೋಮವಾರ ಲಸಿಕೆ ಹಾಕಿಸಿಕೊಂಡಿದ್ದಾರೆ.

ಜೀವದ ಬೆಲೆ ಗೊತ್ತಿದ್ದವರು ಲಸಿಕೆ ಹಾಕಿಸಿಕೊಳ್ಳಬೇಕು: ಡಿ.ಸಿ
ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಸೋಮವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡರು. ಇದಕ್ಕೂ ಮೊದಲು ಅವರ ರಕ್ತದೊತ್ತಡವನ್ನು ತಪಾಸಣೆ ಮಾಡಲಾಯಿತು. ಲಸಿಕೆ ಪಡೆದ ನಂತರ ಕಚೇರಿ ಕೆಲಸಗಳಲ್ಲಿ ತೊಡಗಿಕೊಂಡರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಲಸಿಕೆ ಪಡೆದ ನಂತರವೂ ನಾನೂ ಚೆನ್ನಾಗಿದ್ದೇನೆ. ಕಚೇರಿಗೆ ಬಂದು, ಕೋರ್ಟ್‌ ಕಲಾಪ ನಡೆಸಿದ್ದೇನೆ. ಏನೂ ಆಗಿಲ್ಲ. ಲಸಿಕೆ ಬಗ್ಗೆ ಯಾರೂ ಭಯ, ಆತಂಕ ಪಡಬೇಕಾಗಿಲ್ಲ’ ಎಂದು ಹೇಳಿದರು.

‘ಜೀವ ಅಮೂಲ್ಯವಾದುದು. ಜೀವದ ಮೇಲೆ ಆಸೆ ಮತ್ತು ಜೀವದ ಬೆಲೆ ಗೊತ್ತಿರುವವರೆಲ್ಲರೂ ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರೆಲ್ಲರೂ ಲಸಿಕೆಯನ್ನು ತೆಗೆದುಕೊಳ್ಳಲೇ ಬೇಕು. ಸರ್ಕಾರ ಈಗ ಉಚಿತವಾಗಿ ಲಸಿಕೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ದುಡ್ಡು ಕೊಟ್ಟು ಹಾಕಿಸಿಕೊಳ್ಳಬೇಕಾಗಬಹುದು. ಹಾಗಾಗಿ, ಮುನ್ನೆಚ್ಚರಿಕೆಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.