ADVERTISEMENT

ರಾಮಮಂದಿರಕ್ಕೆ ನಿಧಿ ಸಮರ್ಪಣೆ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 12:11 IST
Last Updated 16 ಜನವರಿ 2021, 12:11 IST
ಅಭಿಯಾನ ಉದ್ಘಾಟನೆ ಕಾರ್ಯಕ್ರದಮದಲ್ಲಿ ಎಂ.ರಾಮಚಂದ್ರ ಅವರು ಮಾತನಾಡಿದರು
ಅಭಿಯಾನ ಉದ್ಘಾಟನೆ ಕಾರ್ಯಕ್ರದಮದಲ್ಲಿ ಎಂ.ರಾಮಚಂದ್ರ ಅವರು ಮಾತನಾಡಿದರು   

ಚಾಮರಾಜನಗರ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹಮ್ಮಿಕೊಂಡಿರುವ ನಿಧಿ ಸಮರ್ಪಣಾ ಅಭಿಯಾನಕ್ಕೆ ಶನಿವಾರ ರಾಮಸಮುದ್ರದಲ್ಲಿ ಚಾಲನೆ ದೊರೆಯಿತು.

ರಾಮಸಮುದ್ರದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ, ಬಿಜೆಪಿ ಮುಖಂಡ ಹಾಗೂ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಅಭಿಯಾನಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ಚಾಲನೆ ದೊರೆತಿದ್ದು, ಹಿಂದೂಗಳ ಆರಾಧ್ಯ ಪರುಷನಾಗಿರುವ ಶ್ರೀರಾಮನ ಮಂದಿರಕ್ಕಾಗಿ ಪ್ರತಿ ಮನೆಯಿಂದಲೂ ಸೇವಾ ಕಾಣಿಕೆ ಸಮರ್ಪಣೆಯಾಗಬೇಕು’ ಎಂದು ಹೇಳಿದರು.

ADVERTISEMENT

‘ರಾಮಮಂದಿರವನ್ನು ಒಬ್ಬ ವ್ಯಕ್ತಿಯೇ ನಿರ್ಮಾಣ ಮಾಡಲು ಮುಂದೆ ಬಂದಿದ್ದರು. ಬಿರ್ಲಾ ಕಂಪನಿ ಸೇರಿದಂತೆ ಅನೇಕ ಕಂಪನಿಗಳ ಮಾಲೀಕರು ಕೂಡ ಒಪ್ಪಿಗೆ ನೀಡಿದ್ದರು. ಸಮ್ಮತಿ ನೀಡಿದ್ದರು. ಅದರೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನವರು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ರಾಮಮಂದಿರ ಪ್ರತಿಯೊಬ್ಬರ ಕಾಣಿಕೆಯಿಂದ ನಿರ್ಮಾಣವಾಗಬೇಕು. ಎಲ್ಲರ ಶ್ರಮ ಹಾಗೂ ಹಣ ಪವಿತ್ರ ರಾಮಮಂದಿರ ನಿರ್ಮಾಣಕ್ಕೆ ಸಂದಾಯವಾಗಬೇಕು’ ಎಂದರು.

‘ಇದೊಂದು ಪವಿತ್ರ ಕಾರ್ಯವಾಗಿದ್ದು, ಮನೆ ಮನೆಗೆ ಕಾರ್ಯಕರ್ತರು ಬಂದಾಗ ರಶೀದಿ ಪಡೆದು ತಮ್ಮ ಕೈಲಾದಷ್ಟು ಹಣವನ್ನು ಪ್ರೀತಿ ಪೂರ್ವಕವಾಗಿ ನೀಡಬೇಕು’ ಎಂದು ರಾಮಚಂದ್ರ ಮನವಿ ಮಾಡಿದರು.

ಕರಸೇವಕರಾಗಿದ್ದ ಆಯೋಧ್ಯಕ್ಕೆ ತೆರಳಿದ್ದ ಗ್ರಾಮದ ಮರಿಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

‘1993ರಲ್ಲಿ ಕರಸೇವಕನಾಗಿ ಅಯೋಧ್ಯೆಗೆ ಹೋಗಿದ್ದು, ನನ್ನ ಪುಣ್ಯ. ಅದೊಂದು ಪವಿತ್ರ ಕ್ಷೇತ್ರ. ನಾವೆಲ್ಲರೂ ಹೋಗಿ, ರಾಮ ಜನ್ಮಭೂಮಿಗೆ ತಲುಪಿ, ಗೋಪುರವನ್ನು ಧ್ವಂಸ ಮಾಡಿದ ನೆನಪು ಇನ್ನೂ ಇದೆ. ಈಗ ರಾಮಮಂದಿರ ನಿರ್ಮಾಣವಾಗುತ್ತಿದೆ. ಬಳಿಕ ಅಲ್ಲಿಗೆ ಒಮ್ಮೆ ಎಲ್ಲರೂ ಹೋಗೋಣ’ ಎಂದು ಮರಿಸ್ವಾಮಿ ಅವರು ಹೇಳಿದರು.

ರಾಮಸಮುದ್ರ ಮಠದ ಮಹದೇವಸ್ವಾಮೀಜಿ, ನಗರಸಭಾ ಸದಸ್ಯರಾದ ಪ್ರಕಾಶ್, ಮಹದೇವಯ್ಯ, ಯಜಮಾನರಾದ ಆರ್. ಪುಟ್ಟಮಲ್ಲಪ್ಪ, ಆರ್.ವಿ.ಮಹದೇವಸ್ವಾಮಿ, ಭೃಂಗೇಶ್, ಶಿವಕುಮಾರ್, ಶಿವಣ್ಣ, ವೇಣುಗೋಪಾಲ್, ನಾಗೇಶ್ ನಾಯಕ, ಮಹೇಶ್, ತೊರವಳ್ಳಿ ಕುಮಾರ್ ಇದ್ದರು.

ಜಿಲ್ಲೆಯಲ್ಲಿ ನಿಧಿ ಸಮರ್ಪಣೆ ಅಭಿಯಾನಕ್ಕೆ ಶುಕ್ರವಾರ (ಜ.15) ಆರಂಭಗೊಂಡಿದ್ದು, ಫೆ.5ರವರೆಗೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.