
ಯಳಂದೂರು: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಮಳೆ ಕಡಲೆ, ತೊಗರಿ ಹಾಗೂ ಹುರುಳಿ ಬೆಳೆಗಳಿಗೆ ಜೀವದಾಯಿಯಾಗಿದೆ. ಉತ್ತಮ ಮಳೆಯಿಂದ ಕಸಬಾ ಮತ್ತು ಅಗರ ಹೋಬಳಿ ಸುತ್ತ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲಾಗಿರುವ ದ್ವಿದಳ ಧಾನ್ಯಗಳ ಬೆಳೆ ತಾಕುಗಳು ನಳನಳಿಸುತ್ತಿವೆ.
ಕಡಲೆ ಬೆಳೆಯಲ್ಲಿ ಚಿಗುರು ತೆಗೆಯುವ ಕಾರ್ಯ ಚುರುಕು ಪಡೆದುಕೊಂಡಿದ್ದು, ರೈತರಲ್ಲಿ ಇಳುವರಿ ಹೆಚ್ಚಾಗುವ ನಿರೀಕ್ಷೆ ಮೂಡಿಸಿದೆ. ‘ಮಳೆಯ ನಂತರ ಕೀಟ ಹಾಗೂ ಎಲೆ ತಿನ್ನುವ ಹುಳುಗಳ ಕಾಟ ನಿಯಂತ್ರಣ ಸವಾಲಾಗಿದೆ’ ಎನ್ನುತ್ತಾರೆ ರೈತರು.
ಹೊನ್ನೂರು, ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬೆಳೆಯನ್ನು ಬಿತ್ತನೆ ಮಾಡಕಾಗಿದೆ. ಕೆಲವೆಡೆ ಕಡಲೆ ಹೂವು ಅರಳಿದ್ದರೆ, ಕಾಡಂಚಿನ ತಾಕಿನಲ್ಲಿ ಕುಡಿ (ಚಿಗುರು) ತೆಗೆಯುವ ಕಾಯಕ ಆರಂಭವಾಗಿದೆ. ಹಿಂಗಾರು ಅವಧಿಯಲ್ಲಿ ಕಡಲೆ, ಸೂರ್ಯಕಾಂತಿ, ಅವರೆ ಬಿತ್ತನೆ ಮಾಡುತ್ತಿದ್ದ ಸಾಗುವಳಿದಾರರು ಈ ಬಾರಿ ಕಡಲೆ ಬಿತ್ತನೆಯತ್ತ ಹೆಚ್ಚು ಒಲವು ತೋರಿದ್ದಾರೆ.
ಮಾರುಕಟ್ಟೆಯಲ್ಲಿ ಕಾಳುಗಳಿಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿರುವುದು ರೈತರು ಕಡಲೆ ಬಿತ್ತನೆಯತ್ತ ಒಲವು ತೋರಲು ಕಾರಣ ಎನ್ನುತ್ತಾರೆ ಬೆಳೆಗಾರರು. ಸಕಾಲದಲ್ಲಿ ಸುರಿದ ಮಳೆಯಿಂದ ಬೀಜ ಮೊಳಕೆ ಒಡೆಯುವ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚಾಗಿರುವುದು ಸಾಗುವಳಿದಾರರಲ್ಲಿ ಉತ್ತಮ ಇಳುವರಿಯ ನಿರೀಕ್ಷೆ ಮೂಡಿಸಿದೆ.
