ADVERTISEMENT

ಬ್ರಹ್ಮರಥಕ್ಕೆ ಅದ್ದೂರಿ ಸ್ವಾಗತ

ಚಾಮರಾಜೇಶ್ವರ ಸ್ವಾಮಿಗೆ ನೂತನ ರಥ; ಮೆರವಣಿಗೆಯಲ್ಲಿ ಅಪಾರ ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 15:59 IST
Last Updated 13 ಮೇ 2022, 15:59 IST
ಬೆಂಗಳೂರಿನಿಂದ ಚಾಮರಾಜನಗರಕ್ಕೆ ಬಂದ ಬ್ರಹ್ಮರಥಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಪೂಜೆ ಸಲ್ಲಿಸಿದರು
ಬೆಂಗಳೂರಿನಿಂದ ಚಾಮರಾಜನಗರಕ್ಕೆ ಬಂದ ಬ್ರಹ್ಮರಥಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಪೂಜೆ ಸಲ್ಲಿಸಿದರು   

ಚಾಮರಾಜನಗರ: ಇತಿಹಾಸ ಪ್ರಸಿದ್ಧ ನಗರದ ಚಾಮರಾಜೇಶ್ವರಸ್ವಾಮಿ ದೇವಾಲಯದ ನೂತನ ಬ್ರಹ್ಮರಥವನ್ನು ಶುಕ್ರವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಿರಂತರವಾಗಿ ಸುರಿಯುತ್ತಿದ್ದ ಮಳೆ ಅದ್ದೂರಿ ಸ್ವಾಗತಕ್ಕೆ ತಡೆಯೊಡ್ಡಿತು. ಸ್ವಾಗತ ಮಾಡುವ ಕಾರ್ಯಕ್ರಮ 9 ಗಂಟೆಗೆ ನಿಗದಿಯಾಗಿತ್ತು. ಮಳೆಯಿಂದಾಗಿ 10 ಗಂಟೆಗೆ ಮುಂದೂಡಲಾಗಿತ್ತು. ಆಗಲೂ ತುಂತುರು ಮಳೆ ಹನಿಯುತ್ತಿತ್ತು.

ನಗರದ ಆದಿಶಕ್ತಿ ದೇವಸ್ಥಾನದ ಬಳಿ ಲಾರಿಯಲ್ಲಿ ಕೂರಿಸಿದ್ದ, ಹೂಮಾಲೆ, ತೋರಣಗಳಿಂದ ಅಲಂಕೃತವಾಗಿದ್ದ ಬ್ರಹ್ಮರಥಕ್ಕೆಶಾಸಕ ಸಿ.ಪುಟ್ಟರಂಗಶೆಟ್ಟಿ, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಸೇರಿದಂತೆ ಹಲವರು ಪೂಜೆ ಸಲ್ಲಿಸಿದರು.

ADVERTISEMENT

ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ರಥದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸಂತೇಮರಹಳ್ಳಿ ವೃತ್ತ, ಡೀವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ಚಿಕ್ಕಂಗಡಿ ಬೀದಿ ಮೂಲಕ ಸಾಗಿ ಚಾಮರಾಜೇಶ್ವರ ದೇವಾಲಯದ ಮುಂಭಾಗದ ರಸ್ತೆ ಮೂಲಕ ದೇವಾಲಯ ತರಲಾಯಿತು. ನಂತರ ಪ್ರದಕ್ಷಿಣೆ ಹಾಕಿಸಿದ ನಂತರ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿ ರಥವನ್ನು ನಿಲ್ಲಿಸಲಾಯಿತು.

ಮೆರವಣಿಗೆಯುದ್ದಕ್ಕೂ ಚಾಮರಾಜೇಶ್ವರ ಸ್ವಾಮಿಯ ಪರ ಉದ್ಗೋಷ ಮೊಳಗಿದವು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ನಗರಸಭೆ ಸದಸ್ಯರು ಹಾಗೂ ಎಲ್ಲ ಕೋಮಿನ ಮುಖಂಡರು,ಯಜಮಾನರು, ವಿವಿಧ ಸಂಘಟನೆಗಳ ಮುಖಂಡರು, ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಗಾಲಿ ಜೋಡಣೆ: ಸಂಜೆ ದೇವಾಲಯದ ಮುಂಭಾಗದಲ್ಲಿ ರಥಕ್ಕೆ ಗಾಲಿಗಳನ್ನು ಜೋಡಿಸಿ, ರಥವನ್ನು ಪ್ರಾಯೋಗಿಕವಾಗಿ ಎಳೆದು ಪರೀಕ್ಷಿಸಲಾಯಿತು.

₹ 1.20 ಕೋಟಿ ವೆಚ್ಚದಲ್ಲಿ ಹೊಸ ರಥ ನಿರ್ಮಿಸಲಾಗಿದ್ದು, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಸವರಾಜ ಎಸ್‌.ಬಡಿಗೇರ್‌ ಅಂಡ್‌ ಸನ್ಸ್‌ ಈ ರಥದ ಶಿಲ್ಪಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.