
ಗುಂಡ್ಲುಪೇಟೆ: ಪಟ್ಟಣದಲ್ಲಿ ಹನುಮ ಜಯಂತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಜಯಂತಿ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಸಾವಿರಾರು ಹನುಮ ಭಕ್ತರು ಭಾಗವಹಿಸಿದ್ದರು.
ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ಹನುಮನ ಮೂರ್ತಿ ಹೊತ್ತ ವಾಹನ ಹಾಗೂ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಹಿಂದೂ ಧರ್ಮದ ಸಂಕೇತವಾದ ಹನುಮ ಜಯಂತಿಯನ್ನು ಗುಂಡ್ಲುಪೇಟೆ ಪಟ್ಟಣದಲ್ಲಿ ಇದೇ ಪ್ರಥಮ ಬಾರಿಗೆ ಜಾತ್ಯತೀಕ, ಪಕ್ಷಾತೀತ, ಧರ್ಮಾತೀತವಾಗಿ ಆಚರಣೆ ಮಾಡುತ್ತಿರುವುದು ಖುಷಿಯ ವಿಚಾರ. ಆಂಜನೇಯನ ಮೇಲಿರುವ ಭಕ್ತಿಯಿಂದ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಯುವಕರು ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದಾರೆ. ಪ್ರತಿ ವರ್ಷ ಜಯಂತಿ ಆಚರಣೆ ಮಾಡಲು ಸಮಿತಿ ತೀರ್ಮಾನಿಸಿದೆ. ಅದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಹನುಮ ಜಯಂತಿ ಮೆರವಣಿಗೆ ಚಾಮರಾಜನಗರ ರಸ್ತೆಯ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾಗಿ ಕೋಡಹಳ್ಳಿ ರಸ್ತೆ ಮೂಲಕ ಕೆ.ಆರ್.ಸಿ ರಸ್ತೆ, ಹಳೇ ಬಸ್ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ವೀರಮದಕರಿ ನಾಯಕ ವೃತ್ತದ ಮಾರ್ಗವಾಗಿ ಅರಳಿಕಟ್ಟೆ, ಅಂಬೇಡ್ಕರ್ ಸರ್ಕಲ್ ಹಾಗೂ ಕ್ವಾತ್ವಾಲ್ ಛಾವಡಿ ಬಳಿ ಸಮಾಪ್ತಿಗೊಂಡಿತು.
ಕಂಸಾಳೆ, ವೀರಗಾಸೆ, ಮದ್ದಳೆ, ಡೋಳು ಕುಣಿತ, ಛತ್ರಿ-ಛಾಮರ, ಮಂಗಳ ವಾದ್ಯ, ಡಿ.ಜೆ ಹಾಗೂ ಬೃಹತ್ ಹನುಮಂತ ಮೂರ್ತಿ ಹೊತ್ತ ಕ್ರೇಸ್ ಸೇರಿದಂತೆ ನಾಲ್ಕು ಹನುಮನ ವಿಗ್ರಹ, ರಾಮನ ಮೂರ್ತಿ ಮೆರವಣಿಗೆಗೆ ರಂಗು ತಂದವು. ಡೋಲು ಮತ್ತು ಡಿ.ಜೆ ಶಬ್ದಕ್ಕೆ ಮಾಜಿ ಶಾಸಕ ನಿರಂಜನಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್ ಸೇರಿದಂತೆ ಯುವ ಸಮೂಹ ಹೆಜ್ಜೆ ಹಾಕಿ ಸಂಭ್ರಮಿಸಿದರು.
ರಾರಾಜಿಸಿದ ಕೇಸರಿ ಧ್ವಜ: ಹನುಮ ಜಯಂತಿ ಹಿನ್ನಲೆಯಲ್ಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ, ಚಾಮರಾಜನಗರ ರಸ್ತೆ, ಕೆ.ಆರ್.ಸಿ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹನುಮಂತನ ಕಟೌಟ್, ಬಂಟಿಂಗ್, ಕೇಸರಿ ಬಾವುಟ ಕಟ್ಟಲಾಗಿತ್ತು. ಮೆರವಣಿಗೆ ವೇಳೆ ಕೇಸರಿ ಧ್ವಜ ರಾರಾಜಿಸಿದವು. ಆಂಜನೇಯನ ಪರ ಘೋಷಣೆ ಮೊಳಗಿದವು. ಸೋಮೇಶ್ವರ ಹಾಸ್ಟಲ್‌ನಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಸೂಕ್ತ ಬಂದೋ ಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಸ್ನೇಹರಾಜ್ ನೇತೃತ್ವದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್, ಎಸ್‌ಐ ಸಾಹೇಬಗೌಡ ಮಾರ್ಗದರ್ಶನದಲ್ಲಿ 2 ಕೆಎಸ್‌ಆರ್‌ಪಿ ತುಕಡಿ, 3 ಸಶಸ್ತ್ರ ಮೀಸಲು ಪಡೆ ವಾಹನ ಸೇರಿದಂತೆ 250ಕ್ಕೂ ಅಧಿಕ ಮಂದಿಯನ್ನು ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಹನುಮ ಜಯಂತಿ ಆಚರಣೆ ಸಮಿತಿ ಪದಾಧಿಕಾರಿಗಳು ಸೇರಿದಂತೆ 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.