ADVERTISEMENT

ಸಮಾಜ ಬೆಳೆಗಲು ಸಾಹಿತ್ಯ ಹಣತೆ ಹಚ್ಚಿದ ಜಿಎಸ್‌ಎಸ್‌: ಮೊರಬದ ಮಲ್ಲಿಕಾರ್ಜುನ

ಜಿ.ಎಸ್‌.ಶಿವರುದ್ರಪ್ಪ ಅವರ ಜನ್ಮಶತಮಾನೋತ್ಸವದಲ್ಲಿ ಪ್ರೊ ಮೊರಬದ ಮಲ್ಲಿಕಾರ್ಜುನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:39 IST
Last Updated 28 ಫೆಬ್ರುವರಿ 2026, 7:39 IST
ಡಾ.ಜಿ.ಎಸ್.ಶಿವರುದ್ರಪ್ಪ  ಜನ್ಮ ಶತಮಾನೋತ್ಸವ ಪ್ರಯುಕ್ತ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ.ಜಿ.ಎಸ್.ಎಸ್ ‘ನೆನಪುಗಳ ಹಣತೆ’ ಉಪನ್ಯಾಸದಲ್ಲಿ ಮೈಸೂರಿನ ಜೆ.ಎಸ್.ಎಸ್. ವಿದ್ಯಾಪೀಠದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿದರು 
ಡಾ.ಜಿ.ಎಸ್.ಶಿವರುದ್ರಪ್ಪ  ಜನ್ಮ ಶತಮಾನೋತ್ಸವ ಪ್ರಯುಕ್ತ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ.ಜಿ.ಎಸ್.ಎಸ್ ‘ನೆನಪುಗಳ ಹಣತೆ’ ಉಪನ್ಯಾಸದಲ್ಲಿ ಮೈಸೂರಿನ ಜೆ.ಎಸ್.ಎಸ್. ವಿದ್ಯಾಪೀಠದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿದರು    

ಚಾಮರಾಜನಗರ: ‘ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ಅವರು ಸಾಹಿತ್ಯ ಕೃಷಿಯ ಮೂಲಕ ಸಮಾಜಕ್ಕೆ ಶಕ್ತಿಮೀರಿ ಬೆಳಕು ಹರಡಲು ಪ್ರಯತ್ನಿಸಿದರು. ಅವರ ಕಾವ್ಯಗಳ ಒಡಲಿನಲ್ಲಿ ಸದಾ ಹಣತೆಯ ಪ್ರತಿಮೆಗಳು ಪ್ರಜ್ವಲಿಸುತ್ತಿದ್ದವು’ ಎಂದು ಮೈಸೂರಿನ ಜೆ.ಎಸ್.ಎಸ್. ವಿದ್ಯಾಪೀಠದ ನಿರ್ದೇಶಕ ಪ್ರೊ.ಮೊರಬದ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯಿಂದ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ  ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡಾ.ಜಿ.ಎಸ್.ಎಸ್. ನೆನಪುಗಳ ಹಣತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿ.ಎಸ್.ಎಸ್ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದಾಗ ಶಿಕ್ಷಣ ವ್ಯವಸ್ಥೆಯಲ್ಲಿ ಮೌಢ್ಯ ತೊಲಗಿಸಿ, ವೈಚಾರಿಕತೆ ಮೂಡಿಸುವ ಪ್ರಯತ್ನ ಮಾಡಿದರು. ವಿದ್ಯಾರ್ಥಿ ಸಮೂಹವನ್ನು ವೈಚಾರಿಕವಾಗಿ ಮತ್ತು ವೈಜ್ಞಾನಿಕವಾಗಿ ಚಿಂತಿಸುವಂತೆ ಪ್ರೇರೇಪಿಸಿದರು. ಡಾ. ಎಚ್. ನರಸಿಂಹಯ್ಯ ಅವರ ಜೊತೆ ಸಮಾಲೋಚಿಸಿ ವೈಚಾರಿಕ ಕಾರ್ಯಕ್ರಮಗಳನ್ನು ಆಯೋಜಿಸಿದ ಫಲವಾಗಿ ವಿಶ್ವವಿದ್ಯಾಲಯದೊಳಗೆ ಆರೋಗ್ಯ ಪೂರ್ಣ ವಾತಾವರಣ ಸೃಷ್ಟಿಯಾಯಿತು. ಅವರ ಅವಧಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ನಾಡಿನಾದ್ಯಂತ ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಪರಿಸರಿಸುವ ಕೆಲಸ ಮಾಡಿದರು’ ಎಂದರು.

ADVERTISEMENT

‘ಜಿ.ಎಸ್.ಎಸ್. ಅವರು ಕುವೆಂಪು ಅವರ ಆಶಯಗಳ ಮುಂದುವರಿದ ಭಾಗವಾಗಿದ್ದರು ಎನ್ನುವುದು ನಿರ್ವಿವಾದ. ಈ ಕಾರಣಗಳಿಗಾಗಿಯೇ ಕುವೆಂಪು ಅವರ ನಂತರ ‘ರಾಷ್ಟ್ರ ಕವಿ’ ಎಂಬ ಬಿರುದಿಗೆ ಪಾತ್ರರಾದರು. ಡಾ.ಜಿ.ಎಸ್.ಎಸ್‌ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಜಿಎಸ್‌ಎಸ್‌ ಆಶಯದ ನಾಡನ್ನು ಎಲ್ಲರೂ ಸೇರಿ ಕಟ್ಟಬೇಕಾಗಿದೆ’ ಎಂದು ಪ್ರೊ.ಮೊರಬದ ಮಲ್ಲಿಕಾರ್ಜುನ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಥಿಯೋಡರ್ ಲೂಥರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಹಾಗೂ ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿದರು. ಸಾಹಿತ್ಯ ಅಕಾಡೆಮಿ ಸದಸ್ಯ ಪ್ರಕಾಶ್‌ರಾಜ್ ಮೇಹು ‘ಚಕೋರ’ ಸಂಸ್ಥೆಯ ಕಾರ್ಯಕ್ರಮಗಳ ಉದ್ದೇಶಗಳನ್ನು ವಿವರಿಸಿದರು. ಜನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಪ್ರೊ.ಎ.ಎಂ.ಶಿವಸ್ವಾಮಿ ಮತ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸಿಂಧು ಜಿಎಸ್ಎಸ್ ಭಾವಗೀತೆಗಳನ್ನು ಹಾಡಿ ಮೆರುಗು ತುಂಬಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.