ADVERTISEMENT

ಭವಿಷ್ಯದ ಬೇಡಿಕೆಯ ಹಣ್ಣು ಬೆಳೆಯಿರಿ: ಡಾ. ಹಿತ್ತಲಮನಿ

ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ. ಹಿತ್ತಲಮನಿ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:05 IST
Last Updated 7 ಫೆಬ್ರುವರಿ 2026, 2:05 IST
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಭವಿಷ್ಯದ ಹಣ್ಣಿನ ಬೆಳೆಗಳ ಕುರಿತು ರೈತರಿಗೆ ಆಯೋಜಿಸಿದ್ದ ‘ವಿಚಾರ ಸಂಕಿರಣ’ದಲ್ಲಿ ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಮಾತನಾಡಿದರು
ಚಾಮರಾಜನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಭವಿಷ್ಯದ ಹಣ್ಣಿನ ಬೆಳೆಗಳ ಕುರಿತು ರೈತರಿಗೆ ಆಯೋಜಿಸಿದ್ದ ‘ವಿಚಾರ ಸಂಕಿರಣ’ದಲ್ಲಿ ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಮಾತನಾಡಿದರು   

ಚಾಮರಾಜನಗರ: ಜಿಲ್ಲೆಯ ಹವಾಗುಣಕ್ಕೆ ತಕ್ಕಂತೆ ಹೆಚ್ಚು ಬೇಡಿಕೆಯಲ್ಲಿರುವ ಹಣ್ಣಿನ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ತೋಟಗಾರಿಕೆ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಸಲಹೆ ನೀಡಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಭವಿಷ್ಯದ ಹಣ್ಣಿನ ಬೆಳೆಗಳಾದ ಬಟರ್‌ಪ್ರೂಟ್ (ಬೆಣ್ಣೆಹಣ್ಣು), ಡ್ರ್ಯಾಗನ್ ಪ್ರೂಟ್, ಹಲಸು, ಮಾವು, ಸೀತಾಫಲ, ನೇರಳೆ, ರಾಂಬುಟನ್, ಇನ್ನಿತರೆ ಬೆಳೆಗಳ ಪರಿವರ್ತನೆ, ಹೊಸತಳಿಗಳ ಪರಿಚಯ, ಬೇಸಾಯ ಕ್ರಮ, ಅವಕಾಶಗಳ ಕುರಿತು ಜಿಲ್ಲೆಯ ರೈತರಿಗೆ ಆಯೋಜಿಸಿದ್ದ ‘ವಿಚಾರ ಸಂಕಿರಣ’ದಲ್ಲಿ ಮಾತನಾಡಿದರು.

ತೋಟಗಾರಿಕೆಯನ್ನು ಸಾಮಾನ್ಯ ರೈತರ ಕಸುಬನ್ನಾಗಿ ಮಾಡಿ ಜನರ ಅರ್ಥಿಕ ಸ್ಥಿತಿಗತಿ ಸುಧಾರಿಸಿದ ಡಾ.ಎಂ.ಎಚ್.ಮರಿಗೌಡ ತೋಟಗಾರಿಕಾ ಕ್ಷೇತ್ರದ ಪಿತಾಮಹ ಎನಿಸಿಕೊಂಡರು. ಕೃಷಿಗೆ ಹೆಚ್ಚಿನ ಮಹತ್ವವಿದ್ದ ಕಾಲದಲ್ಲಿ ತೋಟಗಾರಿಕೆಯತ್ತ ರೈತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದ ಅವರು, ತರಕಾರಿ ಹಾಗೂ ಹಣ್ಣಿನ ಬೆಳೆಗಳ ಪ್ರಾಮುಖ್ಯತೆಯನ್ನು ತಿಳಿಸಿದರು ಎಂದರು.

ADVERTISEMENT

ರೈತರು ಕೃಷಿಯಲ್ಲಿ ಪರ್ಯಾಯವಾಗಿ ಬೇಡಿಕೆ ಹೆಚ್ಚಿರುವ ಭವಿಷ್ಯದ ಹಣ್ಣುಗಳನ್ನು ಬೆಳೆಯಲು ಮುಂದಾಗಬೇಕು. ಯಾವ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಬೇರೆ ಜಿಲ್ಲೆಗಳ ರೈತರೊಂದಿಗೆ ಚರ್ಚಿಸಿ ಅರಿಯಬೇಕು, ಭವಿಷ್ಯದ ಹೊಸತಳಿಗಳ ಬಗ್ಗೆ ಕುತೂಹಲಹೊಂದಿ ವಿವರ ಪಡೆಯಬೇಕು ಎಂದು ಸಲಹೆ ನೀಡಿದರು.

