ADVERTISEMENT

ಒಂದೇ ದಿನ 43,050 ಮಂದಿಗೆ ಲಸಿಕೆ

ಜಿಲ್ಲೆಯಾದ್ಯಂತ ಬೃಹತ್‌ ಲಸಿಕಾ ಮೇಳಕ್ಕೆ ಉತ್ತಮ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 2:51 IST
Last Updated 18 ಸೆಪ್ಟೆಂಬರ್ 2021, 2:51 IST
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ತೆರೆಯಲಾಗಿದ್ದ ವಿಶೇಷ ಲಸಿಕಾ ಕೇಂದ್ರದಲ್ಲಿ ಯುವತಿಯೊಬ್ಬರು ಶುಕ್ರವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡರು
ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ತೆರೆಯಲಾಗಿದ್ದ ವಿಶೇಷ ಲಸಿಕಾ ಕೇಂದ್ರದಲ್ಲಿ ಯುವತಿಯೊಬ್ಬರು ಶುಕ್ರವಾರ ಕೋವಿಡ್‌ ಲಸಿಕೆ ಹಾಕಿಸಿಕೊಂಡರು   

ಚಾಮರಾಜನಗರ: ರಾಜ್ಯದಾದ್ಯಂತ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಕೋವಿಡ್‌ ಲಸಿಕಾ ಮೇಳಕ್ಕೆ ಜಿಲ್ಲೆಯಲ್ಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 43,050 ಸಾವಿರಕ್ಕೂ ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ‌18 ವರ್ಷಕ್ಕಿಂತ ಹೆಚ್ಚು ವಯಸ್ಸಿನ 50 ಸಾವಿರ ಮಂದಿಗೆ ಲಸಿಕೆಯನ್ನು ಹಾಕುವ ಗುರಿಯನ್ನು ಜಿಲ್ಲಾಡಳಿತ ಹೊಂದಿತ್ತು. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ಮೇಳ ನಡೆಯಿತು. 43,050 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಹನೂರು, ಗುಂಡ್ಲುಪೇಟೆ ತಾಲ್ಲೂಕುಗಳ ವ್ಯಾಪ್ತಿಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ನರ್ಸಿಂಗ್‌ ಹೋಂಗಳು ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಜನಸಂದಣಿ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿತ್ತು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ 525 ತಂಡಗಳು, ನಗರ ಪ್ರದೇಶದಲ್ಲಿ 49 ತಂಡಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 21 ತಂಡಗಳು ಸೇರಿದಂತೆ ಒಟ್ಟು 595 ಲಸಿಕಾ ತಂಡಗಳನ್ನು ನಿಯೋಜಿಸಲಾಗಿತ್ತು. ಜಿಲ್ಲೆಯಾದ್ಯಂತ 1,190 ಸಿಬ್ಬಂದಿ ಈ ಮೇಳದಲ್ಲಿ ಕರ್ತವ್ಯ ನಿರ್ವಹಿಸಿದರು.

ಮೇಳಕ್ಕೆ ಚಾಲನೆ:ನಗರದ ಶ್ರೀ ಚಾಮರಾಜೇಶ್ವರ ದೇವಾಲಯದ ಬಳಿ ತೆರೆಯಲಾಗಿದ್ದ ವಿಶೇಷ ಲಸಿಕಾ ಕೇಂದ್ರದಲ್ಲಿ ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್ ನಾರಾಯಣ ರಾವ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಲಸಿಕಾ ಮೇಳಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅವರು ‘ಸರ್ಕಾರದ ನಿರ್ದೇಶನದ ಪ್ರಕಾರ, ಜಿಲ್ಲೆಯಲ್ಲೂ ಬೃಹತ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಲಸಿಕೆ ನೀಡುವ ಕಾರ್ಯದಲ್ಲಿ 500ಕ್ಕೂ ಹೆಚ್ಚು ತಂಡಗಳು ತೊಡಗಿಕೊಂಡಿವೆ. ಲಸಿಕಾ ಮೇಳದಲ್ಲಿ 50 ಸಾವಿರ ಜನರಿಗೆ ಲಸಿಕೆ ನೀಡುವ ಗುರಿಯನ್ನು ಜಿಲ್ಲೆಗೆ ನಿಗದಿಪಡಿಸಲಾಗಿದೆ. ಈ ಹಿಂದೆ ನಡೆದ ಲಸಿಕಾ ಮಹಾ ಮೇಳದಲ್ಲಿ ಒಂದೇ ದಿನ 23 ಸಾವಿರ ಜನರಿಗೆ ಲಸಿಕೆ ನೀಡಲಾಗಿತ್ತು. ಈ ಬಾರಿ ಇದರ ದುಪ್ಪಟ್ಟು ಸಂಖ್ಯೆಯಲ್ಲಿ ಲಸಿಕೆ ನೀಡಬೇಕಿದೆ’ ಎಂದರು.