‘ಪ್ರತಿ ಎಕೆರೆಗೆ 20 ರಿಂದ 25 ಕೆ.ಜಿ. ‘ಜಾಕಿ’ ತಳಿಯ ಕಡಲೆ ಬೀಜ ಬಿತ್ತನೆ ಮಾಡಿಲಾಗಿದೆ. ಕೃಷಿ ಇಲಾಖೆ ಶೇ 50 ರಿಯಾಯಿತಿ ದರದಲ್ಲಿ ಬೀಜಗಳನ್ನು ನೀಡಿದ್ದು, 20 ಕೆ.ಜಿ. ಬ್ಯಾಗ್ ಒಂದಕ್ಕೆ ₹ 1,160 ಬೆಲೆಯಲ್ಲಿ ದೊರಕಿದೆ. 90 ದಿನಗಳಲ್ಲಿ ಕೊಯಿಲಿಗೆ ಬರುವ ತಳಿಯನ್ನು ಬಿತ್ತನೆ ಮಾಡಲಾಗಿದೆ. ಗೊಬ್ಬರ ಮತ್ತು ಕೀಟ ನಾಶಕಗಳಿಗೆ ಎಕರೆಗೆ ₹4,000 ಖರ್ಚು ತಗುಲಲಿದ್ದು, ಗುಣಮಟ್ಟದ ಫಸಲು ಬಂದರೆ 6 ಕ್ವಿಂಟಲ್ ಕಡಲೆ ಕೈಸೇರಲಿದೆ. ಹೊನ್ನೂರು ಸುತ್ತ 100 ಎಕರೆ ಕಡಲೆ ಫಸಲು ಹಸಿರಿನಿಂದ ನಳನಳಿಸಿದೆ’ ಎಂದು ಹೊನ್ನೂರು ಕಡಲೆ ಕೃಷಿಕ ಬಸವಣ್ಣ ಮತ್ತು ಮಂಜು ತಿಳಿಸಿದರು.
‘ನವೆಂಬರ್ ಅಂತ್ಯದಲ್ಲಿ ಚಳಿಯೂ ಹೆಚ್ಚಿರುತ್ತದೆ. ಇಬ್ಬನಿಯೂ ನಿರಂತರವಾಗಿ ಬೀಳಲಿದೆ. ಡಿಸೆಂಬರ್‌ನಲ್ಲಿ ಬೆಳೆಗಳ ಬೆಳವಣಿಗೆ ವೇಗ ಹೆಚ್ಚಾಗಲಿದೆ. ಹಾಗಾಗಿ ಮಳೆ ಮತ್ತು ನೀರಾವರಿಗೆ ಈರುಳ್ಳಿ, ಕಲ್ಲಂಗಡಿ ಬಿತ್ತನೆ ಮಾಡಿದ್ದ ಬಹುತೇಕ ರೈತರು ಈ ಸಲ ಎರಡನೆ ಬೆಳೆಯಾಗಿ ಕಡಲೆ ಬಿತ್ತನೆ ಮಾಡಿದ್ದಾರೆ’ ಎಂದು ರೈತ ಅಗರ ಸುಬ್ಬಪ್ಪ ಹೇಳಿದರು.
‘ರೋಗ ನಿಯಂತ್ರಣ ಎಚ್ಚರ ವಹಿಸಿ’ ‘ಹಿಂಗಾರು ಹಂಗಾಮಿನಲ್ಲಿ ಸುರಿದ ಮಳೆಗೆ ಕಡಲೆ ಮತ್ತು ತೊಗರಿ ಫಸಲು ಸಮೃದ್ಧವಾಗಿ ಅರಳಿದೆ. ಇದೇ ಸಮಯ ಕಡಲೆ ಸಸಿಯಲ್ಲಿ ಚಿಗುರು ತೆಗೆದ ನಂತರ ಬೆಳೆಗೆ ರೋಗ ತಗುಲದಂತೆ ಬೇಸಾಯಗಾರರು ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಹಸಿರು ಬಣ್ಣದ ಎಲೆ ತಿನ್ನುವ ಹುಳಗಳ ಹಾವಳಿ ಕಂಡುಬರುತ್ತಿದ್ದು ಇದರ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ ಅರ್ಧ ಗ್ರಾಂ (0.5) ಹೆಮಾಮ್ಯಾಕ್ಟಿನ್ ಬೆಂಜೋಯೇಟ್ ಬೆರೆಸಿ ಸಿಂಪಡಣೆ ಮಾಡಬೇಕು. ಸೊರಗು ಮತ್ತು ಅಂಗಮಾರಿ ರೋಗ ಲಕ್ಷಣ ಕಂಡುಬಂದರೆ ಔಷಧೋಪಚಾರ ಕೈಗೊಳ್ಳಬೇಕು. ಪ್ರಖರ ಬಿಸಿಲಿನಲ್ಲಿ ಔಷಧಿ ಸಿಂಪಡಣೆ ಮಾಡಿದರೆ ಗಿಡಗಳಲ್ಲಿ ಇರುವ ಹುಳುಗಳು ನಾಶವಾಗುತ್ತವೆ’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.