ಕರ್ನಾಟಕದಲ್ಲಿ ಕರಾವಳಿ, ಪಶ್ಚಿಮ ಘಟ್ಟ, ಮಲೆನಾಡು, ಬಯಲುಸೀಮೆ ಪ್ರದೇಶಗಳಿದ್ದು ಮಳೆಯಾಶ್ರಿತ ಹಾಗೂ ನೀರಾವರಿ ಬೆಳೆ ಬೆಳೆಯಲಾಗುತ್ತದೆ. ಭೂಮಿಯ ಸ್ಥಿತಿಗತಿ, ಹವಾಗುಣ, ಪರಿಸರಕ್ಕೆ ಅನುಗುಣವಾಗಿ ಹಣ್ಣಿನ ಬೆಳೆ ಬೆಳೆದರೆ ಉತ್ತಮ ಫಸಲು ಹಾಗೂ ಲಾಭ ಬರಲಿದೆ. ರೈತರ ಆದಾಯ ದ್ವಿಗುಣಗೊಳ್ಳಲಿದೆ. ಚಾಮರಾಜನಗರ ಜಿಲ್ಲೆಯ ಹವಾಗುಣ ಹಲವು ಹಣ್ಣಿನ ಬೆಳೆಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಪ್ಲೋರಜಾ ಕಂಪನಿ ಪ್ರತಿನಿಧಿ ಶಾಂತರಾಜು ಅವರು ಥಾಯ್ ದೇಶದ ಹಲಸು ಹಣ್ಣಿನ ಬಗ್ಗೆ ಮಾಹಿತಿ ನೀಡಿ, ಕಂಪನಿಯು ರೈತರ ಜೊತೆ ಒಡಂಬಡಿಕೆ ಮಾಡಿಕೊಂಡು ಹಲಸಿನ ಸಸಿಗಳನ್ನು ನೀಡುತ್ತದೆ. ಹಲಸಿನ ಹಣ್ಣುಗಳನ್ನು ಕಂಪನಿಯಿಂದಲೇ ಖರೀದಿಸಲಿದೆ. ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡರೆ 28 ರಿಂದ 30 ವರ್ಷ ರೈತರು ನಿರಂತರ ಆದಾಯ ಪಡೆಯಬಹುದು ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಎಸ್.ಶಿವಪ್ರಸಾದ್, ರೈತ ಮುಖಂಡರು, ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಯ ಪದಾಧಿಕಾರಿಗಳು ವಿಚಾರ ಸಂಕಿರಣದಲ್ಲಿ ಇದ್ದರು.

‘ಜಿಲ್ಲೆಯಲ್ಲೂ ವಿಭಿನ್ನ ಹಣ್ಣು ಬೆಳೆಯಬಹುದು’

ಚಾಮರಾಜನಗರ ಜಿಲ್ಲೆಯು ಬಟರ್‌ಪ್ರೂಟ್ (ಬೆಣ್ಣೆಹಣ್ಣು) ಡ್ರ್ಯಾಗನ್‌ಪ್ರೂಟ್ ಸೀಬೆ ಮೆಕಡಮಿಯಾ ಲೋಂಗಾನ್ ಹಲಸು ಆಮ್ಲ ಚಕ್ಕೋತಾ ಸೀತಾಫಲ ಕೆಂಪು ಸಪೋಟ ಸಿಹಿ ಹುಣಸೆ ಬಿಳಿ ನೇರಳೆ ವಾಟರ್ ಆಪಲ್ ಹಣ್ಣುಗಳನ್ನು ಬೆಳೆಯಲು ಸೂಕ್ತವಾಗಿವೆ ಎಂಬುದನ್ನು ಸಂಶೋಧನೆಗಳಿಂದ ದೃಢಪಟ್ಟಿದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಈಗಾಗಲೇ ವಿಭಿನ್ನ ಬೆಳೆಗಳನ್ನು ಬೆಳೆಯುತ್ತಿದ್ದು ಯಶಸ್ಸು ಕಂಡಿದ್ದಾರೆ. ಹೆಗ್ಗವಾಡಿ ಶಿವಕುಮಾರ್ ಹಾಗೂ ರೇವಣ್ಣ ಉಪ್ಪಾರ್ ಬೆಣ್ಣೆಹಣ್ಣಿನ ಬೆಳೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು ಅವರ ಮಾದರಿಯನ್ನು ಇತರೆ ರೈತರು ಅನುಸರಿಸಸಬಹುದು ಎಂದು ಎಸ್.ವಿ. ಹಿತ್ತಲಮನಿ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.