
ಚಾಮರಾಜನಗರ: ಸಾಮಾಜಿಕ ಜಾಲತಾಣಗಳಲ್ಲಿ ಅಂಬೇಡ್ಕರ್, ಸಂವಿಧಾನ ಹಾಗೂ ದಲಿತ ನಾಯಕರ ಕುರಿತು ಅವಹೇಳನಕಾರಿ ಬರಹ ಪ್ರಕಟಿಸಿರುವ ‘ಗುಲಾಮರ ಅಪ್ಪ’ ಖಾತೆಯ ಅಡ್ಮಿನ್ ಹಾಗೂ ಹಾಗೂ ಜಿಲ್ಲೆಯಲ್ಲಿ ಆತನ ಬರಹಗಳನ್ನು ಹಂಚಿಕೊಳ್ಳುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸಮುದಾಯದ ಮುಖಂಡರು ಒತ್ತಾಯಿಸಿದರು.
ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಮುಖಂಡರ ಕುಂದುಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ಸಿ.ಕೆ.ಮಂಜುನಾಥ್, ‘ಗುಲಾಮರ ಅಪ್ಪ ಫೇಸ್‌ಬುಕ್ ಖಾತೆ ಅಡ್ಮಿನ್ ವಿರುದ್ಧ ಚಾಮರಾಜನಗರದಲ್ಲೂ ಪ್ರಕರಣ ದಾಖಲಾಗಿರುವುದರಿಂದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಬೇಕು. ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ದಲಿತ ಸಮುದಾಯಗಳ ವಿರುದ್ಧ ದ್ವೇಷ ಕಾರುತ್ತಿರುವ ವ್ಯಕ್ತಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ನಕಲಿ ಖಾತೆಗಳನ್ನು ಬ್ಲಾಕ್ ಮಾಡಬೇಕು ಎಂದು ಒತ್ತಾಯಿಸಿದರು.
ಎಸ್‌ಪಿ ಎಂ.ಮುತ್ತುರಾಜ್ ಪ್ರತಿಕ್ರಿಯಿಸಿ ಗುಲಾಮರ ಅಪ್ಪ ಖಾತೆಯ ಅಡ್ಮಿನ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಜಾಲತಾಣಗಳ ಮೇಲೂ ನಿಗಾ ಇರಿಸಲಾಗಿದ್ದು ಅವಹೇಳನಕಾರಿ ಪೋಸ್ಟ್ ಪ್ರಕಟಿಸುವವರ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.
ಮುಖಂಡ ಸಂಘ ಸೇನಾ ಮಾತನಾಡಿ, ಸಂವಿಧಾನ, ಅಂಬೇಡ್ಕರ್ ಹಾಗೂ ದೇಶದ ಭದ್ರತೆಯನ್ನು ಗುರಿಯಾಗಿಸಿಕೊಂಡು ಜಾಲತಾಣಗಳಲ್ಲಿ ಸಂಘಟಿತವಾಗಿ ನಡೆಯುತ್ತಿರುವ ದಾಳಿಯ ಹಿಂದೆ ಮನುವಾದಿಗಳ ಕುಮ್ಮಕ್ಕು ಇದೆ. ಸಂವಿಧಾನ ವಿರೋಧಿ ಬರಹಗಳನ್ನು ಹಂಚಿಕೊಂಡು ಸಂಭ್ರಮಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಗುಲಾಮರ ಅಪ್ಪ ಖಾತೆಯ ಅಡ್ಮಿನ್‌ಗೆ ಮಂಪರು ಪರೀಕ್ಷೆ ಮಾಡಿದರೆ ಮನುವಾದಿಗಳ ಸಂಚು ಬಯಲಾಗಲಿದೆ ಎಂದರು.
‘ಜ್ಯೋತಿಗೌಡನಪುರದಲ್ಲಿ ಬುದ್ಧ ಹಾಗೂ ಅಂಬೇಡ್ಕರ್ ವಿಗ್ರಹಗಳನ್ನು ಒಡೆದು ಹಾಕಿರುವುದರ ಹಿಂದೆಯೂ ಕೋಮುವಾದಿಗಳ ಕೈವಾಡ ಇದೆ. ಬಂಧಿತ ಆರೋಪಿಯನ್ನೂ ಮಂಪರು ಪರೀಕ್ಷೆಗೊಳಪಡಿಸಬೇಕು, ಜಿಲ್ಲೆಯಲ್ಲಿ ಹಲವೆಡೆ ನಡೆದಿರುವ ಅಂಬೇಡ್ಕರ್ ಪ್ರತಿಮೆಗಳ ಧ್ವಂಸ ಪ್ರಕರಣದಲ್ಲೂ ಮನುವಾದಿಗಳ ಕುತಂತ್ರವಿದ್ದು ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಯಬೇಕು ಎಂದು ಸಂಘಸೇನಾ ಒತ್ತಾಯಿಸಿದರು.
