ಬಾಲಚಂದ್ರ ಎಚ್.
ಚಾಮರಾಜನಗರ: ಕಳೆದ ವರ್ಷ ರೈತರ ಮೊಗದಲ್ಲಿ ಸಂತಸ ಮೂಡಿಸಿದ್ದ ಶುಂಠಿ ಬೆಳೆ ಈ ವರ್ಷ ಕಣ್ಣೀರು ತರಿಸುತ್ತಿದೆ. ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಭಾರಿ ಕುಸಿತವಾಗಿದ್ದು ಬೆಳೆಗಾರರು ಕಂಗಾಲಾಗಿದ್ದಾರೆ.
ಕಳೆದ ವರ್ಷ 60 ಕೆ.ಜಿಗೆ ಶುಂಠಿ ಬ್ಯಾಗ್‌ಗೆ ಗರಿಷ್ಠ ₹10,000ದವರೆಗೂ ಬಂಪರ್ ಬೆಲೆ ಸಿಕ್ಕಿತ್ತು. ಈ ವರ್ಷ ₹900 ರಿಂದ ₹1,200ಕ್ಕೆ ದರ ಕುಸಿದಿದ್ದು 10 ಪಟ್ಟು ದರ ಇಳಿಕೆಯಾಗಿದೆ. ಲಾಭದಾಯಕ ಬೆಳೆ ಎಂದು ಶುಂಠಿ ಬೆಳೆದಿದ್ದ ರೈತರು ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಶುಂಠಿ ಬೆಳೆಯಲು ಖರ್ಚು ಮಾಡಿದ ಹಣವೂ ಕೈಸೇರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
‘ಮಾರುಕಟ್ಟೆಯಲ್ಲಿ ಬಹುಬೇಡಿಕೆ ಹಾಗೂ ಕೈತುಂಬ ಆದಾಯ ಸಿಗುವ ಆಸೆಯೊಂದಿಗೆ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಶುಂಠಿ ಬಿತ್ತನೆ ನಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶುಂಠಿ ಬಿತ್ತನೆ ಕ್ಷೇತ್ರ ದುಪ್ಪಟ್ಟಾಗಿತ್ತು. ಬೆಲೆ ಕುಸಿತದಿಂದ ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಜಮೀನಿನಲ್ಲಿ ಕಟಾವಿಗೆ ಬಂದಿರುವ ಶುಂಠಿಯನ್ನು ಕೀಳಿಸಲು ರೈತರು ಹಿಂದು–ಮುಂದು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಪ್ರಗತಿಪರ ಕೃಷಿಕ ಎಸ್.ಎಂ.ನಾಗಾರ್ಜುನ ಕುಮಾರ್.
ಪರಿಹಾರ ಏನು?
‘ಬೆಂಬಲ ಬೆಲೆ ಯೋಜನೆ ವ್ಯಾಪ್ತಿಗೊಳಪಡದ ಬೆಳೆಗಳನ್ನು ಎಂಐಎಸ್ ಅಂದರೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಖರೀದಿ ಮಾಡಲು ಅವಕಾಶ ಇದೆ. ಈಚೆಗೆ ಅರಿಶಿನ ಬೆಲೆ ಕುಸಿದಾಗ ಎಂಐಎಸ್ ಅಡಿ ಸರ್ಕಾರ ರೈತರಿಂದ ಅರಿಶಿನ ಖರೀದಿ ಮಾಡಿತ್ತು. ಈಗಲೂ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದು ರಾಜ್ಯ ಸರ್ಕಾರ ಕೂಡಲೇ ಎಂಐಎಸ್ ಯೋಜನೆಯಡಿ ರೈತರಿಂದ ನೇರವಾಗಿ ಶುಂಠಿ ಖರೀದಿ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ. ಮಾರುಕಟ್ಟೆಗೆ ಸರ್ಕಾರದ ಮಧ್ಯಪ್ರವೇಶದಿಂದ ಶುಂಠಿ ಧಾರಣೆಯೂ ಹೆಚ್ಚಾಗಲಿದೆ ಎನ್ನುತ್ತಾರೆ’ ನಾಗಾರ್ಜುನ ಕುಮಾರ್.
ಸರ್ಕಾರಕ್ಕೆ ಪ್ರಸ್ತಾವ: ಜಿಲ್ಲೆಯ ಶುಂಠಿ ಬೆಳೆಗಾರರ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಎಂಐಎಸ್ ಯೋಜನೆಯಡಿ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳ ಮೂಲಕ ಶುಂಠಿ ಖರೀದಿಸುವಂತೆ ಸರ್ಕಾರಕ್ಕೆ ಮನವಿಯ ಮೂಲಕ ಪ್ರಸ್ತಾವ ಸಲ್ಲಿಸಿದ್ದಾರೆ.
