ADVERTISEMENT

ಗುಂಡಾಲ್‌ ನಾಲೆ ಉಕ್ಕಿ 650 ಎಕರೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 20:05 IST
Last Updated 29 ಸೆಪ್ಟೆಂಬರ್ 2018, 20:05 IST
ಮಧುವನಹಳ್ಳಿ ಗ್ರಾಮದ ಜಮೀನುಗಳು ಜಲಾವೃತಗೊಂಡಿವೆ
ಮಧುವನಹಳ್ಳಿ ಗ್ರಾಮದ ಜಮೀನುಗಳು ಜಲಾವೃತಗೊಂಡಿವೆ   

ಕೊಳ್ಳೇಗಾಲ: ಕಬಿನಿ ಜಲಾಶಯದಿಂದ ಗುಂಡಾಲ್‌ ನಾಲೆಗೆ ಬಿಟ್ಟಿದ್ದ ನೀರು ಉಕ್ಕಿ ಹರಿದಿದ್ದರಿಂದ ತಾಲ್ಲೂಕಿನ ಮಧುವನಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳ ಸುಮಾರು 650ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಬಿನಿ ಜಲಾಶಯದಿಂದ ನಾಲೆಗೆ ಹೆಚ್ಚುವರಿಯಾಗಿ ನೀರು ಹರಿಸಲಾಗಿದೆ. ಇದರಿಂದಾಗಿ ನಾಲೆಯು ಉಕ್ಕಿ ಹರಿದಿದೆ.

ಮಧುವನಹಳ್ಳಿ ಗ್ರಾಮದ ಬಳಿ ನಾಲೆಯು ಒಡೆದು ಅಪಾರ ಪ್ರಮಾಣದ ನೀರು ಹರಿಯಿತು.

ADVERTISEMENT

ಮಧುವನಹಳ್ಳಿ, ಗುಂಡೇಗಾಲ, ಸಿದ್ದಯ್ಯನಪುರ ಹಾಗೂ ಅರವರನಪುರ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.

ಈ ಭಾಗದಲ್ಲಿ ಒಂದು ವಾರದ ಹಿಂದೆ ಭತ್ತದ ಪೈರು ನಾಟಿ ಮಾಡಲಾಗಿತ್ತು. ಕಬ್ಬು, ರಾಗಿ, ಜೋಳ, ಬಾಳೆ ಬೆಳೆಗಳಿಗೂ ನೀರು ನುಗ್ಗಿದೆ. ತೋಟದ ಮನೆಗಳೂ ಮುಳುಗಡೆಯಾಗಿವೆ.

ರಸ್ತೆಗಳು ಜಲಾವೃತ: ಜಮೀನುಗಳಿಗೆ ಹೋಗುವ ಸಣ್ಣಪುಟ್ಟ ರಸ್ತೆಗಳು ಸಂಪೂರ್ಣ ಮುಳುಗಡೆಯಾಗಿವೆ. ಇದರಿಂದ ರೈತರು ಓಡಾಡಲು ಪರದಾಡಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಲೆಯ ನೀರು ಉಕ್ಕಿ ಹರಿದಿದೆ. ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು ರೈತರು ಆಗ್ರಹಿಸಿದ್ದಾರೆ.

**

ಗುಂಡಾಲ್‌ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ತೆಗೆದಿರಲಿಲ್ಲ. ನಾಲೆಯ ಸಾಮರ್ಥ್ಯವನ್ನು ನೋಡದೆ ನೀರು ಹರಿಸಿದ್ದೇ ಜಲಾವೃತಕ್ಕೆ ಕಾರಣ.
–ಮಹದೇವ ಪ್ರಸಾದ್, ರೈತ, ಮಧುವನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.