ಎಸ್‌ಪಿ ಮುತ್ತುರಾಜ್ ಪ್ರತಿಕ್ರಿಯಿಸಿ ಅಂಬೇಡ್ಕರ್ ಹಾಗೂ ಬುದ್ಧನ ಪ್ರತಿಮೆ ಧ್ವಂಸ ಪ್ರಕರಣದ ತನಿಖೆಯ ನೇತೃತ್ವವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್ ಅವರಿಗೆ ವಹಿಸಲಾಗಿದ್ದು ವರದಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ದಸಂಸ ರಾಜ್ಯ ಸಂಚಾಲಕ ಸಿದ್ದರಾಜು ದೊಡ್ಡಿಂದುವಾಡಿ ಮಾತನಾಡಿ, ಸುಳ್ವಾಡಿ ಗ್ರಾಮದ ಕಿಚ್‌ಗುತ್ ಮಾರಮ್ಮನ ದೇವಸ್ಥಾನದಲ್ಲಿ 7 ವರ್ಷಗಳ ಹಿಂದೆ ವೈಯಕ್ತಿಕ ಲಾಭಕ್ಕೆ ಪ್ರಸಾದಕ್ಕೆ ವಿಷಬೆರೆಸಿ 17 ಮಂದಿಯನ್ನು ಕೊಂದುಹಾಕಿದ ಪ್ರಕರಣದ ಪ್ರಮುಖ ಆರೋಪಿ ಮಹದೇವ ಸ್ವಾಮಿಗೆ ನ್ಯಾಯಾಲಯ ಜಾಮೀನು ನೀಡಿರುವುದು ಸಂತ್ರಸ್ತರಿಗೆ ಹಾಗೂ ಸಮುದಾಯಕ್ಕೆ ನೋವು ತಂದಿದೆ ಎಂದರು.
ಗಂಭೀರ ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದಿರುವ ಆರೋಪಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಪ್ರಯತ್ನ ಮಾಡಿರುವುದು ಕಾನೂನು ಕಣ್ಣಿಗೆ ಮಣ್ಣೆರಿಚಿದಂತಾಗಿದೆ, ಕೂಡಲೇ ಪೊಲೀಸ್ ಇಲಾಖೆ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಕೊಳ್ಳೇಗಾಲ ಡಿವೈಎಸ್‌ಪಿ ಧರ್ಮೇಂದ್ರ ಮಾತನಾಡಿ ‘ಆರೋಪಿ ಮಹದೇವಸ್ವಾಮಿ ಮಹದೇಶ್ವರ ಬೆಟ್ಟಕ್ಕೆ ತೆರಳದಂತೆ ತಡೆಯಲಾಗಿದೆ. ಜಾಮೀನು ಷರತ್ತುಗಳ ಉಲ್ಲಂಘನೆ ಹಾಗೂ ದುರುಪಯೋಗ ಮಾಡಿಕೊಂಡಿರುವ ಕುರಿತು ವರದಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಹನೂರು ತಾಲ್ಲೂಕಿನ ಭೈರನತ್ತ ಗ್ರಾಮದಲ್ಲಿ ಆದಿಜಾಂಬವ ಜನಾಂಗವರಿಗೆ ಡಿಎಂ ಸಮುದ್ರದ ಸರ್ವೆ ನಂಬರ್ 75ರಲ್ಲಿ ಸ್ಮಶಾನ ಮಂಜೂರಾಗಿದ್ದು ಸ್ಮಶಾನಕ್ಕೆ ಅಡ್ಡಲಾಗಿರುವ ಸವರ್ಣೀಯೊಬ್ಬರು ರಸ್ತೆ ಬಿಡದೆ ತೊಂದರೆ ಕೊಡುತ್ತಿದ್ದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸುಳ್ವಾಡಿ ವಿಷಪ್ರಸಾದ ದುರಂತದಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬಗಳಿಗೆ ಇದುವರೆಗೂ ನಿವೇಶನ, ಭೂಮಿ ಹಾಗೂ ಸರ್ಕಾರದ ಸೌಲಭ್ಯಗಳು ಸಿಕ್ಕಿಲ್ಲ. ಮಾರ್ಟಳ್ಳಿ ಗ್ರಾಮ ಪಂಚಾಯಿತಿಯಾಗಲಿ, ಹನೂರು ತಾಲ್ಲೂಕು ಆಡಳಿತವಾಗಲಿಗೆ ಸ್ಪಂದಿಸುತ್ತಿಲ್ಲ ಎಂದು ದೊಡ್ಡಿಂದವಾಡಿ ಸಿದ್ದರಾಜು ದೂರಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಮಾತನಾಡಿ, ‘ಸುಳ್ವಾಡಿ ವಿಷಪ್ರಾಷನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಿವೇಶನ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ, ಮೃತಪಟ್ಟ 10 ಮಂದಿ ಪರಿಶಿಷ್ಟ ಜಾತಿ, ವರ್ಗದವರ ಕುಟುಂಬಗಳ 6 ಸದಸ್ಯರಿಗೆ ಉದ್ಯೋಗ ನೀಡಲಾಗಿದೆ. ಹಲವು ಕಾರಣಗಳಿಗೆ ತಿರಸ್ಕೃತಗೊಂಡಿದ್ದ 4 ಅರ್ಜಿಗಳನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅರ್ಹರಿಗೆ ನಿವೇಶನ, ವಸತಿ ವ್ಯವಸ್ಥೆ ನೀಡಲಾಗುವುದು ಎಂದರು.
ಉದ್ಯಾನದ ಬಳಿ ಪುಂಡರ ಹಾವಳಿ
ನಗರದ ಹಳೆಯ ಹೌಸಿಂಗ್ ಬೋರ್ಡ್ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದ ಬಳಿ ಪುಂಡರ ಹಾವಳಿ ಹೆಚ್ಚಾಗಿದ್ದು ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಉದ್ಯಾನದಲ್ಲಿ ಅಂಬೇಡ್ಕರ್ ಪ್ರತಿಮೆ ಇದ್ದು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಭಾನುಪ್ರಕಾಶ್ ದೂರಿದರು. ಎಸ್‌ಪಿ ಮುತ್ತುರಾಜ್ ಪ್ರತಿಕ್ರಿಯಿಸಿ ಓರ್ವ ಹೋಂ ಗಾರ್ಡ್ಸ್ ಅಥವಾ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಿ ಗಸ್ತು ಹೆಚ್ಚಿಸಬೇಕು ಎಂದು ನಗರ ಠಾಣೆ ಇನ್‌ಸ್ಪೆಕ್ಟರ್‌ಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.