ಜಿಲ್ಲಾಡಳಿತದ ಪ್ರಸ್ತಾವ ರಾಜ್ಯ ಹಣಕಾಸು ಇಲಾಖೆಯ ಮುಂದಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕಿ ಕೇಂದ್ರ ಸರ್ಕಾರಕ್ಕೆ ಕಳಿಸಿದರೆ ರಾಜ್ಯದಿಂದ ಆಯ್ಕೆಯಾಗಿರುವ ಸಂಸದರು ರ ಒತ್ತಡ ತಂದು ಎಂಐಎಸ್ ಯೋಜನೆಯಡಿ ಶುಂಠಿ ಖರೀದಿ ಕೇಂದ್ರಗಳನ್ನು ತೆರೆಯಲು ಒಪ್ಪಿಗೆ ಪಡೆಯಬಹುದು.
‘ಎಂಐಎಸ್ ಯೋಜನೆಯಡಿ ಕ್ವಿಂಟಲ್‌ಗೆ ₹7,000 ದರ ನಿಗದಿಪಡಿಸಿ ಶುಂಠಿ ಖರೀದಿಗೆ ಒಪ್ಪಿಗೆ ದೊರೆತರೆ ಚಾಮರಾಜನಗರ ಜಿಲ್ಲೆಗೆ ಮಾತ್ರವಲ್ಲ; ರಾಜ್ಯದ ಎಲ್ಲ ಶುಂಠಿ ಬೆಳೆಗಾರರಿಗೂ ಅನುಕೂಲವಾಗಲಿದೆ. ಶುಂಠಿ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ತುರ್ತು ಸ್ಪಂದಿಸಬೇಕು’ ಎಂದು ನಾಗಾರ್ಜುನ ಒತ್ತಾಯಿಸುತ್ತಾರೆ.
‘ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಶುಂಠಿ ಖರೀದಿಸಿದರೆ ರೈತರಿಗೆ ಮಾತ್ರವಲ್ಲ ಸರ್ಕಾರಕ್ಕೂ ಲಾಭವಿದೆ. ಕಳೆದ ವರ್ಷ ಎಂಐಎಸ್ ಯೋಜನೆಯಡಿ ಸರ್ಕಾರ ಕ್ವಿಂಟಲ್ ಅರಿಶಿಣವನ್ನು ₹ 6,694ಕ್ಕೆ ಖರೀದಿ ಮಾಡಿತ್ತು. ಬಳಿಕ ಶುಂಠಿ ದರ ₹ 11,300ಕ್ಕೆ ಏರಿಕೆಯಾಯಿತು. ಮುಕ್ತ ಮಾರುಕಟ್ಟೆಯಲ್ಲಿ ಸರ್ಕಾರ ಅರಿಶಿನ ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಲಾಭ ಗಳಿಸಿತು. ಇದರಿಂದ ರೈತರಿಗೂ ಲಾಭ, ಸರ್ಕಾರಕ್ಕೂ ಲಾಭ’ ಎನ್ನುತ್ತಾರೆ ಅವರು.
‘ಒಂದುವೇಳೆ ನಷ್ಟವಾದರೂ ಆರ್ಥಿಕ ಹೊರೆಯನ್ನು ಕೇಂದ್ರ ಸರ್ಕಾರ ಸಮನಾಗಿ ಹಂಚಿಕೊಳ್ಳುವುದರಿಂದ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ’ ಎಂದರು.
‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಶುಂಠಿ ಖರೀದಿಗೆ ಅನುಮತಿ ಕೋರಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಕೇಂದ್ರ ಅನುಮತಿ ನೀಡಿದರೆ ನೋಡೆಲ್ ಸಂಸ್ಥೆಯು ರೈತರಿಂದ ಬೆಂಬಲ ಬೆಲೆಯಡಿ ಶುಂಠಿ ಖರೀದಿ ಮಾಡಲಿದೆ.–ಸಿದ್ದರಾಜು, ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ
ರಫ್ತಿನ ಮೇಲೆ ನಿರ್ಬಂಧ
ದೇಶದಲ್ಲಿ ಬೆಳೆಯುವ ಬಹುಪಾಲು ಶುಂಠಿ ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಪೂರೈಕೆಯಾಗುತ್ತದೆ. ಈಚೆಗೆ ಎರಡೂ ದೇಶಗಳಿಗೆ ಶುಂಠಿ ರಫ್ತು ನಿಂತಿರುವುದರಿಂದ ದರ ದಿಢೀರ್ ಕುಸಿತವಾಗಿದೆ. ಒಂದು ಎಕರೆ ಶುಂಠಿ ಬೆಳೆಯಲು 4 ರಿಂದ 5 ಲಕ್ಷ ಖರ್ಚು ಬರುತ್ತದೆ. ಸದ್ಯದ ದರದಲ್ಲಿ ಮಾರಾಟ ಮಾಡಿದರೆ ಶೇ 50ರಷ್ಟು ಖರ್ಚಿನ ಬಾಬ್ತು ಕೂಡ ಕೈಸೇರುವುದಿಲ್ಲ. ಶುಂಠಿ ಕೀಳಿಸದೆ ಹಾಗೆ ಬಿಟ್ಟರೆ ಬಿಸಿಲಿಗೆ ಒಣಗಿ ತೂಕ ಕಳೆದುಕೊಂಡು ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಶುಂಠಿ ಬೆಳೆಗಾರರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.–ಎಸ್.ಎಂ.ನಾಗಾರ್ಜುನ ಕುಮಾರ್ ಪ್ರಗತಿಪರ ಕೃಷಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.