‘ಜಿಲ್ಲೆಯಲ್ಲಿ 1.99 ಲಕ್ಷ ಜನರು ಲಸಿಕೆ ಪಡೆಯಬೇಕಿದೆ. ನಗರ ಪ್ರದೇಶದಲ್ಲಿ ಲಸಿಕೆ ಪಡೆಯುವ ಕಾರ್ಯಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದುವರೆಗೆ ಶೇ 96 ರಷ್ಟು ಜನರು ನಗರ ಪ್ರದೇಶದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 70ರಷ್ಟು ಪ್ರಗತಿಯಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದತ್ತ ಹೆಚ್ಚು ಗಮನ ಕೇಂದ್ರೀಕರಿಸಲಾಗಿದೆ’ ಎಂದು ಡಾ.ಎಂ.ಆರ್.ರವಿ ಅವರು ತಿಳಿಸಿದರು.

ವಿವಿಧೆಡೆ ಪರಿಶೀಲನೆ: ಜಿಲ್ಲಾಧಿಕಾರಿ ಅವರು ಶುಕ್ರವಾರಕಾಗಲವಾಡಿ, ಹೊಂಗನೂರು, ಗುಂಬಳ್ಳಿ, ಕೊಳ್ಳೇಗಾಲ, ಮಧುವಿನಹಳ್ಳಿ, ಹನೂರು, ಕಾಮಗೆರೆ, ಬಂಡಳ್ಳಿ, ಶಾಗ್ಯ ಸೇರಿದಂತೆ ವಿವಿಧ ಕಡೆಗಳಿಗೆ ಭೇಟಿ ನೀಡಿ ಲಸಿಕಾ ಮೇಳದ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಶ್ವೇಶ್ವರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿಗಳು, ತಹಶೀಲ್ದಾರರು ಇದ್ದರು.

ಉಸ್ತುವಾರಿ ಸಚಿವರ ಅಭಿನಂದನೆ

ಈ ಮಧ್ಯೆ, ಜಿಲ್ಲೆಯಲ್ಲಿ ಲಸಿಕಾ ಮೇಳ ಯಶಸ್ವಿಯಾಗಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಜಿಲ್ಲೆಯ ಜನರು ಹಾಗೂ ಜಿಲ್ಲಾಡಳಿತವನ್ನು ಅಭಿನಂದಿಸಿದ್ದಾರೆ.

ಜಿಲ್ಲೆಗೆ ಲಸಿಕಾ ಮೇಳದಲ್ಲಿ 50 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ನಿಗದಿ‌ ಮಾಡಲಾಗಿತ್ತು. ನಡೆದ ಲಸಿಕಾ ಮೇಳದಲ್ಲಿ 43 ಸಾವಿರಕ್ಕೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಸರ್ಕಾರದ ಮನವಿಗೆ ಒಗೊಟ್ಟು ಅತಿ ಹೆಚ್ಚು ಸಂಖ್ಯೆಯಲ್ಲಿ ಜಿಲ್ಲೆಯ ಜನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವೆನಿಸಿರುವ ಲಸಿಕೆ ಪಡೆಯುವ ಕಾರ್ಯಕ್ಕೆ ಉತ್ತಮವಾಗಿ ಸ್ಪಂದಿಸಿರುವುದಕ್ಕೆ ಜಿಲ್ಲೆಯ ಜನರನ್ನು ಅಭಿನಂದಿಸುವೆ. ಲಸಿಕೆ ದಾಸ್ತಾನು ಜಿಲ್ಲೆಯಲ್ಲಿ ಸಾಕಷ್ಟು ಇದ್ದು ಲಸಿಕೆ ನೀಡುವ ಕಾರ್ಯ ಜಿಲ್ಲೆಯಲ್ಲಿ ಮುಂದುವರೆಯಲಿದೆ. ಜನತೆ ಲಸಿಕೆಯನ್ನು ತಪ್ಪದೆ ಪಡೆಯಬೇಕು ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.