ADVERTISEMENT

30ರಂದು ಗಡಿನಾಡ ಉತ್ಸವ, ವಿಚಾರ ಸಂಕಿರಣ

‘ಪ್ರಜಾವಾಣಿ’, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತಸಹಯೋಗ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 14:48 IST
Last Updated 3 ಡಿಸೆಂಬರ್ 2022, 14:48 IST
ಚಾಮರಾಜನಗರದಲ್ಲಿ ಗಡಿನಾಡು ಉತ್ಸವ ಹಾಗೂ ವಿಚಾರಸಂಕಿರಣ ಆಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಇತರರು ಇದ್ದರು
ಚಾಮರಾಜನಗರದಲ್ಲಿ ಗಡಿನಾಡು ಉತ್ಸವ ಹಾಗೂ ವಿಚಾರಸಂಕಿರಣ ಆಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ನೇತೃತ್ವದಲ್ಲಿ ಶನಿವಾರ ಸಭೆ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಇತರರು ಇದ್ದರು   

ಚಾಮರಾಜನಗರ: 'ಪ್ರಜಾವಾಣಿ’, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಇದೇ 30ರಂದು ನಗರದಲ್ಲಿ ಗಡಿನಾಡು ಉತ್ಸವ ಹಾಗೂ ವಿಚಾರ ಸಂಕಿರಣ ನಡೆಯಲಿದೆ.

ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ.ರಾಜ್‌ಕುಮಾರ್‌ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಡಾ.ಸಿ.ಸೋಮಶೇಖರ ಅವರು, ‘ಗಡಿ ಭಾಗ ಚಾಮರಾಜನಗರದಲ್ಲಿ ಗಡಿನಾಡ ಉತ್ಸವ ಹಾಗೂ ವಿಚಾರಸಂಕಿರಣ ಅರ್ಥಪೂರ್ಣವಾಗಿ ನಡೆಯಬೇಕು. 30ರಂದು ಉತ್ಸವದಲ್ಲಿ ಭಾಗವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಒಪ್ಪಿಕೊಂಡಿದ್ದಾರೆ. ಕಲಾತಂಡಗಳ ಅದ್ಧೂರಿ ಮೆರವಣಿಗೆ, ಉದ್ಘಾಟನಾ ಸಮಾರಂಭ, ನಂತರ ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕವಿಗೋಷ್ಠಿ, ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ನೃತ್ಯರೂಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದ‌ರು.

ADVERTISEMENT

‘ಮೆರವಣಿಗೆಯಲ್ಲಿ ಸ್ಥಳೀಯ ಕಲಾ ತಂಡಗಳು, ವಿಶಿಷ್ಟ ಜಾನಪದ ತಂಡಗಳಿಗೆ ಅವಕಾಶ ನೀಡಬೇಕು. ಗಡಿ ಜಿಲ್ಲೆಯಲ್ಲಿ ಶಿಕ್ಷಣದ ಸ್ಥಿತಿ ಗತಿ ಮತ್ತು ಗಡಿನಾಡಿನ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ವಿಷಯದ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಬಗ್ಗೆ ತಿಳಿದುಕೊಂಡಿರುವ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಲಿದ್ದಾರೆ’ ಎಂದರು.

‘ಕಾರ್ಯಕ್ರಮದ ನಡುವೆ ಸ್ಥಳೀಯ ಕಲಾವಿದರಿಂದ ನೃತ್ಯ, ಬೆಂಗಳೂರು ಇಲ್ಲವೇ ಮೈಸೂರಿನಿಂದ ರಂಗಭೂಮಿ ತಂಡವನ್ನು ಕರೆಸಿ ವಚನಗಳನ್ನು ಆಧರಿಸಿದ ನೃತ್ಯರೂಪಕ ಆಯೋಜಿಸಲಾಗುವುದು. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿದ್ವಾಂಸರೊಬ್ಬರು ಸಮಾರೋಪ ಭಾಷಣ ಮಾಡಲಿದ್ದಾರೆ’ ಎಂದರು.

‘ಎಲ್ಲ ಕಾರ್ಯಕ್ರಮಗಳೂ ಅಚ್ಚುಕಟ್ಟಾಗಿ ನಡೆಯಬೇಕು. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಬೇಕು. ಸೂಕ್ತ ಕಲಾವಿದರು, ಕಲಾ ತಂಡಗಳ ಆಯ್ಕೆ ಮಾಡಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರ ಪಡೆದು ಕವಿಗೋಷ್ಠಿಗೆ ಕವಿಗಳನ್ನು ಆಯ್ಕೆ ಮಾಡಬೇಕು’ ಎಂದು ಸೋಮಶೇಖರ ಅಧಿಕಾರಿಗಳಿಗೆ ಸೂಚಿಸಿದರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ‌, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಧರಣೇಶ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಪ್ರಾಧಿಕಾರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಸಿದ್ದಲಿಂಗಸ್ವಾಮಿ, ‘ಪ್ರಜಾವಾಣಿ’ ಪ್ರಸರಣ ಮೈಸೂರು ವಿಭಾಗದ ವ್ಯವಸ್ಥಾಪಕ ಹರವೆ ಪ್ರಕಾಶ್‌, ಚಾಮರಾಜನಗರ ಜಿಲ್ಲಾ ವ್ಯವಸ್ಥಾಪಕ ಲೋಕೇಶ್‌ ಇದ್ದರು.

ವಸ್ತು ಪ್ರದರ್ಶನ

‘ರಾಷ್ಟ್ರಭಕ್ತಿ, ನಾಡ ಪ್ರೀತಿ’ ಎಂಬ ವಿಷಯವನ್ನು ಆಧರಿಸಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗುವುದು. ಜಿಲ್ಲೆಯ ಹಲವು ಕವಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪ್ರಾಧಿಕಾರ ಬೆಳೆದು ಬಂದ ಹಾದಿ ಹಾಗೂ ಸಾಧನೆಗಳು, ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು, 75ನೇ ವರ್ಷದ ಸಂಭ್ರಮದಲ್ಲಿರುವ ‘ಪ್ರಜಾವಾಣಿ’ ನಡೆದು ಬಂದ ಹಾದಿ, ಜಿಲ್ಲೆಯ ಅಭಿವೃದ್ಧಿ, ಇಲ್ಲಿನ ಸಂಸ್ಕೃತಿ, ಆಚಾರ ವಿಚಾರಗಳಿಗೆ ಸಂಬಂಧಿಸಿದ ವಸ್ತು ಪ್ರದರ್ಶನವನ್ನೂ ಏರ್ಪಡಿಸಲಾಗುವುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.